More

    ಉತ್ಸವಗಳ ಮೇಲೆ ಕರೊನಾ ಕರಿ ನೆರಳು

    ಚಿತ್ರದುರ್ಗ: ಕರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವತ್ರಿಕ ಕಾರ್ಯಕ್ರಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

    ಜಾತ್ರೆ, ರಥೋತ್ಸವ ಆಚರಣೆಗಳನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಜಾಗೃತಿಗೆ ಮುಂದಾಗಿದ್ದಾರೆ.

    ಮಾ.16ರಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಮರಿಪರಿಷೆಗೆ ಭಕ್ತರು ಆಗಮಿಸಬಾರದು ಎಂದು ಡಿಸಿ ಮನವಿ ಮಾಡಿದ್ದಾರೆ. ಅಂದು ದೇವಾಲಯದಲ್ಲಿ ಧಾರ್ಮಿಕ ವಿಧಿ, ವಿಧಾನಗಳು ನೆರವೇರಲಿವೆ. ಆದರೆ, ಯಾವುದೇ ಕಾರಣಕ್ಕೂ ಭಕ್ತರು ಸೇರುವಂತಿಲ್ಲವೆಂದು ಆದೇಶಿಸುವುದಾಗಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಜನ ಜೀವನ ಸಹಜ: ಚಿತ್ರದುರ್ಗದಲ್ಲಿ ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಬ್ಯಾಂಕ್, ಕೋರ್ಟ್ ಕಚೇರಿಗಳಿಗೆ ರಜೆ ಇತ್ತು. ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದ್ದರೂ ಕೆಲವು ಖಾಸಗಿ ವಿದ್ಯಾಸಂಸ್ಥೆಗಳ ಶಾಲೆಗಳಿಗೆ ವಿದ್ಯಾರ್ಥಿಗಳು ಬೆಳಗ್ಗೆ ತೆರಳಿದ್ದು ಕಂಡು ಬಂತು. ಪ್ರದರ್ಶನಗಳನ್ನು ರದ್ದುಪಡಿಸಲಾಗಿದೆ ಎಂಬ ಫಲಕ ಸಿನಿಮಾ ಮಂದಿರಗಳೆದುರು ಕಂಡು ಬಂತು. ಜನ ಜೀವನ ಸಹಜವಾಗಿತ್ತು.

    ಮಾಂಸ ಮಾರಾಟ ಸ್ಥಳದಲ್ಲಿ ಸ್ವಚ್ಛತೆಗೆ ಸೂಚನೆ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ನಗರ, ಪಟ್ಟಣ ವ್ಯಾಪ್ತಿಯ ಮಾಂಸ ಮಾರಾಟಗಾರರ ಸಭೆ ನಡೆಸಿ, ಮಾರಾಟ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಗಾಜಿನ ಕಪಾಟುಗಳಲ್ಲೇ ಮಾಂಸವನ್ನು ಇಟ್ಟಿರಬೇಕು. ಮಾರಾಟಗಾರರು ಮಾಸ್ಕ್, ಹ್ಯಾಂಡ್ ಗ್ಲೌಸ್ ಇತ್ಯಾದಿ ಧರಿಸಿಬೇಕೆಂದು ಸೂಚಿಸಲಾಗಿದೆ. ವೈರಸ್ ಕುರಿತು ಜಾಗೃತಿ ಮೂಡಿಸುವಂತೆ ಸಂಸ್ಥೆಗಳಿಗೆ ಜಿಲ್ಲಾ ಯೋಜನಾ ಶಾಖೆ ಸೂಚಿಸಿದೆ.

    ಬ್ರಹ್ಮೋಪದೇಶ ಸರಳ ಆಚರಣೆ: ಚಿತ್ರದುರ್ಗ ಬುರುಜನಹಟ್ಟಿ ರಸ್ತೆ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಮಾ.15ರ ಬೆಳಗ್ಗೆ 11ಕ್ಕೆ ಆಯೋಜಿಸಿದ್ದ ಸಾಮೂಹಿಕ ಉಪನಯನ (ಬ್ರಹ್ಮೋಪದೇಶ) ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ವಿಶ್ವಬ್ರಾಹ್ಮಣ ಜಗದ್ಗುರು ಅರೇಮಾದನಹಳ್ಳಿ ಮಹಾಸಂಸ್ಥಾನ ಮಠ ಅರಕಲಗೂಡಿನ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಡ್ಡನಹಾಳು ಬೆಲಗೂರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರೀ ಪೀಠದ ಸ್ವಾಮಿ ಶಂಕರಾತ್ಮಾನಂದ ಸರಸ್ವತಿ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

    ‘ಸಪ್ತಪದಿ’ ವಿಚಾರ ಸಂಕಿರಣ ಮುಂದಕ್ಕೆ: ಧಾರ್ಮಿಕ ದತ್ತಿ ಇಲಾಖೆ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಮಾ.15ರ ಮಧ್ಯಾಹ್ನ 3ಕ್ಕೆ ಚಿತ್ರದುರ್ಗ ಪೋಲಿಸ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts