More

    ಸ್ವಚ್ಛತಾ ಸೇವೆಗೆ ವಿದ್ಯಾರ್ಥಿ ತಂಡ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ಶಾಲೆ -ಕಾಲೇಜಿನಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಇಲಾಖೆಗಳಿಂದ ಅಲ್ಲಲ್ಲಿ ನಡೆಯುತ್ತಿದ್ದರೆ ಬೆಳ್ಮಣ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳೇ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸಲು ಮುಂದೆ ಬಂದಿದ್ದಾರೆ.

    ಬೆಳ್ಮಣ್, ಶಿರ್ವ, ಕಾರ್ಕಳ ಮೊದಲಾದ ಕಡೆ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ತಂಡ ಸ್ವಚ್ಛತೆಗೆ ವಿಶೇಷ ಮಹತ್ವ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲೇಜಿಗೆ ರಜೆ ಇರುವ ದಿನ ಹಾಗೂ ಪ್ರತಿ ಭಾನುವಾರ ಸ್ವಚ್ಛತೆಗೆ ಒಂದು ಹೊತ್ತು ಮೀಸಲಿಡುತ್ತಿದೆ ಈ ವಿದ್ಯಾರ್ಥಿ ತಂಡ. ಸುಮಾರು 25 ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಸಮಾಜ ಸೇವಾ ತಂಡ ಎಂಬ ಹೆಸರಿನಿಂದ ಹಲವು ತಿಂಗಳಿಂದ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿ, ನಂದಳಿಕೆ, ಸೂಡ ಹಾಗೂ ಶಿರ್ವ ಪರಿಸರದಲ್ಲಿ ಶುಚಿತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದೆ.
    ಬೆಳ್ಮಣ್ ಹಾಗೂ ನಂದಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುವ ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯ ಎರಡೂ ಬದಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟ್‌ಕ್ ತ್ಯಾಜ್ಯಗಳನ್ನು ಬಿಸಾಡುತ್ತಿದ್ದು ಇದನ್ನು ಸಮಾಜ ಸೇವಾ ತಂಡ ಸ್ವಚ್ಛ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

    ವಿದ್ಯಾರ್ಥಿಗಳೇ ಕಟ್ಟಿದ ತಂಡ: ಸಮಾಜ ಸೇವಾ ತಂಡ ಕಟ್ಟಿದ್ದು ಬೆಳ್ಮಣ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ತಂಡ. ಆ ಬಳಿಕ ಈ ತಂಡದಲ್ಲಿ ವಿವಿಧ ಕಾಲೇಜಿನ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ನಾಲ್ಕು ಗೋಡೆಯ ಮಧ್ಯೆ ಕುಳಿತು ಪುಸ್ತಕದ ವಿಷಯಗಳನ್ನು ಕಲಿಯುವುದರ ಜತೆಗೆ ಸಮಾಜಕ್ಕೂ ನಮ್ಮಿಂದೇನಾದರೂ ಕೊಡುಗೆ ನೀಡಬೇಕೆಂದು ಈ ವಿದ್ಯಾರ್ಥಿಗಳ ತಂಡ ವಿಶೇಷವಾಗಿ ಸ್ವಚ್ಛತೆಗೆ ಸಮಯ ಮೀಸಲಿಡುತ್ತಿದೆ. ಸ್ಥಳೀಯ ದೇವಸ್ಥಾನಗಳಲ್ಲಿ ಉತ್ಸವ ಸಂದರ್ಭ ಸ್ವಚ್ಛತೆ, ಶಾಲಾ ಆವರಣ ಶುಚಿ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದೆ. ತ್ಯಾಜ್ಯ ಸಂಗ್ರಹಿಸಿ ಮೂಟೆ ಕಟ್ಟಿ ಬಳಿಕ ಪಂಚಾಯಿತಿ ವಾಹನದಲ್ಲಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಲಾಗುತ್ತದೆ. ಪ್ರತಿ ಭಾನುವಾರ ಬೆಳ್ಮಣ್ ಹಾಗೂ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಕಾಳಜಿ ವಹಿಸಲಾಗುತ್ತಿದೆ. ನೆರೆ ಪೀಡಿತರಿಗೂ ಹಣ ಸಂಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಹಸ್ತಾಂತರಿಸಿದೆ ಈ ತಂಡ

    ನಮ್ಮ ಈ ತಂಡಕ್ಕೆ ಸ್ಫೂರ್ತಿ ಮುದರಂಗಡಿ ಕಾಲೇಜಿನ ಉಪನ್ಯಾಸಕ ಪ್ರಸಾದ್ ತಂತ್ರಿಯವರು. ಅವರ ಮಾರ್ಗದರ್ಶದಿಂದ ಈ ತಂಡ ಹುಟ್ಟಿಕೊಂಡಿದ್ದು ನಿರಂತರ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದೆ.
    -ಗಣೇಶ್ ಆಚಾರ್ಯ, ಸಮಾಜಸೇವಾ ತಂಡದ ರೂವಾರಿ

    ಸರ್ಕಾರದ ಇಲಾಖೆಗಳು, ಪಂಚಾಯಿತಿಗಳು ಮಾಡಬೇಕಾದ ಕೆಲಸವನ್ನು ವಿದ್ಯಾರ್ಥಿಗಳೇ ಸ್ವ ಇಚ್ಛೆಯಿಂದ ಮಾಡುತ್ತಿರುವುದು ಶ್ಲಾಘನೀಯ. ಸ್ವಚ್ಛತೆ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸುವ ಕೆಲಸ ಈ ವಿದ್ಯಾರ್ಥಿ ತಂಡದಿಂದ ನಿರಂತರ ನಡೆಯುತ್ತಿರಲಿ. ನಮ್ಮ ಸಹಕಾರ ಸದಾ ಇರಲಿದೆ.
    ರೇಶ್ಮಾ ಉದಯ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts