More

    ವೈಕುಂಠ ಮಂಟಪದಲ್ಲಿ ‘ಅನ್ನದಕೋಟೆ’ ವೈಭವ

    ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆ ದೇವರಪುರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿಗೆ ಸೋಮವಾರ ತಡರಾತ್ರಿ ಕೃಷ್ಣಾಚಲ ಬೆಟ್ಟದಲ್ಲಿ ‘ಗುಂಡಿನಸೇವೆ’ ಪೂಜೆ, ವೈಕುಂಠ ಮಂಟಪದಲ್ಲಿ ಮಂಗಳವಾರ ‘ಅನ್ನದಕೋಟೆ’ ಮಹೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

    16 ವರ್ಷದ ನಂತರ ನಡೆದ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರ ದಂಡೇ ಹರಿದುಬಂದಿತ್ತು. ಕೃಷ್ಣಾಚಲ ಬೆಟ್ಟದಲ್ಲಿ ಸೋಮವಾರ ತಡರಾತ್ರಿ ಗುಂಡಿನಸೇವೆ ಪೂರ್ಣಗೊಂಡ ನಂತರ ಲಕ್ಷ್ಮೀನರಸಿಂಹಸ್ವಾಮಿ, ತಾಳ್ಯದ ಆಂಜನೇಯಸ್ವಾಮಿ, ಗ್ರಾಮದೇವತೆ ಕರಿಯಮ್ಮ ದೇವಿಯನ್ನು ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಮಂಗಳವಾರ ಮುಂಜಾನೆ ಮಂಟಪಕ್ಕೆ ಕರೆತರಲಾಯಿತು. ಈ ವೇಳೆ ಇತರೆ ದೇವರ ಮೂರ್ತಿಗಳನ್ನು ಸಾಲಾಗಿ ಕೂರಿಸಲಾಗಿತ್ತು.

    ಎಚ್.ಡಿ.ಪುರ ಪ್ರವೇಶಿಸುವ ನಾಲ್ಕಾರು ದಿಕ್ಕುಗಳಿಂದ ಭಕ್ತಸಾಗರ ಹರಿದು ಬರಲಾರಂಭಿಸಿತು. ಬೆಳಗ್ಗೆ 10ಕ್ಕೆ ಇಡೀ ಮಂಟಪ, ಸ್ವಾಮಿ ಸನ್ನಿಧಿ ಮುಂಭಾಗ ಕಣ್ಣಾಯಿಸಿದಷ್ಟು ದೂರ ಜನ ಕಿಕ್ಕಿರಿದು ಸೇರಿದ್ದರು.

    ಭವ್ಯ ವೈಕುಂಠ ಮಂಟಪದೊಳಗೆ ಸ್ವಾಮಿ ಒಳಗೊಂಡು ಚಿತ್ರದುರ್ಗ, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕಿನ 69 ಗ್ರಾಮಗಳ 101 ದೇವರ ಉತ್ಸವ ಮೂರ್ತಿಗಳ ಸಮ್ಮುಖದಲ್ಲಿ ಪೂಜೆಗೆ ಚಾಲನೆ ದೊರೆಯಿತು. ಹತ್ತಾರು ಅರ್ಚಕರು ಶಾಸ್ತ್ರ, ಸಂಪ್ರದಾಯದೊಂದಿಗೆ ಲೋಕಕಲ್ಯಾಣಾರ್ಥ ಹೋಮ ನಡೆಸಿದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಎಸ್‌ಎಲ್‌ಎನ್ ಟ್ರಸ್ಟ್‌ನ ಅಧ್ಯಕ್ಷ ಎಚ್.ಡಿ.ರಂಗಯ್ಯ ಸೇರಿ ಇತರೆ ಗಣ್ಯರು ಪೂರ್ಣಾಹುತಿ ನಡೆಸಿಕೊಟ್ಟರು. ಆಹ್ವಾನಿತ ದೇವರ ಮೂರ್ತಿಗಳಿಗೆ ಮಹಾಮಂಗಳಾರತಿ, ನೈವೇದ್ಯ ಸಮರ್ಪಿಸಲಾಯಿತು.

    ಕಂಗೊಳಿಸಿದ ಅನ್ನದಕೋಟೆ: ಗುಂಡಿನ ಸೇವೆ ಮುಗಿದ ಬಳಿಕ ಬೆಳಗ್ಗೆ 35 ಕ್ವಿಂಟಲ್‌ನಷ್ಟು ಆಹಾರ ಪದಾರ್ಥಗಳೊಂದಿಗೆ ಎರಡು ಅಡಿಯಷ್ಟು ಎತ್ತರದ ಅನ್ನದ ಕೋಟೆಯನ್ನು ನಿರ್ಮಿಸಲಾಗಿತ್ತು. ಮೇಲ್ಭಾಗದಲ್ಲಿ ವಿಘ್ನನಿವಾರಕ ವಿನಾಯಕ, ಪಂಚ ಕಳಶ ಸ್ಥಾಪಿಸಿ ಸುತ್ತಲೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅನ್ನಕ್ಕೆ ಬೆಲ್ಲದ ಹಾಲು, ದ್ರಾಕ್ಷಿ, ಗೋಡಂಬಿ, ಬಾದಾಮಿ ಮಿಶ್ರಣ ಮಾಡಿ ಅರ್ಚಕ ಸಮೂಹ ಅನ್ನದಕೋಟೆ ಕಟ್ಟಿದರು. ಇದಕ್ಕಾಗಿ ಕಾಯಾಲು, ಹಾಲು, ಸಕ್ಕರೆ, ಬಾಳೆಹಣ್ಣನ್ನೂ ಬಳಸಲಾಯಿತು. ಬೃಹತ್ ಹೂವಿನ ಹಾರ ಹಾಕಿ ಪೂಜಿಸಲಾಯಿತು.

    ಅನ್ನದಕೋಟೆ ಮುಂಭಾಗ ಸಾವಿರಾರು ಮಂದಿ ಕುಳಿತು ಪೂಜಾ ವಿಧಿ-ವಿಧಾನ ವೀಕ್ಷಿಸಲು ಎಸ್‌ಎಲ್‌ಎನ್ ಟ್ರಸ್ಟ್ ಅವಕಾಶ ಕಲ್ಪಿಸಿತ್ತು. ಪೂಜೆ ಆರಂಭದಿಂದ ಮುಕ್ತಾಯದವರೆಗೂ ಕೆಳಗೆ ಕೂತವರು ಮೇಲೇಳಲಿಲ್ಲ. ರಂಗಪ್ಪ, ಲಕ್ಷ್ಮೀನರಸಿಂಹ, ವೆಂಕಟೇಶ, ತಿಮ್ಮಪ್ಪ, ನಾರಾಯಣ, ಗೋವಿಂದ ಗೋವಿಂದ… ಎಂಬ ಜಯಘೋಷ ಮೊಳಗಿಸಿದರು.

    ಸ್ವಾಮಿಗೆ ಪೂಜೆ ನೆರವೇರಿಸಲು ಗುಂಡಿನ ದಾಸಯ್ಯ ಜಗದೀಶ್ ಅವರ ಮುಖಕ್ಕೆ ಶ್ವೇತ ವಸ್ತ್ರ ಮುಚ್ಚಿ ಕರೆತರಲಾಯಿತು. ನಂತರ ಅನ್ನದಕೋಟೆ ಬಳಿಗೂ ಕರೆತಂದರು. ಅರ್ಚಕರು, ದಾಸಯ್ಯಗಳು ಪೂಜೆ ಸಲ್ಲಿಸಿದರು. ಈ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.
    ದೇವರಿಗೆ ನೈವೇದ್ಯ ಸಮರ್ಪಣೆಯಾದ ಬಳಿಕ ಅನ್ನದಾಸೋಹ ಆರಂಭವಾಯಿತು. ಸಾವಿರಾರು ಮಂದಿ ಅನ್ನ-ಸಾಂಬಾರು, ಪಲ್ಯ, ಲಾಡು ಪ್ರಸಾದ ಸ್ವೀಕರಿಸಿದರು.
    ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts