More

    ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ

    ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು
    ಕಪಿಲಾ ನದಿ ತಪ್ಪಲಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದ ತೆರೆ ಕಂಡಿತು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೃಷಿ ಮೇಳ ಹಾಗೂ ವಸ್ತುಪ್ರದರ್ಶನ ಸಮಾರೋಪದ ಭಾಷಣದೊಂದಿಗೆ ಜಾತ್ರೆಯ ಎಲ್ಲ ಕಾರ್ಯಕ್ರಮಗಳಿಗೆ ಪೂರ್ಣವಿರಾಮ ದೊರೆಯಿತು.

    ಅತ್ತ ಕರ್ತೃ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಭಾನುವಾರ ಅಲಂಕೃತ ಸಾರೋಟ್‌ನಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ನೂರಾರು ಮಹಿಳೆಯರು ಕುಂಭ ಹೊತ್ತು ತಂದು ತೀರ್ಥಸ್ನಾನ ನೆರವೇರಿಸಲಾಯಿತು. ಮಹಾರುದ್ರಾಭಿಷೇಕ, ಅಷ್ಟೋತ್ತರ ಶತಕುಂಭೋತ್ಸವ, ಪಂಚಾಮೃತಾಭಿಷೇಕವನ್ನು ಪ್ರಧಾನ ಆಗಮಿಕ ಮಲ್ಲಣ್ಣ ನೇತೃತ್ವದಲ್ಲಿ ನೆರವೇರಿಸಿ ಅನ್ನಬ್ರಹ್ಮೋತ್ಸವ ನೈವೇದ್ಯ ಕೈಗೊಂಡು ಭಕ್ತರಿಗೆ ವಿತರಿಸಲಾಯಿತು. ಊರೊಳಗಿನ ಶ್ರೀಮಠಕ್ಕೆ ಕಲಾತಂಡಗಳ ಮೆರವಣಿಗೆಯಲ್ಲಿ ಉತ್ಸವಮೂರ್ತಿಯನ್ನು ಬಿಜಯಂಗೈಸುವುದರೊಂದಿಗೆ ಜಾತ್ರೆ ತೆರೆ ಕಂಡಿತು.

    ಆರು ದಿನಗಳ ಕಾಲ ನಿರಂತರವಾಗಿ ಜನಜಾಗೃತಿಯ ಕೇಂದ್ರವಾಗಿ ರೂಪಗೊಂಡಿದ್ದ ಜಾತ್ರಾ ಮಹೋತ್ಸವಕ್ಕೆ ಲಕ್ಷೋಪಾದಿಯಾಗಿ ಭಕ್ತಸಾಗರ ಹರಿದು ಬಂದಿತು. ಪ್ರತಿನಿತ್ಯ ಧಾರ್ಮಿಕ ಉತ್ಸವ, ಸಾಂಸ್ಕೃತಿಕ ಕಲರವ, ಕೃಷಿ ವೈವಿಧ್ಯ, ವಿಚಾರ ಸಂಕಿರಣ ಸೇರಿದಂತೆ ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಕಳೆಗಟ್ಟಿದ ಜಾತ್ರೆಗೆ ದೇಶ ವಿದೇಶ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಸಾಕ್ಷಿಯಾದರು.

    ಜಾತ್ರೆಯ ಮೊದಲ ದಿನ ವಸ್ತುಪ್ರದರ್ಶನ, ಕೃಷಿ ಮೇಳ ಹಾಗೂ ಸಾಂಸ್ಕೃತಿಕ ಮೇಳಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ವಿಧ್ಯುಕ್ತ ಚಾಲನೆ ನೀಡಿದ್ದರು. ಸಪ್ತಪದಿ ತುಳಿದ 178 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಸಾಕ್ಷಿಯಾದರು. ಅಂತರ್ಜಾತಿ 18, ಅಂಗವಿಕಲ ಜೋಡಿ 5, ವಿಧುರ-ವಿಧವೆ ಜೋಡಿ 2 ಹಾಗೂ ತಮಿಳುನಾಡಿನ 2 ಜೋಡಿ ಹೊಸಬಾಳಿಗೆ ಪಾದಾರ್ಪಣೆ ಮಾಡಿದ್ದು ಈ ಬಾರಿಯ ವಿಶೇಷ.

    ಈ ಭಾರಿ ಜೋಡಿರಥ ಸಾಗಿದ್ದು ಜಾತ್ರೆಗೆ ಮೆರಗು ಹೆಚ್ಚಿಸಿತು. ನೂತನ ರಥ ಸಾಗುವುದನ್ನು ಕಣ್ತುಂಬಿಕೊಳ್ಳಲು ನಿರೀಕ್ಷೆಗೆ ಮೀರಿ ಭಕ್ತರು ಆಗಮಿಸಿ ಕಳೆಗಟ್ಟಿಸಿದರು. ರಾಜ್ಯಮಟ್ಟದ ಭಜನಾ ಮೇಳದಲ್ಲಿ ದಾಖಲೆಯ 700 ತಂಡಗಳು ಭಾಗಿಯಾಗಿದ್ದವು. ಈ ಪೈಕಿ ಬಹುಪಾಲು ಉತ್ತರ ಕರ್ನಾಟಕ ಭಾಗದವರೇ ಹೆಚ್ಚಾಗಿದ್ದರು. ಜತೆಗೆ ನೆರೆಯ ಕೇರಳದಿಂದ 20 ತಂಡ ಭಾಗವಹಿಸಿದ್ದವು. ದನಗಳ ಜಾತ್ರೆಗೂ ಅಭೂತಪೂರ್ವ ಸ್ಪಂದನೆ ದೊರೆಯಿತು. 260 ಜೋಡಿ ಹಳ್ಳಿಕಾರ್, ವಿದೇಶಿ ತಳಿ, ಆರು ಕಾಲಿನ ಬಸವ ಸೇರಿದಂತೆ ನಾನಾ ತಳಿಯ ಜಾನುವಾರುಗಳನ್ನು ರೈತರು ಜಾತ್ರೆಗೆ ಕರೆತಂದಿದ್ದರು.

    ಸಾವಯವ ಕೃಷಿ ಹಾಗೂ ಜಲಸಂರಕ್ಷಣೆ ಬಳಕೆ ಕುರಿತು ಕೃಷಿ ವಿಚಾರ ಸಂಕಿರಣ ಆಯೋಜಿಸಿ ಪ್ರಗತಿಪರ ರೈತರ ಸಮ್ಮಿಳನಗೊಂಡಿತು. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 50 ಜೊತೆ ನಾಡಕುಸ್ತಿ ಅಖಾಡವನ್ನು ಧೂಳೆಬ್ಬಿಸಿದವು. ಮಹಾರಾಷ್ಟ್ರದ ಪುಣೆಯ ಕಾಕಪವರ್ ತಾಲೀಂನ ಪೈಲ್ವಾನ ಜಯದೀಪ ಗಾಯಕವಾಡ್ ಹಾಗೂ ಸಾಂಗ್ಲಿಯ ಗೋಸ್ಲೆ ವ್ಯಾಯಾಮ ಶಾಲೆಯ ಪೈಲ್ವಾನ್ ಸುದೇಶ್ ಠಾಕೂರ್ ನಡುವಿನ ಸುತ್ತೂರು ಕೇಸರಿ ಪ್ರಶಸ್ತಿಗಾಗಿ ರೋಚಕ ಹಣಾಹಣಿ ನಡೆದು ಡ್ರಾನಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆಯೋಜಕರು ಪ್ರಶಸ್ತಿಯನ್ನು ಮುಂದಿನ ವರ್ಷಕ್ಕೆ ಕಾಯ್ದಿರಿಸಿದರು. ಮಹದೇವಪುರ ಪೈ.ವಿಕಾಸ್ ಸುತ್ತೂರು ಕುಮಾರ ಪ್ರಶಸ್ತಿಗೆ ಭಾಜನರಾದರು.

    ಉಳಿದಂತೆ ಗ್ರಾಮೀಣರು ಹಾಗೂ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ದೇಸಿ ಆಟಗಳು, ಗಾಳಿಪಟ ಸ್ಪರ್ಧೆ, ರಂಗೋಲಿ, ಸೋಬಾನೆ ಪದ 1500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಜಾತ್ರೆಯಲ್ಲಿ ಉಳಿಯುವ ಭಕ್ತರಿಗಾಗಿ ಪ್ರತಿನಿತ್ಯ ರಾತ್ರಿ ಮೂರು ಕಡೆ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಮೇಳದಲ್ಲಿ 120 ಜೆಎಸ್‌ಎಸ್ ಅಂತರ ಕಾಲೇಜಿನ ನಾಲ್ಕು ಸಾವಿರ ವಿದ್ಯಾರ್ಥಿಗಳು ನಿತ್ಯ ಭರಪೂರ ಮನರಂಜನೆ ಉಣಬಡಿಸಿದರು. ಗದ್ದುಗೆ ವೇದಿಕೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ, ನೃತ್ಯ, ವಚನಗಾಯನ, ಸುಗಮ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.
    ಶನಿವಾರ ರಾತ್ರಿ ಕಪಿಲಾ ನದಿಯಲ್ಲಿ ಜಾತ್ರೆಯ ಅಂತಿಮ ಘಟ್ಟವಾಗಿ ಉತ್ಸವಮೂರ್ತಿಯ ವರ್ಣಾಲಂಕೃತ ತೆಪ್ಪೋತ್ಸವ ಹಾಗೂ ಬಾಣಬಿರುಸು ಪ್ರದರ್ಶನ ವೀಕ್ಷಣೆಗಾಗಿ ಕ್ಷೇತ್ರ ಜನಜಂಗುಳಿಯಿಂದ ಕೂಡಿತ್ತು. ರಸ್ತೆಬದಿ ವ್ಯಾಪಾಯ ವಹಿವಾಟು ಕೂಡ ಭರ್ಜರಿಯಾಗಿ ನಡೆಯಿತು.

    ಆಸರೆಯಾದ ಕೃಷಿ ಮೇಳ: ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಹಲವು ಮಹತ್ತರ ಪ್ರಯೋಜನಕಾರಿ ಅಂಶಗಳಿಂದ ಕೂಡಿದ ಕೃಷಿಮೇಳ ಆಸರೆಯಾಯಿತು. ನೀರಿನ ಮಿತ ಬಳಕೆ, ಭೌಗೋಳಿಕ ಹಿನ್ನೆಲೆಯಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಬ್ರಹ್ಮಾಂಡ, ವಿದೇಶಿ ಸಿರಿಧಾನ್ಯ ಪರಿಚಯ, ದೇಶಿ ಪಶು ತಳಿ ಸೇರಿದಂತೆ ಹಲವು ದೃಷ್ಟಿಕೋನದಿಂದ ರೈತರಿಗೆ ವರದಾನವಾಯಿತು. ಇನ್ನು ವಸ್ತುಪ್ರದರ್ಶನವನ್ನು 10 ಲಕ್ಷಕ್ಕೂ ಹೆಚ್ಚು ಜರನು ವೀಕ್ಷಿಣೆ ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಆರೋಗ್ಯ, ತಾಂತ್ರಿಕ, ಕರಕುಶಲ, ವಾಣಿಜ್ಯ, ಶೈಕ್ಷಣಿಕ ಹಾಗೂ ವಿಜ್ಞಾನ ಅರಿವು ಮೂಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts