More

    ದುರ್ಗದಲ್ಲಿ ರೋಡಿಗಿಳಿದ ಕರೊನಾ…!

    ಚಿತ್ರದುರ್ಗ: ಇಡೀ ಜಗತ್ತಿನಾದ್ಯಂತ ರಣಕೇಕೆ ಹೊಡೆಯುತ್ತಿರುವ ಕರೊನಾ ವೈರಾಣು ಚಿತ್ರದುರ್ಗ ನಗರದಲ್ಲಿ ರೋಡಿಗಿಳಿದಿತ್ತು.

    ಬೇಕಾಬಿಟ್ಟಿ ಓಡಾಡುತ್ತಿರುವವರನ್ನು ವೈರಾಣು ಕೈ ಬೀಸಿ ಕರೆಯುತ್ತಿತ್ತು. ಇದೇನಪ್ಪ ವೈರಸ್ ರೋಡಿಗೆ ಬಂದಿತ್ತಾ ಅಂತ ಭಯ ಬೀಳಬೇಡಿ. ರೋಡಿಗೆ ಬಂದಿದ್ದು ಪೊಲೀಸ್ ಇಲಾಖೆಯಿಂದ ಕಲ್ಪಿತ ಪ್ರದರ್ಶನದ ವೈರಸ್…!

    ಹೌದು, ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸಂಜೀವಿನಿ ಗ್ರೂಪ್ಸ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕರೊನಾ ವೈರಸ್ ಹರಡುವ ಬಗ್ಗೆ ನಗರದ ಗಾಂಧಿ ವೃತ್ತದಲ್ಲಿ ಕಲ್ಪಿತ ಪ್ರದರ್ಶನ ನಡೆಸಿದರು.

    ನಗರದ ಹೃದಯಭಾಗ ಗಾಂಧಿ ವೃತ್ತದ ರಸ್ತೆ ಮೇಲೆ ಪೊಲೀಸ್ ಇಲಾಖೆಯಿಂದ ಬೃಹತ್ ಗಾತ್ರದಲ್ಲಿ ಕರೊನಾ ವೈರಾಣುವಿನ ಚಿತ್ರ ಬರೆಸಲಾಗಿತ್ತು. ಕಲಾವಿದ ರಂಗಸ್ವಾಮಿ ತಮ್ಮ ಕೈಚಳಕದಲ್ಲಿ ಕರೊನಾ ವೈರಾಣುವಿನ ಚಿತ್ರ ಬಿಡಿಸಿದ್ದರು.

    ಕರೊನಾ ವೈರಾಣು ಜನರನ್ನು ಹೇಗೆ ಅಟ್ಯಾಕ್ ಮಾಡುತ್ತೆ ಎಂಬುವುದನ್ನು ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಕಲ್ಪಿತ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹೆಲ್ಮೆಟ್‌ಗೆ ಕರೊನಾ ವೈರಸ್‌ನ ರೀತಿ ಡಿಸೈನ್ ಮಾಡಿಕೊಂಡು ರಸ್ತೆ ಮೇಲೆ ಓಡಾಡುವ ವಾಹನ ಸವಾರರ ಮೇಲೆ ಎರಗುತ್ತಿದ್ದರು. ಹಿನ್ನೆಲೆ ಧ್ವನಿಯಾಗಿ ಕರೊನಾ ವೈರಸ್ ಹೇಗೆ ಅಟ್ಯಾಕ್ ಮಾಡುತ್ತೆ ಎಂಬುವ ವಿವರಣೆ ನೀಡಲಾಗುತ್ತಿದೆ.

    ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಣಕು ಪ್ರದರ್ಶನ ವೀಕ್ಷಿಸಿ ಮಾತನಾಡಿ, ಜಿಲ್ಲೆ ಕರೊನಾ ಮುಕ್ತವಾಗಿದ್ದು, ಇದು ಎಲ್ಲರ ಸಾಮಾಜಿಕ ಜವಾಬ್ದಾರಿಯಿಂದ ಸಾಧ್ಯವಾಗಿದೆ. ಸಾರ್ವಜನಿಕರ ಸಹಕಾರ ಇದೇ ರೀತಿ ಮುಂದುವರಿಯಬೇಕು ಎಂದು ಆಶಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಕರೊನಾ ಎಂಬ ಮಹಾಮಾರಿ ನಡುವೆ ಪೊಲೀಸರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಪೊಲೀಸರ ಕೆಲಸಕ್ಕೆ ಸಾಥ್ ಕೊಡಬೇಕು ಎಂದು ಮನವಿ ಮಾಡಿದರು.

    ತಹಸೀಲ್ದಾರ್ ವೆಂಕಟೇಶ್ವರಯ್ಯ, ಡಿವೈಎಸ್ಪಿ ಪಾಂಡುರಂಗಪ್ಪ, ಸಿಪಿಐ ನಹೀಮ್, ಸಿಪಿಐ ಪ್ರಕಾಶ್ ಮತ್ತು ಸಂಚಾರ ಠಾಣೆ ಸಿಬ್ಬಂದಿ ಇದ್ದರು.

    ಮೈಮರೆತರೇ ಆಪತ್ತು ಖಚಿತ: ಜಿಲ್ಲೆಯಲ್ಲಿ ಕರೊನಾ ಇಲ್ಲ ಅಂದಾಕ್ಷಣ ಸಾರ್ವಜನಿಕರು ಮೈಮರೆಯಬಾರದು. ವೈರಸ್ ಅಂತ್ಯ ಆಗೋವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ನಿಲ್ಲಿಸಬೇಕು. ಆಗಾಗ ಸೋಪು ಅಥವಾ ಸ್ಯಾನಿಟೈಸರ್ ಬಳಸಿ ಕೈತೊಳೆದುಕೊಳ್ಳಬೇಕು ಎಂದು ಡಿಸಿ ವಿನೋತ್ ಪ್ರಿಯಾ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts