More

    ಒಕ್ಕಣೆ ಕಣಗಳಾದ ರಸ್ತೆಗಳು

    ಕೆ.ಆರ್.ನಗರ: ಭತ್ತದ ಕಣಜ ಖ್ಯಾತಿಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಮುಖ್ಯ ರಸ್ತೆಗಳು ರೈತರು ಬೆಳೆದ ಬೆಳೆಗಳನ್ನು ಹದ ಮತ್ತು ಒಕ್ಕಣೆ ಮಾಡುವ ಕಣಗಳಾಗಿ ಮಾರ್ಪಟ್ಟಿವೆ. ಇದರಿಂದ ರಸ್ತೆ ಸಂಚಾರ ದುಸ್ತರವಾಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ರೈತರು ಈ ಹಿಂದೆ ತಮ್ಮ ಜಮೀನುಗಳಲ್ಲಿ ಭೂಮಿ ಹದ ಮಾಡಿ ಕಣ ಮಾಡಿಕೊಂಡು ತಾವು ಬೆಳೆದ ಬೆಳೆಗಳನ್ನು ಶೇಖರಿಸಿ ಒಕ್ಕಣೆ ಮಾಡುತ್ತಿದ್ದರು. ಆದರೆ, ಈಗ ಖರ್ಚು ಕಡಿಮೆಯಾಗಿ ಕೆಲಸ ಶೀಘ್ರವಾಗಿ ಆಗಲಿದೆ ಎಂಬ ಉದ್ದೇಶದಿಂದ ತಮ್ಮ ಊರುಗಳ ಬಳಿ, ಜಮೀನುಗಳ ಬಳಿ ಇರುವ ಡಾಂಬರ್ ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡು ರಾಗಿ ಬೆಳೆ, ಭತ್ತದ ಬೆಳೆ ಹಾಗೂ ಹುರುಳಿ ಸೇರಿದಂತೆ ಇನ್ನಿತರ ದವಸ-ಧಾನ್ಯಗಳನ್ನು ರಸ್ತೆ ಮಧ್ಯ ಹರಡುತ್ತಿದ್ದಾರೆ.

    ಈ ರೀತಿ ರಸ್ತೆಗಳನ್ನೇ ಒಕ್ಕಣೆ ಕಣಗಳಾಗಿ ಬಳಸಿಕೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬೆಳೆ ಸಿಕ್ಕಿಕೊಂಡು ಬೆಂಕಿ ಹೊತ್ತಿಕೊಳ್ಳುವುದು, ಕಣ್ಣಿಗೆ ಧೂಳು ತುಂಬಿಕೊಳ್ಳುವುದರಿಂದ ನಿಯಂತ್ರಣ ಕಳೆದುಕೊಂಡು ಸವಾರರು ಕೆಳಗೆ ಬೀಳುವುದು, ವಾಹನ ಮತ್ತು ವಾಹನಗಳ ನಡುವೆ ಅಪಘಾತಗಳು ಸಂಭವಿಸಿ ವಾಹನ ಸವಾರರು ನಿತ್ಯ ಗಾಯಗೊಳ್ಳುತ್ತಿರುವುದಲ್ಲದೆ, ಹಲವು ಸ್ಥಳದಲ್ಲಿಯೇ ಮೃತಪಟ್ಟಿರುವ ಉದಾರಣೆಗಳು ಕಣ್ಣಮುಂದಿವೆ.

    ಹೀಗಾಗಿಯೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಳೆ ಒಕ್ಕಣೆಗೆ ರಸ್ತೆಗಳನ್ನು ಅವಲಂಬಿಸದಂತೆ ಬುದ್ಧಿ ಹೇಳಿ, ದಂಡ ವಿಧಿಸಿ ಕ್ರಮ ಕೈಗೊಂಡು ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದ್ದು, ಈ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

    ನಿತ್ಯ ಕಿರಿಕಿರಿ
    ಸುಗ್ಗಿ ಸಮಯದಲ್ಲಿ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದೊಂದು ನಿತ್ಯದ ಕಿರಿಕಿರಿ. ಜೀವಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಇರುತ್ತದೆ. ರಸ್ತೆಯಲ್ಲಿ ವಾಹನ ಚಲಾಯಿಸಲು ಕಷ್ಟ ಸಾಧ್ಯ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ನೋವಿನ ಸಂಗತಿಯಾಗಿದೆ.
    ಶೈಲಜಾ ಭಟ್ ದ್ವಿಚಕ್ರ ವಾಹನ ತರಬೇತುದಾರರು

    ವಾಹನ ಸವಾರರಿಗೆ ತೊಂದರೆ
    ರಸ್ತೆಯಲ್ಲಿ ಬೆಳೆ ಒಕ್ಕಣೆ ಮಾಡುವುದರಿಂದ ರಸ್ತೆಯಲ್ಲಿ ಧೂಳು ತುಂಬಿಕೊಳ್ಳುತ್ತದೆ. ವಾಹನಗಳು ತೆರಳುವಾಗ ಅದರ ರಭಸಕ್ಕೆ ಧೂಳು ಮೇಲೆದ್ದು ಹಿಂದೆ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಕಣ್ಣಿಗೆ ಧೂಳು ಬಿದ್ದಾಗ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಗಾಯಗೊಳ್ಳುವುದಲ್ಲದೆ, ಕೆಲ ಬಾರಿ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ.
    ಸುಧಾಕರ್, ಮುಖಂಡ, ಬೀರ‌್ನಹಳ್ಳಿ

    ಜನ ಬುದ್ಧಿ ಕಲಿಯುತ್ತಿಲ್ಲ
    ಕೆಲ ವರ್ಷಗಳ ಹಿಂದೆ ಕೆ.ಆರ್.ನಗರ ಚುಂಚನಕಟ್ಟೆ ಮಾರ್ಗದ ರಸ್ತೆಯ ಡಿ.ಕೆ.ಕೊಪ್ಪಲು ಗೇಟ್ ಬಳಿ ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ರಾಗಿ ಹುಲ್ಲಿನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್ ಚಕ್ರಗಳಿಗೆ ಹುಲ್ಲು ಸುತ್ತಿಕೊಂಡಿತು. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದವರೆಲ್ಲ ಸ್ಥಳದಲ್ಲೇ ಮೃತಪಟ್ಟ ಘಟನೆ ನಮ್ಮ ಕಣ್ಣೆದುರಿಗೆ ಇದೆ. ಆದರೂ ಜನ ಬುದ್ಧಿ ಕಲಿಯುತ್ತಿಲ್ಲ.
    ಬಿ.ಎಚ್.ಕುಮಾರ, ಮುಖಂಡ, ಬ್ಯಾಡರಹಳ್ಳಿ

    ಜೀವದ ಜತೆ ಚೆಲ್ಲಾಟ ಸರಿಯಲ್ಲ
    ಸರ್ಕಾರ ರೈತರಿಗೆ ತಮ್ಮ ಬೆಳೆ ಒಕ್ಕಣೆ ಮಾಡಲು ಗ್ರಾಮದ ಬಳಿ ಕಣಗಳನ್ನು ನಿರ್ಮಿಸಿಕೊಟ್ಟಿದೆ. ರೈತರು ತಮ್ಮ ಬೆಳೆಗಳನ್ನು ಆ ಸ್ಥಳದಲ್ಲಿಯೇ ಒಕ್ಕಣೆ ಮಾಡಿ ಶೇಖರಿಸಿಕೊಳ್ಳಬೇಕು. ಅದನ್ನು ಬಿಟ್ಟು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಾ ವಾಹನ ಸವಾರರ ಜೀವದ ಜತೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ಸ್ವಯಂ ಪ್ರೇರಿತರಾಗಿ ಎಚ್ಚೆತ್ತುಕೊಂಡಾಗ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯ.
    ಎಚ್.ವಿ.ಪುನೀತ್‌ರಾಜ್ ಹೆಬ್ಬಾಳು

    ಸಮಸ್ಯೆ ಬಾರದಂತೆ ಎಚ್ಚರವಹಿಸಿ
    ರಸ್ತೆ ಬದಿಗಳಲ್ಲಿ ಒಕ್ಕಣೆ ಮಾಡುವುದನ್ನು ನಿತ್ಯ ಆ ರಸ್ತೆಗಳಲ್ಲಿ ಸಂಚರಿಸುವ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನೋಡಿದರೂ ಕ್ರಮ ಕೈಗೊಳ್ಳದೆ ಇರುವುದು ಅವರ ನಿರ್ಲಕ್ಷೃ ಧೋರಣೆ ತೋರುತ್ತದೆ. ಸಮಸ್ಯೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಅದಕ್ಕಿಂತ ಮೊದಲೇ ಸಮಸ್ಯೆ ಬಾರದಂತೆ ಎಚ್ಚರ ವಹಿಸುವ ಅಗತ್ಯವಿದೆ.
    ಚಂದ್ರಶೇಖರ್ ತಾಲೂಕು ಅಧ್ಯಕ್ಷ, ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ

    ಕಠಿಣ ಕಾನೂನು ಮಾಡಲಿ
    ಇದು ಕೇವಲ ಒಂದು ತಾಲೂಕಿನ ಸಮಸ್ಯೆಯಲ್ಲ. ವರ್ಷದಲ್ಲಿ ಸುಗ್ಗಿಯ ಸಮಯ ಎರಡು, ಮೂರು ತಿಂಗಳು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ತಿಳಿದಿದ್ದರೂ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ತಮ್ಮದಲ್ಲದ ತಪ್ಪಿಗೆ ರಸ್ತೆಗಳಲ್ಲಿ ಸಂಚರಿಸುವವ ತಮ್ಮ ಜೀವ ತೆತ್ತಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕಾನೂನು ಮಾಡಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು.
    ಕೆ.ಎಸ್.ಗುಣಶೇಖರ, ಕಾಂಗ್ರೆಸ್ ಮುಖಂಡ

    ಸುಗ್ಗಿ ವೇಳೆ ಅಪಘಾತ ಹೆಚ್ಚು
    ನಮ್ಮ ಸಾರ್ವಜನಿಕ ಆಸ್ಪತ್ರೆಗೆ ದಿನ ನಾಲ್ಕೈದು ರಸ್ತೆ ಅಪಘಾತಗಳ ಪ್ರಕರಣಗಳು ಬರುತ್ತಲೇ ಇರುತ್ತವೆ. ಈ ಸಮಯದಲ್ಲಿ ಸ್ವಲ್ಪ ಹೆಚ್ಚಾಗುತ್ತವೆ. ರಸ್ತೆಗಳು ಇರುವುದು ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಮಾತ್ರ. ಅದರಲ್ಲಿ ಬೆಳೆ ಒಕ್ಕಣೆ ಮಾಡುವುದು ತಪ್ಪು. ಅದಕ್ಕೆ ಸ್ಥಳ ಬೇರೆ ಕಡೆ ಮಾಡಿಕೊಳ್ಳಬೇಕು.
    ಡಾ.ನವೀನ್‌ಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ, ಕೆ.ಆರ್.ನಗರ

    ಅರಿವು ಮೂಡಿಸಲಾಗುವುದು
    ಇಂತಹ ಸಮಸ್ಯೆಗಳು ಎಲ್ಲೆಡೆ ಇದ್ದು, ನಾವು ಎಷ್ಟೇ ಬುದ್ಧಿ ಹೇಳಿದರೂ ಪದೇಪದೆ ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ನಿತ್ಯ ಅಪಘಾತ ಸಂಭವಿಸುತ್ತಿವೆ. ಇದು ಕಾನೂನು ವಿರುದ್ಧವಾಗಿದ್ದು, ಈಗಾಗಲೇ ನಾವು ಹಲವರಿಗೆ ದಂಡ ವಿಧಿಸಿದ್ದೇವೆ. ಆದರೂ ನಿಂತಿಲ್ಲ. ಈ ಬಗ್ಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ಜತೆಗೆ ಅರಿವು ಮೂಡಿಸಲಾಗುವುದು.
    ಪಿ.ಪಿ.ಸಂತೋಷ್, ಸಿಪಿಐ, ಕೆ.ಆರ್.ನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts