More

    ಕರಾವಳಿ 50ರಷ್ಟು ಹೋಟೆಲ್ ಬಂದ್

    – ಹರೀಶ್ ಮೋಟುಕಾನ ಮಂಗಳೂರು

    ಕರೊನಾ ಲಾಕ್‌ಡೌನ್ ಸಂದರ್ಭ ಬಂದ್ ಆಗಿದ್ದ ಹೋಟೆಲ್‌ಗಳು ಲಾಕ್‌ಡೌನ್ ತೆರವಾದ ಬಳಿಕ ಬಾಗಿಲು ತೆರೆದಿದ್ದರೂ ವ್ಯಾಪಾರ ಚೇತರಿಸಿಕೊಂಡಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ 50ಕ್ಕೂ ಅಧಿಕ ಹೋಟೆಲ್‌ಗಳು, ಲಾಡ್ಜ್‌ಗಳು ಪೂರ್ಣ ಬಂದ್ ಆಗಿವೆ.

    ಕರೊನಾ ಹರಡುವುದು ಕಡಿಮೆಯಾಗದ ಕಾರಣ ಹೋಟೆಲ್‌ಗಳಿಗೆ ಹೋಗಲು ಜನ ಈಗಲೂ ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು ಮನೆಯಿಂದಲೇ ಊಟ, ಉಪಾಹಾರ ಕೊಂಡೊಯ್ಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕೆಲವರು ಹೋಟೆಲ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಹೋಟೆಲ್‌ಗಳಲ್ಲಿ ಶೇ.60ರಷ್ಟು ಗ್ರಾಹಕರ ಕೊರತೆ ಎದುರಾಗಿದೆ.

    ಸಮಸ್ಯೆ ಏನು?
    ಹೋಟೆಲ್‌ಗಳ ನಿರ್ವಹಣೆಗೆ ಅಡುಗೆ, ಸಪ್ಲಾಯರ್ಸ್‌, ಕ್ಲೀನಿಂಗ್ ಮೊದಲಾದ ಕೆಲಸಗಾರರು ಅವಶ್ಯ. ಇದರಲ್ಲಿ ತೊಡಗಿಸಿಕೊಂಡಿದ್ದ ಹೊರಜಿಲ್ಲೆಯವರು ಇನ್ನೂ ಮರಳಿಲ್ಲ. ಊರಿನವರು ಹೋಟೆಲ್ ಕೆಲಸ ಬಿಟ್ಟು ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ಕೆಲಸಗಾರರ ಕೊರತೆ ಎದುರಾಗಿದೆ. ಗ್ರಾಹಕರ ಸಂಖ್ಯೆಯೂ ಕಡಿಮೆ. ಮಾಲೀಕರಿಗೆ ಹೋಟೆಲ್ ನಿರ್ವಹಣೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಬಹುತೇಕ ಹೋಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಬಾಡಿಗೆ ನೀಡುವಷ್ಟು ವ್ಯಾಪಾರವೂ ಆಗದ ಕಾರಣ ಸಂಕಷ್ಟಗೊಳಗಾಗಿದ್ದಾರೆ. ಹಾಗಾಗಿ ಹಲವು ಹೋಟೆಲ್‌ಗಳು ಲಾಕ್‌ಡೌನ್ ಬಳಿಕ ಬಾಗಿಲು ತೆರೆಯಲೇ ಇಲ್ಲ.
    ಮಂಗಳೂರಿನಲ್ಲಿ ಹಲವು ವರ್ಷಗಳ ಇತಿಹಾಸವಿರುವ, ಉತ್ತಮ ವ್ಯಾಪಾರ ಹೊಂದಿದ್ದ ಪಿವಿಎಸ್ ಬಳಿಯ ಜನಪ್ರಿಯ ಹೋಟೆಲ್ ಇನ್ನೂ ತೆರೆದಿಲ್ಲ. ಇಲ್ಲಿನ ಮಾನಸ ಟವರ್‌ನಲ್ಲಿದ್ದ ಎರಡು ಹೋಟೆಲ್, ಒಂದು ಜ್ಯೂಸ್ ಸೆಂಟರ್ ಸಂಪೂರ್ಣ ಬಂದ್ ಆಗಿದೆ. ಮಂಗಳೂರು, ಉಡುಪಿಯಲ್ಲಿ ಮೀನು ಊಟದ ಸಣ್ಣ ಹೋಟೆಲ್‌ಗಳು ಬಹಳಷ್ಟಿದ್ದು, ಗ್ರಾಹಕರ ಕೊರತೆಯಿಂದ ಹಲವು ಸ್ಥಗಿತಗೊಂಡಿವೆ. ಕೆಲವು ಹೋಟೆಲ್‌ಗಳು ಲಾಕ್‌ಡೌನ್ ಬಳಿಕ ಆರಂಭಗೊಂಡಿದ್ದರೂ, ನಿರ್ವಹಣೆ ಸಾಧ್ಯವಾಗದೆ ಮತ್ತೆ ಬಾಗಿಲು ಹಾಕ ಬೇಕಾಯಿತು. ಸ್ಟಾರ್ ಹೋಟೆಲ್‌ಗಳ ವಹಿವಾಟು ಶೇ.40ರಷ್ಟು ಮಾತ್ರ ಚೇತರಿಕೆಯಾಗಿದೆ. ಪ್ರವಾಸಿಗಳು, ಗಣ್ಯರ ಭೇಟಿ ಕಡಿಮೆಯಾಗಿರುವುದೂ ಇದಕ್ಕೆ ಕಾರಣ.

    ಉಡುಪಿ ಜಿಲ್ಲೆಯಲ್ಲಿ ಶೇ.10ರಷ್ಟು ಹೋಟೆಲ್, ಲಾಡ್ಜ್‌ಗಳು ಬಂದ್ ಆಗಿವೆ. ಲಾಕ್‌ಡೌನ್ ತೆರವು ಬಳಿಕ ಹೋಟೆಲ್ ಉದ್ಯಮ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆಯಾಗಿಲ್ಲ. ವ್ಯಾಪಾರ ಇಲ್ಲದ ಕಾರಣ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಸೆ.1ರಿಂದ ಆರಂಭಗೊಂಡಿದ್ದು, ಇದರ ಮಾಲೀಕರು ಹೊಸ ನಿರೀಕ್ಷೆಯೊಂದಿಗೆ ವ್ಯಾಪಾರ ಆರಂಭಿಸಿದ್ದಾರೆ.
    -ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಉಡುಪಿ

    ವಿಮಾನ, ರೈಲ್ವೆ, ಶಾಲೆ, ಕಾಲೇಜುಗಳು ಇನ್ನೂ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಟೂರಿಸ್ಟ್‌ಗಳ ಸಂಖ್ಯೆ ಕಡಿಮೆ ಇದೆ. ಇವೆಲ್ಲವೂ ಆರಂಭಗೊಂಡ ಬಳಿಕವಷ್ಟೇ ಹೋಟೆಲ್ ಉದ್ಯಮ ಒಂದಷ್ಟು ಚೇತರಿಕೆಯಾಗಲು ಸಾಧ್ಯ. ಈ ವರ್ಷಾಂತ್ಯದ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
    -ಕುಡ್ಪಿ ಜಗದೀಶ್ ಶೆಣೈ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts