More

    ಕುಡ್ಲದಲ್ಲಿ ಸಿಎನ್‌ಜಿಗೆ ಡಿಮಾಂಡ್: ಬೇಡಿಕೆಯಷ್ಟು ಸಿಗುತ್ತಿಲ್ಲ ಸಂಕುಚಿತ ನೈಸರ್ಗಿಕ ಅನಿಲ

    ಹರೀಶ್ ಮೊಟುಕಾನ, ಮಂಗಳೂರು
    ಪೆಟ್ರೋಲ್ ಬೆಲೆ ಲೀಟರ್‌ಗೆ ನೂರು ರೂ. ಗಡಿ ದಾಟಿರುವುದರಿಂದ ತತ್ತರಿಸಿರುವ ಜನತೆ, ತಮ್ಮ ವಾಹನಗಳಿಗೆ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್‌ಜಿ) ಬಳಕೆ ಮಾಡಲು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಆದರೆ, ಮಂಗಳೂರಿನಲ್ಲಿ ಸಿಎನ್‌ಜಿ ಸಂಗ್ರಹ ಸ್ಥಾವರ ನಿರ್ಮಾಣ ಇನ್ನೂ ಪೂರ್ಣಗೊಳ್ಳದೆ, ಬೇಡಿಕೆಯಷ್ಟು ಸಿಎನ್‌ಜಿ ಸಿಗುತ್ತಿಲ್ಲ.

    ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕಾವೂರು, ಮೂಲ್ಕಿ, ಹೊಸಬೆಟ್ಟು ಹಾಗೂ ಅಡ್ಯಾರ್‌ನಲ್ಲಿ ಪೆಟ್ರೋಲ್ ಬಂಕ್‌ಗಳಿಗಷ್ಟೇ ಸಿಎನ್‌ಜಿ ಸರಬರಾಜಾಗುತ್ತಿದೆ. ಪೆಟ್ರೋಲ್‌ನ ಅರ್ಧ ಬೆಲೆಯಲ್ಲಿ ಅಂದರೆ ಒಂದು ಕೆ.ಜಿ.ಗೆ 55 ರೂ. ದರದಲ್ಲಿ ಪೆಟ್ರೋಲ್‌ಗಿಂತ ಒಂದೂವರೆ ಪಟ್ಟು ಹೆಚ್ಚಿನ ಮೈಲೇಜ್ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಂಗಳೂರಿನಲ್ಲಿ ಬಹುತೇಕ ಮಂದಿ ತಮ್ಮ ವಾಹನಗಳಿಗೆ ಸಿಎನ್‌ಜಿ ಕಿಟ್ ಅಳವಡಿಸುತ್ತಿದ್ದಾರೆ.

    ವಿಶೇಷವಾಗಿ ಗೂಡ್ಸ್ ಲಾರಿಗಳು, ಆಟೋ ರಿಕ್ಷಾ, ಖಾಸಗಿ ಹಾಗೂ ಟೂರಿಸ್ಟ್ ಕಾರುಗಳು ಸೇರಿದಂತೆ ಸುಮಾರು ಎರಡು ಸಾವಿರ ವಾಹನ ಮಾಲೀಕರು ಸಿಎನ್‌ಜಿ ಕಿಟ್‌ಗೆ ಮೊರೆ ಹೋಗಿದ್ದಾರೆ. ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಸಿಎನ್‌ಜಿ ಆವೃತ್ತಿಯ ಕಾರುಗಳನ್ನೂ ಬಿಡುಗಡೆ ಮಾಡಲಾರಂಭಿಸಿವೆ. ಖರೀದಿಸುವವರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡಿದೆ.

    ಬೆಂಗಳೂರಿನಿಂದ ಪೂರೈಕೆ: ಈ ನಾಲ್ಕು ಪಂಪ್‌ಗಳಿಗೆ ಬೆಂಗಳೂರಿನಿಂದ ಎರಡು ಲಘು ವಾಹನದಲ್ಲಿ ಸಿಎನ್‌ಜಿ ಪೂರೈಕೆಯಾಗುತ್ತಿದೆ. ಬೆಂಗಳೂರಿನಿಂದ 360 ಕೆ.ಜಿ. ಸಿಎನ್‌ಜಿ ಹೊತ್ತುತರುವ ವಾಹನಕ್ಕೆ 70 ಕೆ.ಜಿ.ಬೇಕಾಗುತ್ತದೆ. ಗ್ರಾಹಕರಿಗೆ ಸಿಗುವುದು ಉಳಿದ 290 ಕೆ.ಜಿ. ಚಿಕ್ಕಮಗಳೂರು, ಮಡಿಕೇರಿ ಕಡೆಯಿಂದ ತರಕಾರಿ ಹೊತ್ತು ತರುವ ಲಾರಿಗಳು ಸಿಎನ್‌ಜಿ ತುಂಬಿಸಿಕೊಳ್ಳಲು ಪಂಪ್ ಬಳಿ ರಾತ್ರಿಯೇ ಕಾದು ನಿಂತಿರುತ್ತವೆ. ಬೆಳಗ್ಗೆ ಸರದಿಯಲ್ಲಿ ಪ್ರಥಮವಾಗಿ ನಿಂತು 100 ಕೆ.ಜಿ.ತುಂಬಿಸಿಕೊಂಡು ಹೋದರೆ ಬಳಿಕ ಉಳಿದ ಸಿಎನ್‌ಜಿಯನ್ನು 20ರಷ್ಟು ವಾಹನಗಳಿಗಷ್ಟೇ ತುಂಬಿಸಲು ಸಾಧ್ಯವಾಗುತ್ತದೆ ಎಂದು ಬಳಕೆದಾರ ಶ್ರೀನಾಥ್ ರಾವ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿಎನ್‌ಜಿಗೆ ಡಿಮಾಂಡ್ ಯಾಕೆ?: ಸಿಎನ್‌ಜಿ ನೈಸರ್ಗಿಕ ಅನಿಲ. ಪೆಟ್ರೋಲ್/ಡೀಸೆಲ್ ಇಂಧನಗಳಿಗೆ ಹೋಲಿಸಿದರೆ ಮೌಲ್ಯವೂ ಕಡಿಮೆ. ಇಂಜಿನ್‌ಗಳು ಹೆಚ್ಚು ಶಕ್ತಿಶಾಲಿ ಯಾಗಿ ಕೆಲಸ ಮಾಡಲು ಸಹಕಾರಿ. ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್ ಅಥವಾ ಉಂಟಾಗುವ ಮಾಲಿನ್ಯ ಪ್ರಮಾಣವೂ ಕಡಿಮೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಈಗಾಗಲೇ ಸಿಎನ್‌ಜಿಗೆ ಹೆಚ್ಚು ಬೇಡಿಕೆಯಿದೆ.

    ಮಂಗಳೂರು ನಗರದಲ್ಲಿ ಸಿಎನ್‌ಜಿಗೆ ಹೆಚ್ಚಿನ ಬೇಡಿಕೆಯಿದೆ. ಅನಿಲ ಸಂಗ್ರಹ ಸ್ಥಾವರ ಶೀಘ್ರ ಪೂರ್ಣಗೊಂಡು ಬೇಡಿಕೆಗೆ ತಕ್ಕಂತೆ ಗ್ರಾಹಕರಿಗೆ ಸಿಎನ್‌ಜಿ ಸಿಗುವಂತಾಗಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೆಚ್ಚಿನ ಪೆಟ್ರೋಲ್ ಪಂಪ್‌ಗಳಲ್ಲಿ ಸಿಎನ್‌ಜಿ ಸಿಗುವಂತೆ ಮಾಡಬೇಕು. ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಒತ್ತಡ ಹಾಕಬೇಕು.
    ಹೈಕಾಡಿ ಶ್ರೀನಾಥ್ ರಾವ್ ಸಿಎನ್‌ಜಿ ಗ್ರಾಹಕ, ಮಂಗಳೂರು

    ಮಂಗಳೂರು ನಗರದಲ್ಲಿ ಸಿಎನ್‌ಜಿ ಅನಿಲ ಸಂಗ್ರಹ ಸ್ಥಾವರ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲಿ ಈ ಸ್ಥಾವರ ಕಾರ್ಯಾರಂಭ ಮಾಡಲಿದೆ. ಬಳಿಕ ಜಿಲ್ಲೆಯ ಎಲ್ಲ ಪಂಪ್‌ಗಳಿಗೂ ಸಿಎನ್‌ಜಿ ಸಕಾಲದಲ್ಲಿ ನಿರಂತರ ಪೂರೈಕೆಯಾಗಲಿದೆ. ಪ್ರಸ್ತುತ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕೆಲವೊಮ್ಮೆ ಗ್ರಾಹಕರಿಗೆ ಪೂರೈಸಲು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ.
    ಮಂಜೇಶ್ ಮುಖ್ಯ ಪ್ರಬಂಧಕರು, ಗೈಲ್ ಗ್ಯಾಸ್ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts