More

    ಗೋವಿಂದ ನಾಮಾವಳಿಯಲ್ಲಿ ಏಕಾದಶಿ ಕಳೆ

    ಚಿತ್ರದುರ್ಗ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸೋಮವಾರ ನಗರದ ವೆಂಕಟೇಶ್ವರ ಸ್ವಾಮಿ ದೇಗುಲಗಳು ಕಳೆಗಟ್ಟಿದ್ದವು. ಆಕರ್ಷಕ ಕಮಾನು, ವಿದ್ಯುತ್ ದೀಪಾಲಂಕಾರ, ಶಾಮಿಯಾನ ವ್ಯವಸ್ಥೆಗಳೊಂದಿಗೆ ಕಂಗೊಳಿಸಿದ ದೇವಾಲಯಗಳು ಭಕ್ತರನ್ನು ಸೆಳೆದವು.

    ಸ್ವರ್ಗದ ಬಾಗಿಲು ತೆರೆದುಕೊಳ್ಳುವ ಪುಣ್ಯದಿನ ಎಂಬ ನಂಬಿಕೆಯಿಂದ ದೇವಸ್ಥಾನಗಳಲ್ಲಿ ವೈಕುಂಠ ದ್ವಾರ ಏರ್ಪಾಡು ಮಾಡಲಾಗಿತ್ತು. ಸರದಿ ಸಾಲಿನಲ್ಲಿ ನಿಂತ ಅಪಾರ ಸಂಖ್ಯೆಯ ಭಕ್ತರು ತಿರುಮಲನ ದರ್ಶನ ಪಡೆದರು. ಗೋವಿಂದ.. ಗೋವಿಂದ.. ನಾಮಾವಳಿಯೊಂದಿಗೆ ಭಕ್ತಿ ಸಲ್ಲಿಸಿದರು.

    ನಸುಕಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ಅಭಿಷೇಕ, ಮಹಾಸಂಕಲ್ಪ, ವಿಷ್ಣು ಸಹಸ್ರಮಾನ, ಆಂಡಾಳ್ ತಿರುಪಾವೈ ಪಾರಾಯಣ, ಅಷ್ಟೋತ್ತರ, ಮಹಾಪ್ರಸಾದ, ಬಲಿ ಪ್ರದಾನ, ಮಹಾ ಮಹಾಮಂಗಳಾರತಿ ಬಳಿಕ ವೈಕುಂಠ ಬಾಗಿಲು ತೆರೆಯಲಾಯಿತು. ಬೆಳಗ್ಗೆ 6ರಿಂದ ರಾತ್ರಿ 10, 11ರ ವರೆಗೆ ದೇವಾಲಯಗಳಲ್ಲಿ ಭಕ್ತರಿಗೆ ಅಖಂಡ ದರ್ಶನಾವಕಾಶ ಕಲ್ಪಿಸಲಾಗಿತ್ತು.

    ದೇಗುಲಗಳಲ್ಲಿ ವೆಂಕಟೇಶ್ವರ ಸ್ವಾಮಿ-ಪದ್ಮಾವತಿ ದೇವಿಯನ್ನು ಹೂ, ತುಳಸಿ ಮಾಲೆಗಳಿಂದ ಅಲಂಕರಿಸಲಾಗಿತ್ತು. ಕೆಲವೆಡೆ ಹೊರಭಾಗದಲ್ಲಿ ದೇವರ ಮೂರ್ತಿಗಳ ಅಚ್ಚುಗಳ ಆಕರ್ಷಕವಾಗಿತ್ತು. ಸರದಿ ಸಾಲಿನಲ್ಲಿ ಬರಲು ದೇವಾಲಯ ಪ್ರವೇಶಕ್ಕೆ ಬ್ಯಾರಿಕೇಡ್‌ಗಳ ವ್ಯವಸ್ಥೆ ಇತ್ತು. ಧ್ವನಿಸುರುಳಿಯಲ್ಲಿ ಭಕ್ತಿಗೀತೆ, ಸಹಸ್ರ ನಾಮಾವಳಿ ಮೊಳಗಿದವು.

    ಅಲ್ಲಲ್ಲಿ ಕೇಸರಿಬಾತ್, ಬಾದಾಮಿ ಹಾಲು ಮೊದಲಾದ ಪ್ರಸಾದವಿತ್ತು. ದೇಗುಲದ ಹೊರಗೆ ಹೂವು-ಹಣ್ಣು, ಕೃಷ್ಣನ ಪುಸ್ತಕಗಳು ಇತರೆ ವಸ್ತುಗಳ ಮಾರಾಟ ನಡೆಯಿತು.

    ಮಾರುತಿ ನಗರದಲ್ಲಿ ಬಲಮುರಿ ಗಣಪತಿ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು. ಗೋನೂರು ರಸ್ತೆಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಕಾದು ನಿಂತಿದ್ದ ಭಕ್ತರ ಸಾಲು ದೊಡ್ಡದಿತ್ತು.
    ಇದೇ ರೀತಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts