More

    ಚಿಂಚೋಳಿಯಲ್ಲಿ ೭,೪೬,೦೫೦ ಮಾನವ ದಿನ ಸೃಷ್ಟಿ

    ಶಿವರಾಜ ವಾಲಿ ಚಿಂಚೋಳಿ: ಬಹುತೇಕ ವಿಭಾಗದಲ್ಲೂ ಹಿಂದುಳಿದಿರುವ ಗಡಿ ತಾಲೂಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾತ್ರ ದಾಖಲೆ ಬರೆದಿದೆ. ಬರೋಬ್ಬರಿ ೭,೪೬,೦೫೦ ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ.

    ಅನಕ್ಷರತೆ ಹಾಗೂ ಬಡತನದಿಂದಾಗಿ ತಾಲೂಕಿನಲ್ಲಿ ಗುಳೆ ಹೋಗುವವರ ಸಂಖ್ಯೆ ಹೆಚ್ಚಿತ್ತು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಪರಿಣಾಮಕಾರಿಯಾಗಿ ಉದ್ಯೋಗ ಖಾತ್ರೆ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿತ್ತು. ಒಟ್ಟು ೯,೯೧,೬೫೧ ಮಾನವ ದಿನಗಳನ್ನು ಸೃಷ್ಟಿಸಿ ಕಾರ್ಮಿಕರಿಗೆ ಉದ್ಯೋಗ ಕಲ್ಪಸಲು ಗುರಿ ಇಟ್ಟುಕೊಂಡಿದ್ದು, ಇದೀಗ ಬರೋಬ್ಬರಿ ೭,೪೬,೦೫೦ ಮಾನವ ದಿನಗಳನ್ನು ಸೃಷ್ಟಿಸಿ ದಾಪುಗಾಲು ಇಟ್ಟಿದೆ.

    ಬೇಸಿಗೆ ಪ್ರಾರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಹೀಗಾಗಿ ತಾಲೂಕು ಆಡಳಿತ ನರೇಗಾ ಚುರುಕುಗೊಳಿಸಿದೆ. ಇಲ್ಲಿವರೆಗೂ ೩೩,೨೮೨ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಪರಿಶೀಲಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಇಒ ಶಂಕರ ರಾಠೋಡ್ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

    ತಾಲೂಕಿನಲ್ಲಿ ೪೪,೯೧೭ಕ್ಕೂ ಅಧಿಕ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಲಾಗಿದ್ದು, ೭೦ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಉದ್ಯೋಗ ಪಡೆಯಲು ಅರ್ಹತೆ ಹೊಂದಿದ್ದಾರೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕೆರೆ ಮತ್ತು ಹಳ್ಳಗಳ ಹೂಳೆತ್ತುವುದು, ನಾಲಾ ಸ್ವಚ್ಛತೆ, ರೈತರ ಜಮೀನುಗಳಲ್ಲಿ ಬದು (ಒಡ್ಡು), ಕೃಷಿ ಹೊಂಡ, ದನದ ಕೊಟ್ಟಿಗೆ ನಿರ್ಮಾಣ, ಸಿಸಿ ರಸ್ತೆ ಸೇರಿ ಇನ್ನಿತರ ಕೆಲಸಗಳು ನಡೆಯುತ್ತಿವೆ.
    ಒಟ್ಟಿನಲ್ಲಿ ತಾಲೂಕಿನಾದ್ಯಂತ ಅಚ್ಚುಕಟ್ಟಾಗಿ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿಯೇ ಆಳಂದ ೭,೮೦,೦೦೦ ಮಾನವ ದಿನ ಸೃಷ್ಟಿಸಿ ಪ್ರಥಮ ಸ್ಥಾನದಲ್ಲಿದ್ದರೆ, ಚಿಂಚೋಳಿ ಸೆಕೆಂಡ್ ಪ್ಲೆಸ್‌ನಲ್ಲಿದೆ. ಸಾಕಷ್ಟು ಕಾರ್ಮಿಕರು ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸುತ್ತಿದ್ದಾರೆ.

    ಜಿಲ್ಲೆಯ ಅಂಕಿ- ಸಂಖ್ಯೆ
    (೨೦೨೩ರ ಎಪ್ರಿಲ್‌ನಿಂದ)
    ತಾಲೂಕು ಮಾನವ ದಿನಗಳು
    ಆಳಂದ ೭೮೬೯೩೩
    ಚಿಂಚೋಳಿ ೭೪೬೦೪೫
    ಜೇವರ್ಗಿ ೭೩೬೯೫೨
    ಅಫಜಲಪುರ ೫೨೩೧೬೬
    ಯಡ್ರಾಮಿ ೪೮೯೭೧೩
    ಕಲಬುರಗಿ ೪೮೩೭೮೨
    ಕಮಲಾಪುರ ೪೩೯೭೮೦
    ಚಿತ್ತಾಪುರ ೩೮೦೩೯೨
    ಸೇಡಂ ೩೪೩೦೪೭
    ಕಾಳಗಿ ೩೩೪೨೧೫
    ಶಹಾಬಾದ್ ೧೧೩೫೬೭

    ನರೇಗಾ ಯೋಜನೆ ಬಡವರ ಪಾಲಿನ ಸಂಜೀವಿನಿಯಾಗಿದೆ. ಪ್ರತಿಯೊಬ್ಬರಿಗೂ ೧೦೦ ದಿನ ಕೆಲಸ ನೀಡಿ, ವಾರಕ್ಕೆ ಕೂಲಿ ಹಣ ನೀಡುತ್ತಿದ್ದು, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ೧೫೦ ಮಾನವ ದಿನಗಳು ಘೋಷಿಸಿದರೆ ಇನ್ನಷ್ಟು ಅನುಕೂಲವಾಗಲಿದೆ.
    | ನಿರ್ಮಲಾ ಹಸರಗುಂಡಗಿ, ಕಾರ್ಮಿಕ ಮಹಿಳೆ

    ಗುಳೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಲ್ಲಿ ಹೆಚ್ಚು ಕೂಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುವಂತೆ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರು ಸರ್ಕಾರದ ಯೋಜನೆಗಳ ಲಾಭ ಪಡೆದು, ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೆ ಪ್ರತಿ ಕಾಮಗಾರಿಯನ್ನು ಪರಿಶೀಲಿಸುತ್ತಿದ್ದು, ಅಕ್ರಮ ಕಂಡುಬಂದರೆ ಕ್ರಮ ಜರುಗಿಸಲಾಗುತ್ತಿದೆ.
    | ಶಂಕರ ರಾಠೋಡ್, ಕಾರ್ಯನಿರ್ವಾಹಕ ಅಧಿಕಾರಿ, ತಾಪಂ, ಚಿಂಚೋಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts