More

    ಸಿಎಂ ಬಿಎಸ್​ವೈ ಹುಟ್ಟುಹಬ್ಬ ವಿಶೇಷ: ತೆರೆ ಹಿಂದೆ ನೆರವಾದವರ ಮರೆತಿಲ್ಲ

    ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು, ಪಕ್ಷದ ವರ್ಚಸ್ವಿ ನಾಯಕರಾಗಿ ರೂಪುಗೊಳ್ಳಲು ತೆರೆಮರೆಯಲ್ಲಿ ಅನೇಕರ ಯೋಗದಾನವಿದೆ. ಬಿಎಸ್​ವೈ ಆರ್​ಎಸ್​ಎಸ್ ಸ್ವಯಂ ಸೇವಕರು ಎಂಬ ಕಾರಣಕ್ಕೆ ಅನೇಕ ಆರ್​ಎಸ್​ಎಸ್ ಪ್ರಮುಖರು ಸಹಜವಾಗಿಯೇ ಬೆನ್ನಹಿಂದೆ ನಿಂತು ಮಾರ್ಗದರ್ಶನ ನೀಡಿದ್ದಾರೆ. ಸ್ವರ್ಗೀಯ ಮೈ.ಚ.ಜಯದೇವ್ ಅವರಿಂದ ಆರಂಭವಾಗಿ ಮತ್ತೂರಿನ ಪಟ್ಟಾಭಿರಾಮ್ ವರೆಗೆ ಅನೇಕರು ಕಾಲದಿಂದ ಕಾಲಕ್ಕೆ ಯಡಿಯೂರಪ್ಪಗೆ ಸೂಕ್ತ ಸಲಹೆ ನೀಡಿ ಬೆನ್ನಿಗೆ ನಿಂತಿದ್ದಾರೆ. ಬಿಎಸ್​ವೈ

    ಶಿವಮೊಗ್ಗಕ್ಕೆ ಬಂದ ಬಳಿಕ ಹಿರಿಯೂರು ಕೃಷ್ಣಮೂರ್ತಿ, ಬಾ.ಮ.ಶ್ರೀಕಂಠಯ್ಯ, ಪ್ರೊ.ಪಿ.ವಿ.ಕೃಷ್ಣಭಟ್ ಮಾರ್ಗದರ್ಶಕರಾದರು. ಪ್ರಸ್ತುತ ಮತ್ತೂರಿನ ಪಟ್ಟಾಭಿರಾಮ್ ಕೂಡ ಯಡಿಯೂರಪ್ಪರಿಗೆ ಸಲಹೆ ಸಹಕಾರ ನೀಡಿದವರು.

    ಗಾಡ್​ಫಾದರ್ ರೀತಿ ಯಡಿಯೂರಪ್ಪರನ್ನು ಹಿರಿಯೂರು ಕೃಷ್ಣಮೂರ್ತಿಗಳು ಎಲ್ಲ ಸಂದರ್ಭದಲ್ಲೂ ತಿದ್ದಿ ತೀಡಿದ್ದರು. ಕೆಲ ವರ್ಷಗಳ ಹಿಂದೆ ಹಿರಿಯೂರು ಕೃಷ್ಣಮೂರ್ತಿಗಳು ನಿಧನರಾದಾಗ ಬಿಎಸ್​ವೈ ತುಂಬಾ ನೊಂದುಕೊಂಡಿದ್ದರು. ಶಿವಮೊಗ್ಗ ಬಿಜೆಪಿಯಲ್ಲಿ ಡಿ.ಎಚ್.ಶಂಕರಮೂರ್ತಿ, ಟಿ.ಜಿ.ಶ್ರೀಧರರಾವ್, ಮಾಜಿ ಶಾಸಕ ಎಂ.ಆನಂದರಾವ್ ಪಕ್ಷ ಸಂಘಟನೆಯಲ್ಲಿ ಬಿಎಸ್​ವೈಗೆ ಅಗತ್ಯ ಸಹಕಾರ ಸಲಹೆ ನೀಡಿದವರು. ವಯಸ್ಸಿನಲ್ಲಿ ಬಿಎಸ್​ವೈಗಿಂತ ಹಿರಿಯರಾಗಿದ್ದ ಈ ಮೂವರು ಸಂಘಟನೆ, ಹೋರಾಟ ಎಲ್ಲದರಲ್ಲೂ ಮಾರ್ಗದರ್ಶನ ನೀಡಿದವರು.

    ಶಿಕಾರಿಪುರದಲ್ಲಿ ಜೈನ ಮುಖಂಡ ಉಗಂ ರಾಜ್, ಡಾ. ವಿಜಯ್ ಸಂಗಮ್ೇವ್, ಎ.ಎಸ್.ಪದ್ಮನಾಭ ಭಟ್, ಕೃಷ್ಣ ಸಿಂಗ್, ಎಸ್.ಬಿ.ಮಠದ್, ಅಂಗಡಿ ರಾಮಣ್ಣ… ಹೀಗೆ ಯಡಿಯೂರಪ್ಪರನ್ನು ಏಕವಚನದಲ್ಲಿ ಕರೆಯಬಹುದಾದ ಅನೇಕ ಒಡನಾಡಿಗಳು ಒಂದಾಗಿದ್ದರು. ಈ ಪೈಕಿ ಕೆಲವರು ಈಗಿಲ್ಲ. ಅಂಗಡಿ ರಾಮಣ್ಣ ಈಗಲೂ ಬಿಎಸ್​ವೈ ಜತೆ ಕುಳಿತು ಸಲುಗೆಯಿಂದ ಮಾತನಾಡುವವರ ಪೈಕಿ ಒಬ್ಬರು. ರಾಜಕೀಯದ ಆರಂಭ ದಿನಗಳಲ್ಲಿ ಬಿಎಸ್​ವೈ ರಾಜ್ಯ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬದತ್ತ ಗಮನ ಕೊಡುತ್ತಿದ್ದದ್ದು ಕಡಿಮೆ. ಈ ವೇಳೆ ಅವರ ಕುಟುಂಬಕ್ಕೆ ಸಾಲದ ರೂಪದಲ್ಲಿ ದಿನಸಿ ಸಾಮಗ್ರಿ ನೀಡುತ್ತಿದ್ದದ್ದು ಇದೇ ಅಂಗಡಿ ರಾಮಣ್ಣ. ಮಾತ್ರವಲ್ಲ ಬಿಎಸ್​ವೈಗೆ ಆರ್ಥಿಕವಾಗಿ ಬೆಂಬಲ ನೀಡಿದ್ದೂ ಇವರೇ.

    ಇಂದು ಯಡಿಯೂರಪ್ಪ ಯಶಸ್ವಿ ರಾಜಕಾರಣಿ ಎನಿಸಿದ್ದರೆ ಅದರ ಹಿಂದೆ ಅನೇಕರ ಕೊಡುಗೆಯಿದೆ. ಹಲವರು ತೆರೆಮರೆಯಲ್ಲೇ ಬಿಎಸ್​ವೈಗೆ ನೆರವು ನೀಡಿ ಇಂದಿಗೂ ನೈಪಥ್ಯದಲ್ಲೇ ಉಳಿದಿದ್ದಾರೆ. ಆದರೆ ಯಡಿಯೂರಪ್ಪ ಹಾಗೂ ಅವರ ಕುಟುಂಬ ತಮ್ಮ ಕಷ್ಟ ಕಾಲದಲ್ಲಿ ನೆರವಾದ ಯಾರನ್ನೂ ಮರೆತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts