More

    ಕಳಪೆ ಬಿತ್ತನೆ ಬೀಜ ದೇಶ ದ್ರೊಹದ ಕೆಲಸ

    ಚಿತ್ರದುರ್ಗ: ಕೃಷಿ ಪರಿಕರ, ಬೀಜ ಮತ್ತು ಗೊಬ್ಬರ ವಿತರಣೆ ವೇಳೆ ರೈತರಿಗೆ ಅನ್ಯಾಯ ಆಗುವಂತಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾರಾಟಗಾರರು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದರು.

    ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇತ್ತೀಚೆಗೆ ಕೃಷಿ ಇಲಾಖೆ, ಕೃಷಿ ಪರಿಕರ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರ, ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಬೀಜೋಪಚಾರ ಅಂದೋಲನದಲ್ಲಿ ಮಾತನಾಡಿದರು.

    ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸುವುದು ದೇಶ ದ್ರೋಹದ ಕೆಲಸ. ಕೃಷಿ ಪರಿಕರ, ಗೊಬ್ಬರ, ಬೀಜ ವಿತರಣೆಯಲ್ಲಿ ರೈತರಿಗೆ ಮೋಸ ಮಾಡಬಾರದು. ದೇಶದಲ್ಲಿ ಶೇ.60 ಜನ ಕೃಷಿಯನ್ನು ಅವಲಂಬಿಸಿದ್ದಾರೆ. ವ್ಯವಸಾಯದ ಯಶಸ್ಸಿನಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.

    ರೈತರು ಎದೆಗುಂದದೆ ಧೈರ್ಯವಾಗಿ ಕೃಷಿಯಲ್ಲಿ ತೊಡಗಬೇಕು. ರೈತರ ನೆರವಿಗೆ ಸರ್ಕಾರಗಳಿವೆ. ದೇಶದ ಸಂಪತ್ತಾಗಿರುವ ರೈತರ ಪರ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ. ಅಧಿಕಾರಿಗಳು ಸಮಪರ್ಕವಾಗಿ ಸೌಲಭ್ಯಗಳನ್ನು ತಲುಪಿಸಬೇಕು. ಪ್ರತಿ ರೈತರು ಫಸಲ್ ಬೀಮಾ ಯೋಜನೆ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

    ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಮಾತನಾಡಿ, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಈಗಾಗಲೇ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ನೀಡಿದ್ದು, ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ ಎಂದರು.

    ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟನಾಶಕ ತಜ್ಞ ಡಾ.ಓಂಕಾರಪ್ಪ ಮಾತನಾಡಿ, ದೇಶದ ಕೃಷಿ ಹಾಗೂ ಕೃಷಿಕರ ಏಳಿಗೆಯಲ್ಲಿ ಕೃಷಿ ಪರಿಕರ ಮಾರಾಟಗಾರರ ಹೊಣೆಯೂ ಅಧಿಕವಿದೆ ಎಂದು ತಿಳಿಸಿದರು.

    ಚಿತ್ರದುರ್ಗ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಹಿರಿಯೂರು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟನಾಶಕ ತಜ್ಞ ಡಾ.ರುದ್ರಮುನಿ, ಸಹಾಯಕ ಕೃಷಿ ನಿರ್ದೇಶಕರಾದ ಪ್ರಸನ್ನಕುಮಾರ್, ಜಿ.ಭಾರತಮ್ಮ, ರೈತ ಮುಖಂಡರಾದ ಧನಂಜಯ, ಬಾಬಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts