More

    ಅಂಗವಿಕಲರ ದ್ವಿಚಕ್ರ ಸವಾರಿ ಕನಸಿಗೆ ಲಾಕ್‌ಡೌನ್ ಬ್ರೇಕ್

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಅಂಗವಿಕಲ ಫಲಾನುಭವಿಗಳು ಕಂಡಿದ್ದ ರೆಟ್ರೊಫಿಟ್ಟೆಡ್ ದ್ವಿಚಕ್ರ ಮೋಟಾರ್ ವಾಹನಗಳ ಸವಾರಿ ಕನಸಿಗೆ ಕರೊನಾ ಲಾಕ್‌ಡೌನ್ ಬ್ರೇಕ್ ಹಾಕಿದೆ.

    ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಹೊಂದಿದ್ದ 2000 ದ್ವಿಚಕ್ರವಾಹನ ವಿತರಣೆ ಗುರಿ, 1200ಕ್ಕೆ ಕಡಿತಗೊಂಡಿದೆ. ಬಿಎಸ್- 4 ಬದಲು, ಬಿಎಸ್-6 ವಾಹನ ಖರೀದಿಸಬೇಕಿರುವುದರಿಂದ ಖರೀದಿ ವೆಚ್ಚ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಸರ್ಕಾರ ಗುರಿ ಸಾಧನೆಗೆ ಹೆಚ್ಚುವರಿ ಖರ್ಚು ಭರಿಸುತ್ತಿತ್ತೊ ಏನೋ? ಆದರೆ, ಈಗ ಹೆಚ್ಚುವರಿ ವೆಚ್ಚದ ಹೊರೆ ಭರಿಸುವ ಅನುಮಾನವಿದ್ದು, ಕರೊನಾದಿಂದಾಗಿ ವಾಹನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

    ಕಾಲು ಊನತೆ ಶೇ.75 ಅಥವಾ ಅದನ್ನು ಮೀರಿದ ಅಂಗವೈಕಲ್ಯವಿರುವ ಹಾಗೂ ಎರಡೂ ಕೈಗಳು ಚೆನ್ನಾಗಿರುವ ಅರ್ಹರಿಗೆ ದ್ವಿಚಕ್ರ ವಾಹನಗಳನ್ನು ಇಲಾಖೆ ವಿತರಿಸುತ್ತಿದೆ. ಇದರೊಂದಿಗೆ ತಮ್ಮ ಅಭಿವೃದ್ಧಿ ಅನುದಾನದಲ್ಲಿ ಶೇ.5 ಮೀಸಲು ಮೊತ್ತಕ್ಕೆ ಪಂ.ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು ದ್ವಿಚಕ್ರವಾಹನ ಅಥವಾ ಇತರೆ ಸವಲತ್ತುಗಳನ್ನು ವಿತರಿಸಬಹುದಾಗಿದೆ.

    ಧೂಳು ಹಿಡಿಯುತ್ತಿವೆ: ಶೇ. 5 ಮೀಸಲು ಮೊತ್ತದಲ್ಲಿ ಚಿತ್ರದುರ್ಗ ತಾಪಂ, ಒಂದು ವಾಹನಕ್ಕೆ ತಲಾ 80,800 ರೂ. ವೆಚ್ಚದಲ್ಲಿ ಖರೀದಿಸಿರುವ 31 ವಾಹನಗಳು ತಾಪಂ ಆವರಣದಲ್ಲಿ ಧೂಳು ಹಿಡಿಯುತ್ತಿವೆ. ಮಾರ್ಚ್ 2 ನೇ ವಾರದಲ್ಲಿ ವಾಹನಗಳು ತಾಪಂ ಆವರಣದಲ್ಲಿ ಅನ್‌ಲೋಡ್ ಆಗಿದ್ದು, ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ಪಟ್ಟಿ ಸಿದ್ಧವಾಗಿದ್ದರೂ ಫಲಾನುಭವಿಗಳಿಗೆ ಫಲ ಸಿಕ್ಕಿಲ್ಲ. ಏತನ್ಮಧ್ಯೆ ಈಗ ಖರೀದಿಸಿದ ಬಿಎಸ್-4 ವಾಹನಗಳ ನೋಂದಣಿ ಆಗುತ್ತದೆಯೇ ಎಂಬ ಜಿಜ್ಞಾಸೆ ಇದೆ.

    ಫಲಾನುಭವಿಗಳ ಆಯ್ಕೆ: ರೋಸ್ಟರ್ ಆಧರಿಸಿ 20 ವರ್ಷ-59 ವರ್ಷಒಳಗಿನವರನ್ನು ಆಯ್ಕೆ ಮಾಡಲಾಗುತ್ತದೆ. ಮಹಿಳೆಯರಿಗೆ, ಸ್ವಂತ ಉದ್ಯೋಗ ಮಾಡುವವರು ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವಂಥ ಅಥವಾ ಎರಡೂ ಕಾಲು ಊನವಿರುವಂಥ ಅರ್ಹರ ಆಯ್ಕೆಗೆ ಆದ್ಯತೆ ಇರುತ್ತದೆ.

    ರಾಜ್ಯದಲ್ಲಿ ಗುರುತಿಸಿರುವ ಫಲಾನುಭವಿಗಳ ಸಂಖ್ಯೆ (20-60 ವಯೋಮಿತಿ) 1,66,726.-ಚಿತ್ರದುರ್ಗ ಜಿಲ್ಲೆ-5161
    ಅರ್ಜಿ ಸಂಖ್ಯೆ-8674-ಚಿತ್ರದುರ್ಗ ಜಿಲ್ಲೆ-639
    ಫಲಾನುಭವಿ ಗುರಿ 1200-ಚಿತ್ರದುರ್ಗ ಜಿಲ್ಲೆ-88

    ಫಲಾನುಭವಿಗಳ ಪಟ್ಟಿ ಸಿದ್ಧವಿದ್ದು, ಖರೀದಿಸಿರುವ ವಾಹನಗಳನ್ನು ಲಾಕ್‌ಡೌನ್‌ನಿಂದಾಗಿ ವಿತರಿಸಲು ಸಾಧ್ಯವಾಗಿಲ್ಲ. ಇನ್ನೊಂದು ವಾರದೊಳಗೆ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಈಗ ಖರೀದಿಸಿದ ವಾಹನಗಳ ನೋಂದಣಿ ಮಾಡಿಸಿಕೊಡುವುದಾಗಿ ಪೂರೈಕೆ ಕಂಪನಿ ತಿಳಿಸಿದೆ.
    ಕೃಷ್ಣನಾಯಕ್ ಇಒ, ಚಿತ್ರದುರ್ಗ

    ಚಿತ್ರದುರ್ಗ ಜಿಲ್ಲೆಗೆ ಕಳೆದ ಸಾಲಿನ 48 ವಾಹನಗಳ ವಿತರಣೆ ಗುರಿ ಸಂಖ್ಯೆ ಈ ವರ್ಷ 88 ಕ್ಕೆ ಹೆಚ್ಚಾಗಿದೆ.
    ವೈಶಾಲಿ ಅಧಿಕಾರಿ
    ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts