More

    ಪಕ್ಷದ ಮೇಲೆ ಹಿಡಿತಕ್ಕೆ ಸರ್ಕಸ್

    ನವದೆಹಲಿ/ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ವಿಭಜನೆಯಿಂದ ಯಾವ ಬಣ ನೈಜ ಎನ್​ಸಿಪಿ ಎಂಬ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಎರಡೂ ಬಣಗಳು ತಮ್ಮದೇ ನೈಜ ಎನ್​ಸಿಪಿ ಎಂದು ಪ್ರತಿಪಾದನೆಗಿಳಿದಿವೆ. ಪಕ್ಷ ವಿಭಜನೆಗೆ ಎರಡು ದಿನ ಮೊದಲು ನಡೆದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬಹುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಪವಾರ್ ಬುಧವಾರ ನೀಡಿದ್ದ ಹೇಳಿಕೆಗೆ ದೆಹಲಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತಿರುಗೇಟು ನೀಡಿರುವ ಅವರ ಚಿಕ್ಕಪ್ಪ ಶರದ್ ಪವಾರ್, ನಾನೇ ರಾಷ್ಟ್ರೀಯ ಅಧ್ಯಕ್ಷ ಎಂದಿದ್ದಾರೆ.

    ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಲ್ಲ 27 ರಾಜ್ಯ ಘಟಕಗಳ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿಗಳು ಭಾಗಿಯಾಗಿದ್ದು, ನನ್ನ ನಾಯಕತ್ವವನ್ನು ಒಪ್ಪಿದ್ದಾರೆ ಮತ್ತು ಅಜಿತ್ ಪವಾರ್ ಸೇರಿ 9 ಶಾಸಕರು ಹಾಗೂ ಸಂಸದರಾದ ಪ್ರಫುಲ್ ಪಟೇಲ್ ಹಾಗೂ ಸುನಿಲ್ ತತ್ಕರೆ ಅವರ ಉಚ್ಚಾಟನೆಯನ್ನು ಸಭೆ ಅನುಮೋದಿಸಿದೆ ಎಂದು ಹೇಳಿದ್ದಾರೆ.

    ಪಕ್ಷದ ಹೆಸರು ಮತ್ತು ಚಿಹ್ನೆ ಪಡೆಯಲು ವಿರೋಧಿಗಳು ನಡೆಸಿರುವ ಹುನ್ನಾರವನ್ನು ಬುಡಮೇಲು ಮಾಡಲಾಗುವುದು. ನಮ್ಮ ಬಣ ಕೂಡ ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದ್ದು, ಯಾವುದೇ ತೀರ್ಮಾನ ಪ್ರಕಟಿಸುವ ಮುನ್ನ ನಮ್ಮ ಅಹವಾಲು ಆಲಿಸುವಂತೆ ಕೋರಲಾಗಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ. ಈ ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.

    ಮುಂಬೈನಲ್ಲಿ ಬುಧವಾರ ಎರಡೂ ಬಣಗಳು ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ 32 ಶಾಸಕರು ಅಜಿತ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ, 18 ಶಾಸಕರು ಶರದ್ ಅವರ ಬಣದ ಸಭೆಯಲ್ಲೂ ಭಾಗಿಯಾಗಿದ್ದರು. ಇನ್ನು ನಾಲ್ವರು ಶಾಸಕರ ನಡೆ ನಿಗೂಢವಾಗಿದೆ. ಎನ್​ಸಿಪಿ 54 ಶಾಸರನ್ನು ಹೊಂದಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗದಿರಲು ಅಜಿತ್ ಬಣಕ್ಕೆ 36 ಶಾಸಕರ ಬೆಂಬಲ ಅಗತ್ಯವಿದೆ.

    ಶಿವಸೇನೆ ಬಣಗಳ ಮಧ್ಯೆ ವಾಕ್ಸಮರ

    ಅಜಿತ್ ಬಣ ಸರ್ಕಾರದ ಭಾಗವಾಗಿರುವುದರಿಂದ ಸಿಎಂ ಶಿಂಧೆ ಗುಂಪಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ಹಲವು ಶಾಸಕರು ಉದ್ಧವ್ ಠಾಕ್ರೆ ಅವರ ಕ್ಷಮೆಯಾಚಿಸಿ ವಾಪಸ್ ಬರಲು ಮನಸ್ಸು ಮಾಡಿದ್ದಾರೆ. ಈ ಸಂಬಂಧ ನಾಲ್ಕೈದು ಶಾಸಕರು ನನ್ನನ್ನು ಭೇಟಿ ಕೂಡ ಆಗಿದ್ದರು ಎಂದು

    ಶಿವಸೇನೆಯ (ಯುಬಿಟಿ) ಸಂಸದ ವಿನಾಯಕ್ ರಾವತ್ ಹೇಳಿದ್ದಾರೆ. ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಸರ್ಕಾರಕ್ಕೆ ಬೆಂಬಲ ನೀಡಿದ ನಂತರ ಉದ್ಧವ್ ಠಾಕ್ರೆ ಬಣದ ಶಿವಸೇನೆಯಲ್ಲಿ ತಳಮಳ ಆರಂಭವಾಗಿದೆ.

    ಯಾರಿಗೂ ಅಸಮಾಧಾನ ಇಲ್ಲ

    ಅಜಿತ್ ಪವಾರ್ ಬಣ ಸೇರ್ಪಡೆಯಿಂದ ಸರ್ಕಾರಕ್ಕೆ ಬಲ ಬಂದಿದೆಯೇ ಹೊರತು ಈ ಬೆಳವಣಿಗೆ ಶಿವಸೇನೆಯಲ್ಲಿ ಯಾರಿಗೂ ಅಸಮಾಧಾನ ತಂದಿಲ್ಲ ಎಂದು ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ಅಜಿತ್ ಮತ್ತು ಇತರ ಎಂಟು ನಾಯಕರು ಸಂಪುಟ ಸೇರಿರುವುದರಿಂದ ಮುಖ್ಯಮಂತ್ರಿ ಶಿಂಧೆ ಕುರ್ಚಿ ಅಲುಗಾಡುತ್ತಿದೆ. ಎನ್​ಸಿಪಿ ವಿಭಜಿಸಿ ಬಂದವರನ್ನು ಸರ್ಕಾರಕ್ಕೆ ಸೇರಿಸಿಕೊಂಡಿರುವುದು ನಮಗೆ ಮುಳುವಾಗುತ್ತದೆ ಎಂದು ಶಿವಸೇನೆಯ ಹಲವು ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂಬ ಹಿನ್ನೆಲೆಯಲ್ಲಿ ಶಿಂಧೆ ಈ ಸ್ಪಷ್ಟನೆ ನೀಡಿದ್ದಾರೆ.

    ವಿರೋಧಿ ಬಣಕ್ಕೆ ಅಧಿಕಾರವೇ ಇಲ್ಲ

    ಶರದ್ ಪವಾರ್ ದೆಹಲಿಯಲ್ಲಿ ಗುರುವಾರ ಎನ್​ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅಜಿತ್ ಪವಾರ್ ಬಣ, ಪಕ್ಷದ ಯಾವುದೇ ಅಧಿಕೃತ ಸಭೆ ನಡೆಸಲು ವಿರೋಧಿ ಬಣಕ್ಕೆ ಅಧಿಕಾರ ಇಲ್ಲ. ಇಂಥ ಸಭೆಗೆ ಕಾನೂನಿನ ಮಾನ್ಯತೆ ಕೂಡ ಇಲ್ಲ ಎಂದು ಹೇಳಿದೆ. ಜೂನ್ 30ರಂದು ನಡೆದ ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರೆಂದು ಆಯ್ಕೆ ಮಾಡಲಾಗಿದೆ. ಹೀಗಾಗಿ ಎನ್​ಸಿಪಿಯ ಅಧಿಕೃತ ರಾಷ್ಟ್ರೀಯ ಅಧ್ಯಕ್ಷರು ಅವರೇ ಆಗಿದ್ದಾರೆ. ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅಜಿತ್ ಬಣ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts