More

    ಹೋಂ ಗಾರ್ಡ್ಸ್‌ಗಳಿಗೆ ಸಿಕ್ಕಿತು ದೀರ್ಘಾವಧಿ ಡ್ಯೂಟಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕರೊನಾ ಸೋಂಕು ತಡೆಗಾಗಿ ಘೋಷಿಸಿರುವ ಲಾಕ್‌ಡೌನ್‌ದಿಂದ ರಾಜ್ಯಗೃಹರಕ್ಷಕ ದಳದ ಸಿಬ್ಬಂದಿಗೆ ಇದೇ ಪ್ರಥಮ ಬಾರಿಗೆ ಹೆಚ್ಚು ಕಡಿಮೆ 2 ತಿಂಗಳ ಪೂರ್ಣಾವಧಿ ಕೆಲಸ ದೊರೆತಿದೆ.

    ಕರ್ತವ್ಯ ನಿರ್ವಹಣೆಗಾಗಿ ತಮ್ಮ ಸರದಿಗೆ ಕಾಯಬೇಕಾಗಿದ್ದ ಗೃಹ ರಕ್ಷಕರೆಲ್ಲ ಬಂದೋಬಸ್ತ್‌ಗೆ ನಿಯೋಜಿತರಾಗಿದ್ದು, ಅವರ ಈ ಕರ್ತವ್ಯದ ಅವಧಿ ಮೇ 15 ಅಥವಾ 30ರ ವರೆಗೂ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ.

    ಲಾಕ್‌ಡೌನ್‌ನ ಸಮಯದಲ್ಲಿ ಎಲ್ಲ ಸಿಬ್ಬಂದಿಗೆ ಕೆಲಸ ದೊರೆತಿರುವುದು, ಅವರಿಗೆ ಆರ್ಥಿಕವಾಗಿ ಹೆಚ್ಚಿನ ನೆರವು ದೊರೆತಂತಾಗಿದೆ. ರಾಜ್ಯದಲ್ಲಿ 30 ಸಾವಿರ ಮಂಜೂರು ಹುದ್ದೆಗಳಿದ್ದರೂ ಪ್ರಸ್ತುತ 25 ಸಾವಿರ ಗೃಹ ರಕ್ಷಕರಿದ್ದಾರೆ. ಇವರ ಸಂಖ್ಯೆಯನ್ನು 40 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಸಂಬಳವನ್ನೂ ಹೆಚ್ಚಿಸಬೇಕೆಂಬ ರಾಜ್ಯ ಸರ್ಕಾರದ ಯೋಜನೆ ಹತ್ತಾರು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಆದರೆ, ಕೆಲವು ತಿಂಗಳ ಹಿಂದೆ ಅನೇಕ ಜಿಲ್ಲೆಗಳಲ್ಲಿ ಖಾಲಿ ಇದ್ದ ನೂರಾರು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

    ಹೆಚ್ಚಿದ ಠಾಣಾ ಡ್ಯೂಟಿ ಸಂಬಳ: ಸಾಮಾನ್ಯ ದಿನಗಳಲ್ಲಿ ಸಿಬ್ಬಂದಿಯನ್ನು ಪಾಳಿ ಮೇಲೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಪೊಲೀಸ್, ಬೆಸ್ಕಾಂ, ಸರ್ಕಾರಿ ಆಸ್ಪತ್ರೆ, ಅಗ್ನಿಶಾಮಕ ದಳ, ಗಣಿಗಾರಿಕೆ ಮೊದಲಾದ ಪ್ರಮುಖ ಇಲಾಖೆಗಳಿಗೆ ಇವರನ್ನು ನಿಯೋಜಿಸಲಾಗುತ್ತದೆ. ಪ್ರಸ್ತುತ ಏಪ್ರಿಲ್ 2020 ರಿಂದ ಪೊಲೀಸ್ ಠಾಣೆಗೆ ನಿಯೋಜಿತರಾಗುವ ಗೃಹರಕ್ಷಕ ಸಿಬ್ಬಂದಿಗೆ ಮಾತ್ರ ದಿನದ ವೇತನ 385 ರೂ.ಗಳಿಂದ 750ರೂ.ಗೆ ಹೆಚ್ಚಳವಾಗಿದೆ. ಉಳಿದಂತೆ ಪ್ರತಿ ಸಿಬ್ಬಂದಿಗೆ ಅವರು ಕರ್ತವ್ಯ ನಿರ್ವಹಿಸಿದ ದಿನವೊಂದಕ್ಕೆ 385 ರೂ.ದೊರೆಯುತ್ತಿದೆ. ಒಬ್ಬ ಸಿಬ್ಬಂದಿಗೆ ವರ್ಷಕ್ಕೆ 5-6 ತಿಂಗಳ ಸೇವೆ ಅವಕಾಶ ಸಿಗುತ್ತದೆ.

    ಚುನಾವಣೆ ಸಂದರ್ಭದಲ್ಲಿ ಕರ್ತವ್ಯದ ದಿನಗಳ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ಅನ್ಯ ಜಿಲ್ಲೆ ಹಾಗೂ ಅನ್ಯರಾಜ್ಯಗಳಿಗೂ ನಿಯೋಜಿಸಲಾಗುತ್ತದೆ. ಗೃಹರಕ್ಷಕರಿಗೆ ಸಮವಸ್ತ್ರ, ಶೂ ಮತ್ತಿತರ ವಸ್ತುಗಳನ್ನು ಸರ್ಕಾರವೇ ನೀಡುತ್ತಿದ್ದರೂ, ಮಾಸಿಕ ಕನಿಷ್ಠ ವೇತನ ಮಂಜೂರಾದರೆ ಬದುಕಿಗೆ ನೆರವಾಗುತ್ತದೆ ಎಂಬುದು ಗೃಹರಕ್ಷಕರ ಪ್ರಮುಖ ಬೇಡಿಕೆಯಾಗಿದೆ.

    ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಹೇಳಿಕೆ: ಇದೇ ಏಪ್ರಿಲ್‌ನಿಂದ ಪೊಲೀಸ್ ಠಾಣೆಗೆ ನಿಯೋಜಿತರಾಗುವ ಸಿಬ್ಬಂದಿ ಸಂಬಳದಲ್ಲಿ ಹೆಚ್ಚಳವಾಗಿದೆ. ಕನಿಷ್ಠ ವೇತನ ಕೊಡಬೇಕೆಂಬ ಗೃಹರಕ್ಷಕರ ಬೇಡಿಕೆ ಸರ್ಕಾರದ ಮುಂದಿದೆ. ಚಿತ್ರದುರ್ಗ ಜಿಲ್ಲೆ 14 ಯೂನಿಟ್‌ಗಳಲ್ಲಿ 600 ಗೃಹರಕ್ಷಕರಿದ್ದಾರೆ. ಇತ್ತೀಚೆಗೆ 130 ಹುದ್ದೆಗಳು ಭರ್ತಿಯಾಗಿವೆ. ಹುದ್ದೆಗಳ ಭರ್ತಿಗೆ ಬಂದಿದ್ದ ಅಧಿಕ ಪ್ರಮಾಣದ ಅರ್ಜಿಗಳನ್ನು ಗಮನಿಸಿದರೆ ಈ ಸೇವೆಗೆ ಸೇರಲು ಯುವ ಜನರು ಆಸಕ್ತಿ ವಹಿಸುತ್ತಿದ್ದಾರೆಂದು ಹೇಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts