More

    ನನ್ನನ್ನು ಸಿಎಂ ಹುದ್ದೆಗಾಗಿ ರಿಸರ್ವ್‌ ಇಟ್ಟಿರಬೇಕು

    ಕಾರವಾರ: ಪಕ್ಷದ ವರಿಷ್ಠರು ನನ್ನನ್ನು ಸಿಎಂ ಹುದ್ದೆಗಾಗಿ ರಿಸರ್ವ್‌ ಇಟ್ಟಿರಬೇಕು ಎಂದು ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಪತ್ರಕರ್ತರ ಪ್ರಶ್ನೆಗೆ ಹಾಸ್ಯಭರಿತವಾಗಿ ಉತ್ತರಿಸಿದರು.

    ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ, ಜಾತಿ ರಾಜಕಾರಣ ಮಾಡದ ಕಾರಣ 9 ಬಾರಿ ಹಳಿಯಾಳದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಕರ್ನಾಟಕ ವಿಧಾನಸಭೆಯ ಅತಿ ಹಿರಿಯ ಸದಸ್ಯನಾಗಿದ್ದೇನೆ. ಸುಮಾರು 40 ವರ್ಷ ಎಲ್ಲ ಮುಖ್ಯಮಂತ್ರಿಗಳ ಸಂಪುಟದಲ್ಲಿ ವಿವಿಧ ಸಚಿವ ಖಾತೆಗಳನ್ನು ನಿಭಾಯಿಸಿದ್ದೇನೆ. ಮುಖ್ಯಮಂತ್ರಿ ಮಾತ್ರ ಆಗಿಲ್ಲ ಎಂದರು.

    ಬೆಳೆ ಹಾನಿ ಸಮೀಕ್ಷೆ:

    ಜಿಲ್ಲೆಯ ಕರಾವಳಿಯಲ್ಲಿ ಮಳೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯಾಗದೇ ಬೆಳೆ ಒಣಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾದ ಹಾನಿಗಳ ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಸಮೀಕ್ಷೆ ಬಳಿಕ ಆದಾಖಲೆ ಇಟ್ಟುಕೊಂಡು ಬರ ಪೀಡಿತ ತಾಲೂಕು ಘೋಷಣೆ ಮಾಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದ್ದೇನೆ. ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾದ 67 ಸಾವಿರ ಅರ್ಜಿಗಳನ್ನು ಸಮರ್ಪಕ ವಿಚಾರಣೆ ಮಾಡದೇ ತಿರಸ್ಕರಿಸಲಾಗಿದೆ. ಅದನ್ನು ಮರು ಪರಿಶೀಲಿಸುವಂತೆ ಹೈಕೋರ್ಟ್ ಹೇಳಿದರೂ ಹಿಂದಿನ ಸರ್ಕಾರ ಕ್ರಮ ವಹಿಸಿಲ್ಲ. ಈ ಕುರಿತು ಈಗ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗುವುದು ಎಂದರು.

    ಇದನ್ನೂ ಓದಿ: ನನ್ನ ಪ್ಲ್ಯಾನ್ ಏನಿದೆ ಅದನ್ನು 100 ದಿನಗಳೊಳಗೆ ಹೇಳುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಜೊಯಿಡಾ ತಾಲೂಕಿನ ಅಣಶಿ ಭಾಗದಲ್ಲಿ ಅರಣ್ಯಾಧಿಕಾರಿಗಳು 4 ಎಕರೆ ಅಡಕೆ ತೋಟ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಹುಲಿ ಯೋಜನೆಗಾಗಿ ಆ ಜಮೀನನ್ನು ಭೂ ಸ್ವಾಧೀನ ಮಾಡಲಾಗಿದೆ. ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಕೊಟ್ಟಿದ್ದರೂ, ಜಮೀನಿಗೆ ಪರಿಹಾರ ನೀಡಿಲ್ಲ. ಹೀಗಿರುವಾಗ ಬೆಳೆದು ದೊಡ್ಡದಾದ ಗಿಡಗಳನ್ನು ಕಡಿಯುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ ಎಂದರು.
    ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಸಮರ್ಪಕವಾಗಿ ಆಗಿಲ್ಲ. ಕಾಮಗಾರಿ ಗುಣಮಟ್ಟದಿಂದ ಆಗಿಲ್ಲ. ಕೆಲಸ ಮುಗಿಯದೇ ಕಂಪನಿ ಟೋಲ್ ವಸೂಲಿ ಮಾಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಂಪೂರ್ಣ ಕೆಲಸವಾಗುವವರೆಗೂ ಟೋಲ್ ವಸೂಲಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವಕರ್, ಜಿಲ್ಲಾ ವಕ್ತಾರ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಗೌಡ, ರಮಾನಂದ ನಾಯಕ, ವಿನೋದ ನಾಯಕ, ದೀಪಕ ವೈಂಗಣಕರ್, ದಿಗಂಬರ ಶೇಟ್, ಪಾಂಡುರಂಗ ಗೌಡ, ಧೀರೂ ಶಾನಬಾಗ, ಅಶೋಕ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
    ತಿಜೋರಿ ಖಾಲಿ
    ಹಿಂದಿನ ಸರ್ಕಾರ ಸರ್ಕಾರದ ತೆರಿಗೆ ಹಣವನ್ನು ಬೇಜವಾಬ್ದಾರಿಯಿಂದ ಖರ್ಚು ಮಾಡಿ, ತಿಜೋರಿ ಖಾಲಿ ಮಾಡಿದೆ. ಚುನಾವಣೆಯ ವರ್ಷ ಯಾವುದೇ ಬಜೆಟ್ ಮೀಸಲಿಡದೇ ಬೇಕಾಬಿಟ್ಟಿ ಶಂಕುಸ್ಥಾಪನೆ ಮಾಡಲಾಗಿದೆ. ಈಗ ಬಿಜೆಪಿ ಶಾಸನ ಸಭೆಯ ಒಳಗೆ ಹಾಗೂ ಹೊರಗೆ ನಮ್ಮ ಸರ್ಕಾರದ ಮೇಲೆ ದಾಳಿ ನಡೆಸುತ್ತಿದೆ. ನಾಮ್ಮ ಗ್ಯಾರಂಟಿಯೇ ಬಿಜೆಪಿ ಸೋಲಲು ಕಾರಣ. ಈಗಲಾದರೂ ಬಿಜೆಪಿ ನಾಯಕರು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ಆರ್.ವಿ.ದೇಶಪಾಂಡೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts