More

    ಸಿಎಂ ಬಿಎಸ್​ವೈ ಹುಟ್ಟುಹಬ್ಬ ವಿಶೇಷ: ಛಲಗಾರ ಅಭಿವೃದ್ಧಿಯ ಹರಿಕಾರ

    ಯಡಿಯೂರಪ್ಪ ಅಂದರೆ ಹೋರಾಟ, ಹೋರಾಟ ಎಂದರೆ ಯಡಿಯೂರಪ್ಪ- ರಾಜ್ಯ ರಾಜಕೀಯದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತಿದು. ಹೋರಾಟವಲ್ಲದೆ ಛಲ, ಶಿಸ್ತು ಹಾಗೂ ಸಮಯ ಪರಿಪಾಲನೆಗೂ ಇವರು ಹೆಸರುವಾಸಿ. ಕೊಟ್ಟ ವಚನ ತಪ್ಪರು ಎಂಬ ಮಾತು ಬಿಎಸ್​ವೈ ಬಗ್ಗೆ ಜನಜನಿತ. ಬದಲಾದ ರಾಜಕೀಯ ಬೆಳವಣಿಗೆಯನ್ನು ಬಲ್ಲವರಿಗೆ ಈ ಮಾತಿನರ್ಥ ಬಿಡಿಸಿ ಹೇಳಬೇಕಿಲ್ಲ. ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರನ್ನೂ ಸರಿಸಮಾನವಾಗಿ ನೋಡುವ ಯಡಿಯೂರಪ್ಪ ದಣಿವರಿಯದ ನಾಯಕ. ಹೋರಾಟ ಮಾಡುತ್ತಲೇ ರಾಜಕೀಯದಲ್ಲಿ ಐದೂವರೆ ದಶಕ ಸವೆಸಿದ ಅವರು ಗುರುವಾರ (ಫೆ.27) 77ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಅವರ ಬದುಕಿನ ಹಾದಿಯನ್ನು ಇಲ್ಲಿ ಮೆಲುಕು ಹಾಕಲಾಗಿದೆ.

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಎಷ್ಟು ಹೇಳಿದರೂ ಕುರುಡನೊಬ್ಬ ಆನೆ ಮುಟ್ಟಿ ವರ್ಣಿಸಿದಂತೆಯೇ ಸರಿ. ಅವರ ಹೋರಾಟದ ಬದುಕಿನ ಪುಟಗಳನ್ನೊಮ್ಮೆ ಕಣ್ಣುಹಾಯಿಸಿ ಬಂದರೆ ಮೈಜುಮ್ಮೆನ್ನುವ ಅನುಭವ ಖಚಿತ.

    ಬಿಎಸ್​ವೈ ಅವರಿಗೀಗ 77ರ ಹರೆಯ. ಜನರಿಗಾಗಿ ಏನಾದರೂ ಮಾಡಬೇಕೆಂಬ ತಹತಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಉತ್ಸಾಹದ ಮುಂದೆ ವಯೋಸಹಜ ಸಮಸ್ಯೆಗಳೆಲ್ಲ ಅಡಗಿ ಕುಳಿತುಬಿಟ್ಟಂತೆ ಕಾಣಿಸುತ್ತದೆ. ಹಾಗೆಯೇ ಆಡಳಿತ ಪಕ್ಷದಲ್ಲಿದ್ದು ರಾಜ್ಯದ ಚುಕ್ಕಾಣಿ ಕೈಯಲ್ಲಿದ್ದರೂ, ವ್ಯವಸ್ಥೆಯಲ್ಲಿನ ಸಮಸ್ಯೆಗಳ ವಿರುದ್ಧ ಅವರ ಹೋರಾಟಗಾರನ ಮನಸ್ಥಿತಿ ಸದಾ ಜಾಗೃತ. ಕಳೆದ ಐವತ್ತು ಸಂವತ್ಸರದಿಂದ ಹೋರಾಟದ ಬದುವಿನ ಮೇಲೆಯೇ ಸಾಗಿಬಂದರೂ ಇನ್ನು ಹೋರಾಟದ ಕಿಚ್ಚು ತಣ್ಣಗಾಗಿಲ್ಲ. ನನ್ನ ಕೊನೇ ಉಸಿರು ಇರೋವರೆಗೂ ನಿವೃತ್ತ ಜೀವನ ಎಂಬುದಿಲ್ಲ ಎಂದು ಹೇಳಿ ತಮ್ಮ ವಲಯಕ್ಕೆ ಉತ್ಸಾಹದ ಬುಗ್ಗೆಯಂತೆ ಕಾಣಿಸುತ್ತಾರೆ. ಯಡಿಯೂರಪ್ಪರನ್ನು ವಿವಿಧ ಆಯಾಮಗಳಲ್ಲಿ ಗಮನಿಸಿದರೆ ಅನೇಕ ವಿಚಾರಗಳಿಗೆ ಅವರೊಂದು ಮಾರ್ಗದರ್ಶಿ ಗೈಡ್ ಇದ್ದಂತೆ. ಓರೆಕೋರೆ ಸರಿ ಮಾಡಿಕೊಳ್ಳುವ ಪುಟ್ಟ ನಿಘಂಟೂ ಆಗಬಹುದು. ಅವರ ಜೀವನ ಲಹರಿಯ ಐದಂಶಗಳನ್ನು ಹೀಗೂ ನೋಡಬಹುದು.

    ಆತ್ಮವಿಶ್ವಾಸದ ಚಿಮ್ಮುಹಲಗೆ

    ಸಣ್ಣ ಸೋಲಿಗೆ ಕುಗ್ಗಿಕುಳಿತುಕೊಳ್ಳುವ ಇಂದಿನ ಪೀಳಿಗೆಗೆ, ಪದೇಪದೆ ಎದುರಾಗುವ ಸೋಲನ್ನು ಮೆಟ್ಟಿನಿಂತರೆ ಗುರಿಮುಟ್ಟಬಹುದು ಎಂಬುದಕ್ಕೆ ಯಡಿಯೂರಪ್ಪ ಅವರೇ ಸಾಕ್ಷಿ. ಎಲ್ಲಿಯ ಬೂಕನಕೆರೆ, ಎಲ್ಲಿಯ ಶಿಕಾರಿಪುರ, ಎಲ್ಲಿಯ ರೈಸ್​ವಿುಲ್ ರೈಟರ್, ಎಲ್ಲಿಯ ಸಿಎಂ? ಯಾವುದಕ್ಕೆ ಯಾವುದು ಸಮ? ಯಾವುದು ಹೊಂದಾಣಿಕೆ? ಸಮಾಜಸೇವೆಯಲ್ಲಿ ತೊಡಗಬೇಕು ಎಂಬ ಏಕೈಕ ಗುರಿಇಟ್ಟುಕೊಂಡು ಹೊರಟಾಗ ಎದುರಾಗುವ ಎಲ್ಲ ಸೋಲುಗಳನ್ನು ಪಕ್ಕಕ್ಕೆ ಸರಿಸಿ ಗುರಿ ಮುಟ್ಟುವುದು ಹೇಗೆಂಬುದಕ್ಕೆ ನಮ್ಮ ಎದುರಿಗಿರುವ ಬಿಎಸ್​ವೈಗಿಂತ ಬೇರೆ ಉದಾಹರಣೆ ಬೇಕಿಲ್ಲವೇನೋ. ಹೋರಾಟ ನಡೆಸುವಾಗ ಹಲ್ಲೆ, ಉಗ್ರರ ಬೆದರಿಕೆಗೆ ಎದೆಗೊಟ್ಟಿದ್ದು, ಚುನಾವಣೆ ಸೋಲು, ಪಕ್ಷದಲ್ಲಿ ತಾನೊಬ್ಬನೇ ಶಾಸಕನಿದ್ದರೂ ಸರ್ಕಾರ ಮಣಿಸಿದ್ದು, ಉದಾಹರಣೆ ಒಂದೆರಡಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತ? ಎಂದು ಗಹಗಹಿಸಿ ನಕ್ಕವರು ಇಂದೂ ಇದ್ದಾರೆ. ಅವರೆಲ್ಲ ನೋಡುತ್ತಲೇ ಇದ್ದಾರೆ, ಬಿಎಸ್​ವೈ ಸಿಎಂ ಗಾದಿಯಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಸೋಲುಗಳನ್ನೇ ಮೆಟ್ಟಿಲಾಗಿ ಬಳಸಿ ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳದೆ ನಿರಂತರ ಪರಿಶ್ರಮದಿಂದ ಗುರಿ ಮುಟ್ಟಿದ್ದಾರೆ, ಪಕ್ಷವನ್ನೂ ಗುರಿಮುಟ್ಟಿಸಿದ್ದಾರೆ.

    ಪರಿಹಾರಕ್ಕಾಗಿಯೇ ಹೋರಾಟ

    ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ರಾಜಕೀಯ ನಾಯಕರು ನೂರೆಂಟು. ಕೆಲವರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಾರೆ, ಮತ್ತೆ ಕೆಲವರು ತಮ್ಮ ಇತಿಮಿತಿಯಲ್ಲಿ ಪ್ರತಿಭಟನೆ ದಾಖಲಿಸುತ್ತಾರೆ. ಯಡಿಯೂರಪ್ಪರ ಹೋರಾಟದ ಪಟ್ಟಿ ನೋಡಿದರೆ, ಹೋರಾಟ ಮತ್ತು ಪರಿಹಾರದ ವ್ಯಾಖ್ಯಾನ ಅರಿವಾಗುತ್ತದೆ. ಕೂಲಿಗಾಗಿ ಕಾಳು ಯೋಜನೆ ಅವ್ಯವಹಾರ ಬಯಲಿಗೆ ಹೋರಾಟ, ಜೀತದಾಳು ಜೀತ ಮುಕ್ತಿಗಾಗಿ ಪಾದಯಾತ್ರೆ, ಬಗರ್​ಹುಕುಂ ರೈತರ ಪರ ಹೋರಾಟ, ಬರಪೀಡಿತ ಪ್ರದೇಶದಲ್ಲಿ ಸೈಕಲ್ ಯಾತ್ರೆ, ರೈತ ಜಾಥಾ, ಪಡಿತರ ಕಾರ್ಡ್​ಗಾಗಿ ಹೋರಾಟ, ರೈತರ ಸಾಲಮನ್ನಾಕ್ಕಾಗಿ ಧರಣಿ, ಕಾವೇರಿ ಉಳಿಸಿ ಜಾಥಾ… ಇತ್ಯಾದಿಗಳಿವೆ. ಹೀಗೆ ಅವರ ಹೋರಾಟದ ಪುಟಗಳನ್ನು ತಿರುವಿದರೆ ಅವು ನಡೆದ ದಿನಗಳು, ಹಗಲು ರಾತ್ರಿಗಳು, ಸರ್ಕಾರದ ತೀರ್ವನಗಳು ಎಲ್ಲವೂ ಗೋಚರಿಸುತ್ತದೆ. ಮುಖ್ಯವಾಗಿ ಕಳಕಳಿ ಅರ್ಥವಾಗುತ್ತದೆ. ಇಂದಿನ ಹೋರಾಟಗಾರರಿಗೆ ಇದು ಮಾದರಿಯೂ ಹೌದು.

    ಹಠವಾದಿ

    ಮನುಷ್ಯನಿಗೆ ಹಠ, ಛಲ ಹೇಗಿರಬೇಕು? ಕೈಗೆತ್ತಿಕೊಂಡ ಸರಿಯಾದ ಸಂಕಲ್ಪ ಸಾಧಿಸುವವರೆಗೂ ಆ ಛಲ ಸಡಿಲವಾಗಬಾರದು, ಕರಗಬಾರದು. ಬಿಎಸ್​ವೈ ಛಲವೂ ಅಂಥದ್ದೆ. ತನ್ನ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು, ತಾನು ಮುಖ್ಯಮಂತ್ರಿಯಾಗಲೇ ಬೇಕು, ತಾನಂದುಕೊಂಡ ಕೆಲಸ ಆಗಲೇ ಬೇಕು, ಜನರಿಗೆ ಕೊಟ್ಟ ಭರವಸೆ ಈಡೇರಲೇಬೇಕು… ಹೀಗೆ ಅವರ ಛಲಗಳ ಪಟ್ಟಿ ಕಾಣಿಸುತ್ತದೆ. ನಂಬಿದ ತತ್ವ ಸಿದ್ಧಾಂತದಾಚೆಗೆ ಹೆಜ್ಜೆ ಇಡದೆ ತಮ್ಮ ಹಠವನ್ನು ಸಾಧಿಸಿಕೊಂಡಿದ್ದಾರೆ. ಪಕ್ಷದೊಳಗೆ, ಹೊರಗೆ ಎಷ್ಟೇ ಟೀಕೆ ಟಿಪ್ಪಣಿ ಬಂದರೂ ಅದಕ್ಕೆ ಮಹತ್ವ ಕೊಡದೆ ಸಂಕಲ್ಪವನ್ನು ಈಡೇರಿಸಿಕೊಂಡಿದ್ದಾರೆ ಬಿಎಸ್​ವೈ.

    ಶಿಸ್ತಿನ ಪೈಲ್ವಾನ್

    ಯಡಿಯೂರಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯ ಪೈಲ್ವಾನರು. ತಮ್ಮ ಜೀವನದಲ್ಲೂ ಸಂಘದ ಶಿಸ್ತನ್ನು ಅಳವಡಿಸಿಕೊಂಡು ಬಂದವರು. ವಯಸ್ಸು 77 ಆದರೂ ಅಷ್ಟೊಂದು ಚಾಮರ್್​ಗೆ ಕಾರಣ ಅವರಲ್ಲಿನ ಶಿಸ್ತುಪಾಲನೆ ವ್ಯವಸಾಯ. ಬೆಳಗ್ಗೆ ನಸುಕಿನಲ್ಲೇ ವಾಕಿಂಗ್, ಮಿತಾಹಾರ, ಸ್ವಚ್ಛತೆಗೆ ಆದ್ಯತೆ, ಎಲ್ಲರ ಮಾತನ್ನು ಆಲಿಸಿ ಅಗತ್ಯವಾದದ್ದನ್ನು ನೋಟ್ ಮಾಡಿಕೊಳ್ಳುವ ಪರಿಪಾಠ ಎಂದೂ ಬಿಟ್ಟಿಲ್ಲ. ಯಾವುದೇ ಊರಿಗೆ ಹೋಗಲಿ, ದೆಹಲಿಗೆ ಹೋಗಲಿ ತಮ್ಮತನವನ್ನ ಎಂದೂ ಬದಲಿಸಿದವರಲ್ಲ. 5-6 ದಶಕಗಳ ಹಿಂದೆ ಯಡಿಯೂರಪ್ಪರನ್ನು ನೋಡಿದವರು ಇಂದಿಗೂ ಅವರಲ್ಲಿ ಅದೇ ಗುಣ ಇರುವುದನ್ನು ಖಚಿತ ಪಡಿಸುತ್ತಾರೆ. ಯಡಿಯೂರಪ್ಪರ ಸಿಟ್ಟು, ಆಕ್ರೋಶ, ಆವೇಶ ಎಲ್ಲವೂ ಶಿಸ್ತಿಗಾಗಿ. ಶಿಸ್ತು ಬಿಟ್ಟು ಹೇಗ್ಹೇಗೋ ಮಾಡುವುದನ್ನು, ಆಡುವುದನ್ನು ಅವರು ಕಿಂಚಿತ್ತೂ ಸಹಿಸಲ್ಲ. ಶಿಸ್ತಿಗೆ ಒಗ್ಗದ ಮಂದಿ, ಯಡಿಯೂರಪ್ಪರಲ್ಲಿ ಮೇಲೆ ಕಾಣುವ ಗುಣಗಳನ್ನಷ್ಟೇ ಗ್ರಹಿಸಿ, ಅವರನ್ನು ಮುಂಗೋಪಿ, ಕೋಪದ ಮನುಷ್ಯ ಎಂದು ಆಪಾದಿಸುತ್ತಾರೆ. ಶಿಸ್ತನ್ನು ಅತಿಯಾಗಿ ಪ್ರೀತಿಸುವ ಯಾರಿಗಾದರೂ ಇಂಥ ಆಪಾದನೆ ತಪ್ಪಿದ್ದಲ್ಲ.

    ನಕಾರಾತ್ಮಕ ಧೋರಣೆ ಬದಿಗೆ

    ಎಂಥದ್ದೇ ಸನ್ನಿವೇಶ ಬಂದರೂ ನಕಾರಾತ್ಮಕ ಧೋರಣೆ ಬಿಎಸ್​ವೈ ಅವರಲ್ಲಿ ಕಡಿಮೆ. ನಕಾರಾತ್ಮಕ ಧೋರಣೆ ಬಂದರೆ ಕೆಲಸ ಕೆಡುತ್ತದೆ ಎಂಬುದನ್ನು ಚೆನ್ನಾಗಿ ಅರಿತ ಅವರು ಎಂದಿಗೂ ಧನಾತ್ಮಕ ಆಲೋಚನೆಯಲ್ಲಿ ಇರುತ್ತಾರೆ. ರಾಜಕೀಯವಾಗಿ, ಸರ್ಕಾರದಲ್ಲಿ, ಅವಕಾಶ ಕಳೆದುಕೊಂಡ ಸಂದರ್ಭ, ಪ್ರಾಕೃತಿಕ ಸವಾಲು ಎದುರಾದಾಗ ಎಲ್ಲ ಸಂದರ್ಭದಲ್ಲಿಯೂ ಧನಾತ್ಮಕ ಮಾತನ್ನೇ ಆಡುತ್ತ ಸಮಸ್ಯೆಗೆ ಪರಿಹಾರ ಕಂಡುಕೊಂಡು ಪರಿಸ್ಥಿತಿ ನಿಭಾಯಿಸಿದ್ದಾರೆ. ಯಡಿಯೂರಪ್ಪ ನಗುವುದಿಲ್ಲ, ಸಿಟ್ಟು ಬುರಕ ಹೀಗೆಲ್ಲ ಮಾತುಗಳಿರುವುದುಂಟು. ಇವಕ್ಕೆಲ್ಲ ಅವರು ಎಂದೂ ತಲೆ ಕೆಡಿಸಿಕೊಂಡವರೂ ಅಲ್ಲ. ನಾನಿರುವುದೇ ಹೀಗೆ, ದೇವರು ಮೆಚ್ಚುವಂತಿದ್ದೇನೆ ಎಂಬ ನಿಲುವನ್ನು ಆಗ್ಗಿಂದಾಗೆ ಹೇಳುವ ಅವರು, ಅತಿಥಿ ಸತ್ಕಾರಕ್ಕೂ ಒಂದು ಮಾದರಿ. ಯಾವುದೇ ಪಕ್ಷದ ಶಾಸಕರೂ ಬೇಡಿಕೆ ಹೊತ್ತು ಬಂದಾಗ ಕೂರಿಸಿ ಮಾತನಾಡಿಸಿ, ಕೆಲಸ ಮಾಡಿಸಿಕೊಡಲು ಶಕ್ತಿಮೀರಿ ಪ್ರಯತ್ನಿಸುವುದು ಸಾಮಾನ್ಯ ಸಂಗತಿ.

    | ಶ್ರೀಕಾಂತ್ ಶೇಷಾದ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts