More

    ಅರ್ಧಕ್ಕೆ ನಿಂತ ಹಿರೇಕೆರೂರ ಪಟ್ಟಣದ ಪ್ರವಾಸಿ ಮಂದಿರ

    ಹಿರೇಕೆರೂರ: ಪಟ್ಟಣದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಪ್ರವಾಸಿ ಮಂದಿರದ ನೂತನ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಪಟ್ಟಣದ ಹೃದಯ ಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರವಾಸಿ ಮಂದಿರವು ಈ ಮೊದಲು ಬ್ರಿಟಿಷರ ಕಾಲದಲ್ಲಿ ನಿರ್ವಣಗೊಂಡಿತ್ತು. ಇದು ಕಾಲಕ್ರಮೇಣ ಶಿಥಿಲಗೊಂಡು ಎಲ್ಲೆಂದರಲ್ಲಿ ಸೋರುತ್ತಿತ್ತು. ಈ ಹಿಂದೆ ಶಾಸಕರಾಗಿದ್ದ ಬಿ.ಸಿ. ಪಾಟೀಲ ಅವರು ಸರ್ಕ್ಯೂರ್ಟ್ ಹೌಸ್ ಮಂಜೂರು ಮಾಡಿಸಿದ್ದರು. ಅದು ನಿರ್ವಣಗೊಂಡು ಈವರೆಗೂ ಬಳಸಲಾಗುತ್ತಿದೆ.

    ಪಟ್ಟಣ ಬೆಳೆದಂತೆ ಅದರ ಅವಶ್ಯಕತೆಗೆ ತಕ್ಕಂತೆ ಹೊಸ ಕಟ್ಟಡ ನಿರ್ವಿುಸಲು ಯೋಜಿಸಲಾಗಿತ್ತು. ಬಿ.ಸಿ. ಪಾಟೀಲ ಕೃಷಿ ಸಚಿವರಾಗಿದ್ದಾಗ ಬ್ರಿಟಿಷರ ಕಾಲದ ಎರಡು ಬೃಹತ್ ಕಟ್ಟಡ ತೆರವುಗೊಳಿಸಿ, ಅಲ್ಲಿಯೇ ಕೆಳಮಹಡಿಯಲ್ಲಿ 4, ಮೇಲಂತಸ್ತಿನಲ್ಲಿ 2 ಕೊಠಡಿಗಳಿರುವ ಕಟ್ಟಡ ನಿರ್ವಿುಸಲು 3 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದರು.

    ಮಾರ್ಚ್ 18, 2021ರಲ್ಲಿ ತಾಂತ್ರಿಕ ಮಂಜೂರಾತಿ ದೊರೆತು, ಮೇ 31, 2021ರಂದು ಗುತ್ತಿಗೆದಾರರು ಕಾಮಗಾರಿ ಆರಂಭಿಸಿದರು. 11 ತಿಂಗಳ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸುವ ಕರಾರು ಇತ್ತು. ಆರಂಭದಿಂದಲೂ ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಕಟ್ಟಡ ಕಾಮಗಾರಿ ಕುಂಟುತ್ತ ಸಾಗಿ ಅಡಿಪಾಯ ಮಾತ್ರ ಹಾಕಲಾಗಿತ್ತು. ಆಗ ಎಇಇ ಪ್ರಕಾಶಗೌಡ ಪಾಟೀಲ ಅವರು ಮುತುವರ್ಜಿ ವಹಿಸಿ, ಗುತ್ತಿಗೆದಾರರಿಂದ ಕಾಮಗಾರಿಗೆ ಚುರಕು ನೀಡಿ, ಕೆಳ ಅಂತಸ್ತಿನ ಕಾಮಗಾರಿ ಮುಗಿಸಲಾಯಿತು. ನಂತರ ಅವರ ವರ್ಗಾವಣೆ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.

    ಕಟ್ಟಡದ ಮೇಲಂತಸ್ತಿನ ಗೋಡೆಗಳ ನಿರ್ಮಾಣ ಅರ್ಧಕ್ಕೆ ನಿಂತು ಬಹಳ ದಿನಗಳಾಗಿವೆ. ಈ ಬಗ್ಗೆ ಈಗಿರುವ ಲೋಕೋಪಯೋಗಿ ಇಲಾಖೆ ಎಇಇ ಮಾಲತೇಶ ಕಲ್ಲಮ್ಮನವರ, ಸಹಾಯಕ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅನೇಕ ಬಾರಿ ಪತ್ರ ವ್ಯವಹಾರ ಮಾಡಿದ್ದರೂ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

    ಬಸ್ ನಿಲ್ದಾಣದ ಪಕ್ಕದಲ್ಲಿರುವ ಪ್ರವಾಸಿ ಮಂದಿರ ನ್ಯಾಯಾಧೀಶರು, ನಟರು, ಗಣ್ಯರಿಗೆ ಹಾಗೂ ಸಣ್ಣಪುಟ್ಟ ಸಭೆ, ಸಮಾರಂಭ, ರಾಜಕೀಯ ಚಟುವಟಿಕೆಗೆ ಬಳಕೆಯಾಗುತ್ತಿತ್ತು. ಹಿರೇಕೆರೂರ ಮಾರ್ಗವಾಗಿ ಶಿರಸಿ, ಜೋಗ, ಕಾರವಾರ, ಮುರ್ಡೆಶ್ವರ ಪ್ರವಾಸಿ ತಾಣಗಳಿಗೆ ತೆರಳುವವರು ಈ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ.

    ಸರ್ಕ್ಯೂಟ್ ಹೌಸ್​ನಲ್ಲಿ ಕೊಠಡಿಗಳು ಕಡಿಮೆ ಇರುವುದರಿಂದ ಗಣ್ಯರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಲೋಕಸಭೆ, ಜಿಪಂ, ತಾಪಂ ಚುನಾವಣೆ, ಮೂರು ವರ್ಷಕ್ಕೊಮ್ಮೆ ಒಂದು ತಿಂಗಳವರೆಗೆ ಆಚರಿಸಲ್ಪಡುವ ಪಟ್ಟಣದ ದುರ್ಗಾದೇವಿ ಜಾತ್ರೆ ಸಮೀಪಿಸುತ್ತಿದೆ. ಹೀಗಾಗಿ, ಪ್ರವಾಸಿ ಮಂದಿರದ ಅಗತ್ಯ ಹೆಚ್ಚಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ, ಕೂಡಲೇ ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಬಳಕೆಗೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಕಟ್ಟಡ ಕಾಮಗಾರಿ ಕುರಿತು ನಾನು ಹಾಗೂ ಮೇಲಧಿಕಾರಿಗಳು ಅನೇಕ ಬಾರಿ ಪತ್ರಗಳ ಮೂಲಕ ಸೂಚನೆ ನೀಡಿದರೂ, ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ. ಮತ್ತೊಮ್ಮೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ಸೂಚನೆಯಂತೆ ಮುಂದೆ ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

    | ಮಾಲತೇಶ ಕಲ್ಲಮ್ಮನವರ, ಲೋಕಪಯೋಗಿ ಎಇಇ

    ಪಟ್ಟಣದ ಹೃದಯಭಾಗದಲ್ಲಿರುವ ಪ್ರವಾಸಿ ಮಂದಿರ ಎಲ್ಲರಿಗೂ ಉಪಯುಕ್ತವಾಗಿದೆ. ಹೊಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳಾಗಿವೆ. ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸುವಂತೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.

    | ರಮೇಶ ತೋರಣಗಟ್ಟಿ, ಪಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts