More

    ಕರೊನಾ ತ್ಯಾಜ್ಯ ವಿಲೇಗಿಲ್ಲ ಆಸಕ್ತಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕರೊನಾ ಹತೋಟಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ನಾಗರಿಕರಿಗೆ ದಂಡ ವಿಧಿಸಲಾಗುತ್ತಿದೆ.

    ಆದರೆ, ಮಾಸ್ಕ್ ಇತ್ಯಾದಿ ಕೋವಿಡ್-19 ತ್ಯಾಜ್ಯ ವಿಲೇಗಾಗಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಲು ಸ್ಥಳೀಯ ಸಂಸ್ಥೆಗಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ.

    ಸರ್ಕಾರಗಳೆನೋ ಸೋಂಕು ಹತೋಟಿಗೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಲಾಕ್‌ಡೌನ್‌ನಿಂದ ಭಾರೀ ಆರ್ಥಿಕ ಹೊಡೆತವೂ ಬಿದ್ದಿದೆ. ಇಂಥ ಸನ್ನಿವೇಶದಲ್ಲಿ ಕುಂಬಾರನಿಗೆ ಒಂದು ವರ್ಷ, ದೊಣ್ಣೆಗೆ ಒಂದು ನಿಮಿಷ ಎಂಬಂತೆ ಈವರೆಗಿನ ಎಲ್ಲ ಕ್ರಮಗಳು ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿ, ಎಲ್ಲಿ ಪರಿಸ್ಥಿತಿ ಬಿಗಾಡಿಸುತ್ತದೆಯೊ ಎಂಬ ಆತಂಕ ಎದುರಾಗಿದೆ.

    ಇತರೆ ಸೋಂಕು ಕಾಯಿಲೆಗಳ ಚಿಕಿತ್ಸೆ ತ್ಯಾಜ್ಯದ ವಿಲೇ ಸಂದರ್ಭದಲ್ಲಿ ವಹಿಸುವ ಎಚ್ಚರಿಕೆಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಕೋವಿ ಡ್-19 ತ್ಯಾಜ್ಯ ವಿಲೇಗೆ ವಹಿಸಬೇಕಿದೆ. ಕರೊನಾ ಭೀತಿಯಿಂದಾಗಿ ಈಗ ಬಳಕೆ ಆಗುತ್ತಿರುವ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಹೋಂ, ಸಾಂಸ್ಥಿಕ ಕ್ವಾರಂಟೈನ್, ಐಸೋಲೇಶನ್ ವಾರ್ಡ್, ಸ್ಯಾಂಪಲ್ಸ್ ಸಂಗ್ರಹ ಹಾಗೂ ಲ್ಯಾಬ್‌ಗಳಲ್ಲಿ ಬಳಸಿದ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್, ಫೇಸ್ ಶೀಲ್ಡ್ ಮೊದಲಾದ ಉಡುಪು-ಸಲಕರಣೆಗಳ ವಿಲೇಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಕೋವಿಡ್-19 ಎಂದು (ರೆಡ್‌ಬ್ಯಾಗ್) ಬರೆದಿರುವ ಡಬಲ್ ಲೇಯರ್ ಬ್ಯಾಗ್‌ಗಳಲ್ಲಿ ಮಾಸ್ಕ್ ಇತ್ಯಾದಿ ಪ್ರತ್ಯೇಕ ಸಂಗ್ರಹಿಸಿ ನೇರ ಬಯೋ ಮೆಡಿಕಲ್‌ವೇಸ್ಟ್ ಟ್ರಿಟ್‌ಮೆಂಟ್ ಪ್ಲಾಂಟ್‌ಗೆ ತೆಗೆದುಕೊಂಡು ಹೋಗಬೇಕಿದೆ. ವಿಲೇ ಮೊದಲು ಇತರೆ ತ್ಯಾಜ್ಯದೊಂದಿಗೆ ಇದನ್ನು ಸೇರಿಸದೇ ಪ್ರತ್ಯೇಕವಾಗಿಯೇ ಇಡಬೇಕಿದೆ. ಆಸ್ಪತ್ರೆಗಳಿಂದ ಬಯೋ ಮೆಡಿಕಲ್ ವೇಸ್ಟ್ ಸಂಗ್ರಹಿಸುವ ಗುತ್ತಿಗೆದಾರರು ಅಲ್ಲಿಂದಲೇ ನೇರ ವಿಲೇ ಘಟಕಕ್ಕೆ ತೆಗೆದುಕೊಂಡು ಹೋಗ ಬೇಕಿದೆ. ಆದರೆ, ಈ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ನಗರದಲ್ಲಿ ಸದ್ಯಕ್ಕಂತೂ ಕಂಡು ಬರುತ್ತಿಲ್ಲ.

    ತ್ಯಾಜ್ಯ ನಿರ್ವಹಣೆಗೆ ಕ್ರಮಕ್ಕೆ ಸೂಚನೆ: ಏಪ್ರಿಲ್ 30ರಂದು ನಡೆದ ಜಿಲ್ಲಾ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಂಡಳಿ ಮಾರ್ಗಸೂಚಿಯಂತೆ ತ್ಯಾಜ್ಯ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ವಿನೋತ್ ಪ್ರಿಯಾ ಸೂಚಿಸಿದ್ದಾರೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಇ.ಪ್ರಕಾಶ್ ತಿಳಿಸಿದ್ದಾರೆ. ಗ್ರಾಪಂ ಮಟ್ಟದಲ್ಲೂ ಮಾಸ್ಕ್ ಇತ್ಯಾದಿ ತ್ಯಾಜ್ಯ ಸಂಗ್ರಹಣೆ-ವಿಲೇಗೆ ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts