More

    ಜಿಪಂ ಅಧ್ಯಕ್ಷೆ ರಾಜೀನಾಮೆ ಅಂಗೀಕಾರ

    ಚಿತ್ರದುರ್ಗ: ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ.

    ಮಾ.2ರಂದು ಅನಾರೋಗ್ಯದ ಕಾರಣ ನೀಡಿ ವಿಶಾಲಾಕ್ಷಿ ರಾಜೀನಾಮೆ ಸಲ್ಲಿಸಿದ್ದರು. ಆದರೆ, ನಿಗದಿತ ಅವಧಿಯೊಳಗೆ (ಮಾ.16)ಹಿಂಪಡೆಯದ ಕಾರಣದಿಂದಾಗಿ ಅವರ ರಾಜೀನಾಮೆ ಅಂಗೀಕಾರವಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಮಂಜೂರ್ ತಿಳಿಸಿದ್ದಾರೆ.

    ಪ್ರಸಕ್ತ ಅವಧಿ ಜಿಪಂ ನೂತನ ಅಧ್ಯಕ್ಷರಾಗಿ 2016 ಮೇ 4ರಂದು ಅಧಿಕಾರ ಸ್ವೀಕರಿಸಿದ್ದ ಹಿಂದಿನ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಕಾಂಗ್ರೆಸ್ ಪಕ್ಷದೊಳಗೆ ಆದ ಒಪ್ಪಂದಂತೆ ರಾಜೀನಾಮೆ ಕೊಡದ ಕಾರಣಕ್ಕೆ, ಉಳಿದ ಆಕಾಂಕ್ಷಿಗಳು ಅವರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಹರಸ ಸಾಹಸ ಪಟ್ಟಿದ್ದರು.

    ಅಂತಿಮವಾಗಿ ಸಾಮಾನ್ಯಸಭೆ, ಕೆಡಿಪಿ ಸಭೆಗಳಿಂದ ಕಾಂಗ್ರೆಸ್ ಸದಸ್ಯರು ದೂರುವುಳಿಯುವ ತಂತ್ರಗಾರಿಕೆಯನ್ನೂ ಅನುಸರಿಸಿದ್ದರು. ಕೊನೆಯದಾಗಿ 2019ರಂದು ಫೆ.7ರಂದು ಮಂಡಿಸಿದ್ದ ಅವಿಶ್ವಾಸಕ್ಕೆ ಜಯ ಸಿಕ್ಕಿದ್ದರಿಂದಾಗಿ ಕೊನೆಗೂ ಸೌಭಾಗ್ಯ ಬಸವರಾಜನ್ ಅಧಿಕಾರ ಬಿಟ್ಟುಕೊಡ ಬೇಕಾಯಿತು.

    ಇದಾದ ಬಳಿಕ ನಡೆದಿದ್ದ ಚುನಾವಣೆಯಲ್ಲಿ ಹೊಸದುರ್ಗ ತಾಲೂಕು ಬಾಗೂರು ಕ್ಷೇತ್ರದ ವಿಶಾಲಾಕ್ಷಿ ನಟರಾಜ್ ಜಿಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಇದೀಗ ಒಪ್ಪಂದಂತೆ 2021ರ ಮೇ 3ರ ವರೆಗೆ ಇರುವ ಅಧಿಕಾರ ಅವಧಿಗೆ ಉಳಿದ ಆಕಾಂಕ್ಷಿಗಳ ಆಯ್ಕೆ ಅನುಕೂಲಕ್ಕಾಗಿ ವಿಶಾಲಾಕ್ಷಿ ರಾಜೀನಾಮೆ ಕೊಟ್ಟಿದ್ದಾರೆ.

    ಪಕ್ಷಗಳ ಬಲಾಬಲ: 37 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಉಚ್ಛಾಟಿತ ಸದಸ್ಯರ ಸಹಿತ ಕಾಂಗ್ರೆಸ್ 23, ಜೆಡಿಎಸ್-2, ಪಕ್ಷೇತರರು 2 ಹಾಗೂ ಬಿಜೆಪಿ 10 ಸದಸ್ಯರಿದ್ದಾರೆ. ಪ್ರಸಕ್ತ ಸಾಲಿನ ಜಿಪಂ ಅಧಿಕಾರ ಅವಧಿ 2021 ಮೇ 3ರ ವರೆಗೆ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts