More

    ಪುರಸಿದ್ಧೇಶ್ವರ ದೇವಸ್ಥಾನದಲ್ಲಿ ನಾಗರ ಹಾವು ಪ್ರತ್ಯಕ್ಷ

    ಹಾವೇರಿ: ನಾಗರಪಂಚಮಿ ಹಬ್ಬದ ದಿನವೇ ನಗರದ ಪುರಸಿದ್ಧೇಶ್ವರ ದೇವಸ್ಥಾನದಲ್ಲಿ ನಾಗರಹಾವು ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿತು. ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ದೇವಸ್ಥಾನದಲ್ಲಿರುವ ಶಿವಲಿಂಗ ಮೂರ್ತಿಗೆ ಪೂಜೆ ಸಲ್ಲಿಸಲು ಭಕ್ತಾದಿಗಳು ಆಗಮಿಸಿದ್ದರು. ಈ ವೇಳೆ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗ ಮೂರ್ತಿ ಮೇಲೆ ನಾಗರಹಾವು ಭಕ್ತರಿಗೆ ದರ್ಶನ ನೀಡಿತು. ದೇವಸ್ಥಾನದಲ್ಲಿ ಹಾವು ಪ್ರತ್ಯಕ್ಷಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ದಂಡೇ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಪುನೀತರಾದರು.

    ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಜಿಲ್ಲಾದ್ಯಂತ ಸೋಮವಾರ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

    ನಗರದ ವಿವಿಧ ದೇವಸ್ಥಾನ, ಅರಳಿಕಟ್ಟೆ, ಬನ್ನಿಮರ, ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗ ದೇವತೆಗೆ ಹಾಲೆರೆದರು. ನಾಗರ ಪಂಚಮಿ ನಿಮಿತ್ತ ದೇವರಿಗೆ ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟಿನ ಉಂಡಿ, ಎಳ್ಳು ಉಂಡಿ, ಜೋಳದ ಅರಳು, ನೆನೆಸಿದ ಕಡಲೆ ಮೊದಲಾದ ಖಾದ್ಯಗಳನ್ನು ತಯಾರಿಸಿ ನೇವೈದ್ಯ ಮಾಡಿದರು.

    ಮಕ್ಕಳು ಕೊಬ್ಬರಿ ಬಟ್ಟಲು ತಿರುಗಿಸುವ ಆಟ ಹಾಗೂ ಜೋಕಾಲಿ ಆಡಿ ಸಂಭ್ರಮಿಸಿದರು. ಹೆಣ್ಣು ಮಕ್ಕಳ ಹಬ್ಬ ಎಂದು ಕರೆಸಿಕೊಳ್ಳುವ ಈ ಹಬ್ಬದಲ್ಲಿ ಹೊಸಬಟ್ಟೆಯುಟ್ಟ ಹೆಣ್ಣು ಮಕ್ಕಳ ಸಂಭ್ರಮದ ಓಡಾಟ ಎಲ್ಲೆಡೆ ಕಂಡು ಬಂದಿತು. ಕೆಲ ಗ್ರಾಮದ ದೊಡ್ಡ ಗಿಡಗಳಿಗೆ ಬೃಹತ್ ಗಾತ್ರದ ಜೋಕಾಲಿ ಕಟ್ಟಿ, ಜೋಕಾಲಿ ಜೀಕುವುದರ ಜತೆಗೆ ಕೆಲ ಕಸರತ್ತಿನ ಆಟಗಳನ್ನು ಸಹ ಆಡಲಾಯಿತು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ಹಬ್ಬ ಆಚರಿಸಿದರೆ, ಕೆಲ ಭಾಗದಲ್ಲಿ ಮಂಗಳವಾರ ಹಬ್ಬವನ್ನು ಆಚರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts