More

    ಖಾಸಗಿ ವಾಹನ ದುಡಿಮೆ ಅವಲಂಬಿತರ ನೆರವಿಗೆ ಬನ್ನಿ

    ಹಾನಗಲ್ಲ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಖಾಸಗಿ ವಾಹನಗಳ ಮಾಲೀಕರು, ಚಾಲಕರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವಂತೆ ಆಗ್ರಹಿಸಿ ಖಾಸಗಿ ವಾಹನಗಳ ಮಾಲೀಕರು, ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಅರ್ಪಿಸಿದರು.

    ಪಟ್ಟಣದ ಕುಮಾರೇಶ್ವರ ಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಖಾಸಗಿ ವಾಹನಗಳ ಮಾಲೀಕರು, ಚಾಲಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನಗಳ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರುವಂತಾಗಿದೆ. ದಿನವಿಡೀ ಕಾಯ್ದರೂ ನಮ್ಮ ವಾಹನಗಳಿಗೆ ಬಾಡಿಗೆ ಸಿಗದಂತಾಗಿದೆ. ವಾಹನ ಖರೀದಿಗೆ ಮಾಡಿದ ಸಾಲದ ಮರುಪಾವತಿಗೂ ಸಮಸ್ಯೆ ಎದುರಾಗಿದೆ. ಆಟೋಗಳಿಗೂ ಜನರು ಓಡಾಡದಂತಾಗಿದೆ. ಟೆಂಪೋಗಳಿಗೂ ಪ್ರಯಾಣಿಕರು ಹತ್ತುತ್ತಿಲ್ಲ. ಹಾವೇರಿ, ಹುಬ್ಬಳ್ಳಿ, ಬಂಕಾಪುರ, ತಿಳವಳ್ಳಿ, ಆನವಟ್ಟಿ, ಪಾಳಾ, ಮುಂಡಗೋಡ ಮತ್ತಿತರ ಪ್ರದೇಶಗಳಿಗೆ ಪ್ರತಿನಿತ್ಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನಗಳು ಖಾಲಿ ನಿಂತುಕೊಳ್ಳುವಂತಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಮುಂತಾದ ವೆಚ್ಚಗಳನ್ನು ನಿರ್ವಹಿಸುವುದು ಸಾಧ್ಯವಾಗದೇ ಜೀವನ ದುರ್ಭರಗೊಳಿಸಿದೆ ಎಂದು ಮನವಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಸರ್ಕಾರ ಸ್ತ್ರೀ-ಶಕ್ತಿ ಸಂಘಗಳು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವಂತೆ ಖಾಸಗಿ ವಾಹನಗಳವರಿಗೂ ಸಾಲ ಸೌಲಭ್ಯ ಒದಗಿಸಿದರೆ ಆರ್ಥಿಕ ಸಮಸ್ಯೆಗಳಿಂದ ಮುಕ್ತವಾಗಬಹುದಾಗಿದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂಥ ಯೋಜನೆ ಜಾರಿಗೊಳಿಸಬೇಕು. ಚಾಲಕರು ವಾಹನ ಚಾಲನಾ ಸಂದರ್ಭದಲ್ಲಿ ಅಪಘಾತವಾಗಿ ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಸರ್ಕಾರ ವಾಹನಗಳಿಗೆ ನಿಗದಿಪಡಿಸಿದ ತೆರಿಗೆ ರದ್ದುಪಡಿಸಬೇಕು. ಎಲ್ಲ ಚಾಲಕರಿಗೂ ಸರ್ಕಾರ ಜೀವ ವಿಮೆ ಯೋಜನೆ ಒದಗಿಸಬೇಕು. ಚಾಲಕರ ಮಕ್ಕಳಿಗೂ ಉಚಿತ ಶಿಕ್ಷಣ ನೀಡಬೇಕು. ಪ್ರಯಾಣಿಕರ ಸಾಗಾಟದ ಸ್ಥಳೀಯ ವಾಹನಗಳಿಗೆ ನಿಲುಗಡೆಗೆ ಸ್ಥಳ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಕುಮಾರೇಶ್ವರ ಚಾಲಕರು, ಮಾಲೀಕರ ಸಂಘದ ಗೌರವಾಧ್ಯಕ್ಷ ಸಂಜೀವ ಗೌಡಗೇರಿ, ಅಧ್ಯಕ್ಷ ಮಹೇಶ ಸಾತ್ಪತಿ, ಕರ್ನಾಟಕ ರಾಜ್ಯ ಚಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷ ಚಂದ್ರು ಮಲಗುಂದ, ಶಂಭು ಲೆಕ್ಕದ, ದಶರಥ ಸಂಕಪಾಳೆ, ಕುಮಾರ ಸಿಂಧೂರ, ಶಂಕ್ರಯ್ಯ ಕಟ್ಟಿಮಠ, ಪರಶುರಾಮ ಮಾನೆ, ಪರಶುರಾಮ ಹರಿಜನ, ವಿಶಾಲ ಬಾಬಜಿ, ಮಂಜು ಈಳಿಗೇರ, ವೀರೇಶ ಉಜ್ಜಪ್ಪನವರ, ಭರಮಣ್ಣ ಹೊಸೂರ, ಪ್ರವೀಣ ಸುಲಾಖೆ, ರಾಯಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts