More

    ಕ್ರೈಸ್ತ ಭಕ್ತನಿಂದ ಸಿದ್ಧಿವಿನಾಯಕ ದೇಗುಲ ನಿರ್ಮಾಣ

    ಶಿರ್ವ: ಶಿರ್ವ ನ್ಯಾರ್ಮ ಬಳಿಯ ಹಳೆಹಿತ್ಲು ನಿವಾಸಿ ಕ್ರೈಸ್ತ ಧರ್ಮದ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಎಂಬುವರು ಶಿರ್ವದಲ್ಲಿ ಶ್ರೀ ಸಿದ್ಧಿ ವಿನಾಯಕ ದೇಗುಲ ನಿರ್ಮಿಸಿ ಹಿಂದುಗಳಿಗೆ ಕೊಡುಗೆಯಾಗಿ ನೀಡುವ ಮೂಲಕ ಸೌಹಾರ್ದ ಮೆರೆದಿದ್ದಾರೆ.

    ಮುಂಬೈಯಲ್ಲಿ ಉದ್ಯಮಿಯಾಗಿದ್ದ 77 ವಯಸ್ಸಿನ ಗ್ಯಾಬ್ರಿಯಲ್ ಸಿದ್ಧಿ ವಿನಾಯಕನ ಪರಮ ಭಕ್ತ. ಊರಿನಲ್ಲಿ ನೆಲೆಸಿದ 12 ವರ್ಷಗಳ ಬಳಿಕ ತಂದೆಯಿಂದ ಬಳುವಳಿಯಾಗಿ ಬಂದಿದ್ದ 15 ಸೆಂಟ್ಸ್ ಜಾಗದಲ್ಲಿ (ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು – ಅಟ್ಟಿಂಜ ಕ್ರಾಸ್ ಬಳಿ) ಸ್ವಂತ ಖರ್ಚಿನಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇಗುಲ ನಿರ್ಮಿಸಿದ್ದಾರೆ.

    ಹಳೆಹಿತ್ಲು ದಿ.ಫೇಬಿಯನ್ ಸೆಬಾಸ್ಟಿಯನ್ ನಜರತ್ – ದಿ.ಸಬೀನಾ ನಜರತ್ ದಂಪತಿಯ 11 ಮಕ್ಕಳಲ್ಲಿ ಗ್ಯಾಬ್ರಿಯಲ್ 5ನೆಯವರು. 1959ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ 14ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಮುಂಬೈ ಸೇರಿದ್ದರು. ಅಲ್ಲಿನ ಪ್ರಭಾದೇವಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ವಾಸ್ತವ್ಯವಿದ್ದು, ದಿನನಿತ್ಯ ಶ್ರೀ ಸಿದ್ಧಿವಿನಾಯಕನನ್ನು ಆರಾಧಿಸುತ್ತಿದ್ದರು. ಪರಿಶ್ರಮದ ಫಲವಾಗಿ ದೇವಸ್ಥಾನದ ಬಳಿ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್‌ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿ, 40 ವರ್ಷಗಳಲ್ಲಿ 3 ಕಡೆ ಉದ್ದಿಮೆ ಸ್ಥಾಪಿಸಿದರು. ಸ್ವಧರ್ಮದ ಜತೆಗೆ ಹಿಂದು ಧರ್ಮದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು 60 ವರ್ಷಗಳಿಂದ ಸಿದ್ಧಿವಿನಾಯಕನ ಭಕ್ತ. 50 ವರ್ಷಗಳಿಂದ ಪೂಜಿಸುತ್ತಿರುವ ದೇವರ ಮೂರ್ತಿಯೂ ಇವರಲ್ಲಿದೆ.

    ಸಮಾಜಸೇವಕ: ಕುಟುಂಬದ 21 ಸದಸ್ಯರ ಮದುವೆಯ ಖರ್ಚು ವೆಚ್ಚವನ್ನು ತಾನೇ ಭರಿಸಿದ್ದು, ಜಾತಿ, ಮತ, ಧರ್ಮದ ಭೇದವಿಲ್ಲದೆ 60ಕ್ಕೂ ಅಧಿಕ ಮಂದಿಯ ಮದುವೆಗೆ ಧನಸಹಾಯ ನೀಡಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಸರ್ವ ಧರ್ಮದ ಬಡಜನರ ಸೇವೆಗಾಗಿ ನಿವೇಶನ ಕೊಡುಗೆ ಸೇರಿದಂತೆ, ಪ್ರತಿವರ್ಷ ಸುಮಾರು 5 ಲಕ್ಷ ರೂ. ವ್ಯಯಿಸುತ್ತಿದ್ದಾರೆ. 8 ವರ್ಷ ಹಿಂದೆ ಬಂಟಕಲ್ಲು ಹೇರೂರು ಕಲ್ಲುಗುಡ್ಡೆ ಬಳಿ ನಾಗಬನ ಜೀರ್ಣೋದ್ಧಾರಗೊಳಿಸಿದ್ದಾರೆ.

    ಮೇ 4ರಂದು ಪ್ರತಿಷ್ಠಾಪನೆ
    ಪಲಿಮಾರು ಮಠಾಧೀಶರ ಮಾರ್ಗದರ್ಶನದಲ್ಲಿ ಮೇ 2ರಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, 4ರಂದು ಶ್ರೀ ಸಿದ್ಧಿ ವಿನಾಯಕನ ಪ್ರತಿಷ್ಠಾಪನೆ, ಬ್ರಹ್ಮಕಲಶ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನದಲ್ಲಿ ತ್ರಿಕಾಲ ಪೂಜೆ, ಸಂಕಷ್ಟಿ, ಚೌತಿಪೂಜೆ ಮತ್ತು ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ.

    ಮುಂಬೈಯ ಉದ್ದಿಮೆಯನ್ನು ಮಾರಿದ ಹಣವನ್ನು ಅಲ್ಲಿನ ಸಿಬ್ಬಂದಿಗೆ ದಾನವಾಗಿ ನೀಡಿದ್ದು, ಅವರೆಲ್ಲರ ಆಶೀರ್ವಾದದ ಬಲ ದೇಗುಲ ನಿರ್ಮಿಸಲು ಪ್ರೇರಣೆ ನೀಡಿದೆ. ಯಾರಿಂದಲೂ ವಂತಿಗೆ, ಕಾಣಿಕೆ ಪಡೆಯದೆ ಮಾತಾ-ಪಿತರ ನೆನಪಿಗಾಗಿ ದೇಗುಲ ನಿರ್ಮಿಸಿ ಕೊಡುಗೆಯಾಗಿ ನೀಡುತ್ತಿದ್ದೇನೆ. ಮುಂದಿನದು ಸಿದ್ಧಿವಿನಾಯಕನ ಇಚ್ಛೆ.
    – ಗ್ಯಾಬ್ರಿಯಲ್ ಫೇಬಿಯನ್ ನಜರತ್ ಶಿರ್ವ, ದೇಗುಲ ನಿರ್ಮಾತೃ

    — ಫೋಟೋ —
    ಶಿರ್ವ-16.ಎಪ್ರಿಲ್.01: ಶಿರ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿದ್ಧಿವಿನಾಯಕ ದೇವಳ.
    ಶಿರ್ವ-16.ಎಪ್ರಿಲ್.02. ಗ್ಯಾಬ್ರಿಯಲ್ ಫೇಬಿಯನ್ ನಜರತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts