More

    ಗುತ್ತಲ ಪಪಂ ಎದುರು ನಾಗರಿಕರ ಪ್ರತಿಭಟನೆ

    ಗುತ್ತಲ: ಸತತ ಮಳೆಗೆ ಪಟ್ಟಣದಲ್ಲಿ ಹಾಳಾಗಿರುವ ಅನೇಕ ರಸ್ತೆ ಹಾಗೂ ಕಚ್ಚಾ- ಪಕ್ಕಾ ಚರಂಡಿಗಳ ದುರಸ್ತಿಗೆ ಮುಂದಾಗದ ಮುಖ್ಯಾಧಿಕಾರಿ ವಿರುದ್ಧ ಪಪಂ ಕಚೇರಿ ಎದುರು ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಬಹುತೇಕ ವಾರ್ಡ್​ಗಳಲ್ಲಿ ರಸ್ತೆಗಳು ಹಾಗೂ ಚರಂಡಿಗಳು ಹದಗೆಟ್ಟಿವೆ. ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗಿದೆ. ವಿಷಜಂತುಗಳು ಮನೆಗೆ ನುಗ್ಗುತ್ತಿವೆ. ಈವರೆಗೆ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

    ಪಪಂ ಸದಸ್ಯ ಪ್ರದೀಪ ಸಾಲಗೇರಿ ಹಾಗೂ ಪರಶುರಾಮ ಯಲಗಚ್ಚ, ಕಾಯಂ ಇಂಜಿನಿಯರ್ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಸದ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದರು.

    ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಇಂಜಿನಿಯರ್ ಇಲ್ಲದೆ ನಾನು ದುರಸ್ತಿ ಮಾಡಲು ತೊಂದರೆಯಾಗುವುದು ಎಂದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮುಖ್ಯಾಧಿಖಾರಿ ವಿರುದ್ಧ ಧಿಕ್ಕಾರ ಹಾಕಿದರು.

    ಪರಿಸ್ಥಿತಿ ಅರಿತ ಪಪಂ ಕೆಲ ಅಧಿಕಾರಿಗಳು ಮುಖ್ಯಾಧಿಕಾರಿಯೊಂದಿಗೆ ರ್ಚಚಿಸಿ, ಮಳೆಯಿಂದ ತೊಂದರೆಯಾಗಿರುವ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮಾಡುವಂತೆ ಸಲಹೆ ನೀಡಿದರು.

    ಕೂಡಲೆ ಚರಂಡಿ ನೀರು ಸರಾಗವಾಗಿ ಹರಿಯಲು, ಹದಗೆಟ್ಟ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸಲು ಹಾಗೂ ಸಂಚಾರಕ್ಕೆ ತೊಂದರೆಯಾಗಿರುವ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಪಪಂ ಸದಸ್ಯರಾದ ಬಸಣ್ಣ ನೆಗಳೂರ, ಮಹ್ಮದಹನೀಫ್ ರಿತ್ತಿ, ಖಲೀಲ ಅಹ್ಮದ ಖಾಜಿ, ಗಣೇಶ ಅರೇಮಲ್ಲಾಪುರ, ಅಜಯ ಬಂಡಿವಡ್ಡರ, ಮಾಜಿ ಸದಸ್ಯ ಗುಡ್ಡಪ್ಪ ಗೊರವರ ಸೇರಿದಂತೆ 10ನೇ ವಾರ್ಡ್​ನ ಕೆಲ ಮಹಿಳೆಯರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ವರ್ಗಾವಣೆ ಮಾಡಿಸಿಕೊಳ್ಳಿ

    ಸರಿಯಾಗಿ ಕಾರ್ಯ ನಿರ್ವಹಿಸಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಳ್ಳಿ. ಕುಡಿಯುವ ನೀರು ಸಮಪರ್ಕವಾಗಿ ಪೂರೈಸಲು ನಿಮ್ಮಿಂದ ಆಗುತ್ತಿಲ್ಲ. ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತನೆ ಮಾಡಲು ಬರಲ್ಲ. ನಿಮ್ಮ ನಿರ್ಲಕ್ಷ್ಯಹಾಗೂ ನಿಮಗೆ ಆಡಳಿತದಲ್ಲಿ ಹಿಡಿತ ಇಲ್ಲದಿರುವುದಕ್ಕೆ ಗುತ್ತಲದ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ಸಾರ್ವಜನಿಕರು ಮುಖ್ಯಾಧಿಕಾರಿ ಶೇಖರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts