More

    ಹ್ಯಾಟ್ರಿಕ್​ನತ್ತ ಜಿನ್​ಪಿಂಗ್; ಸಿಪಿಸಿ ಸಮಾವೇಶದಲ್ಲಿ ನಿರ್ಣಯ, ಬಲ ಹೆಚ್ಚಿಸಿಕೊಂಡ ಚೀನಾ ಅಧ್ಯಕ್ಷ

    ಬೀಜಿಂಗ್: ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಅಧಿಕಾರವನ್ನು ದಾಖಲೆಯ ಮೂರನೇ ಅವಧಿಗೂ ವಿಸ್ತರಿಸಲು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಉನ್ನತ ಮಟ್ಟದ ಸಮಾವೇಶವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ಒಂದು ಶತಮಾನದಲ್ಲಿ ಪಕ್ಷದ ಸಾಧನೆಗಳನ್ನು ಶ್ಲಾಘಿಸುವ ನಿರ್ಣಯದ ಜತೆಗೆ ಜಿನ್​ಪಿಂಗ್​ರನ್ನು 3ನೇ ಅವಧಿಗೂ ಮುಂದುವರಿಸುವ ತೀರ್ವನವನ್ನು ನವೆಂಬರ್ 8ರಿಂದ 11ರ ವರೆಗೆ ನಡೆದ ಸಿಪಿಸಿ ಕೇಂದ್ರ ಸಮಿತಿಯ ಪ್ಲೀನರಿ ಅಧಿವೇಶನ ನಿರ್ಧರಿಸಿದೆ. ಇದರೊಂದಿಗೆ ಸರ್ಕಾರ ಮತ್ತು ಪಕ್ಷದ ಮೇಲೆ ಜಿನ್​ಪಿಂಗ್ ಹಿಡಿತ ಇನ್ನಷ್ಟು ಬಲಗೊಳ್ಳಲಿದೆ.

    ಅಧಿವೇಶನದ ಇನ್ನಷ್ಟು ವಿವರಗಳನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಜಿನ್​ಪಿಂಗ್ ಅಧ್ಯಕ್ಷತೆಯ ಐದು ವರ್ಷಗಳ ಎರಡನೇ ಅವಧಿ ಮುಂದಿನ ವರ್ಷ ಮುಗಿಯಲಿದೆ. ಮೊದಲ ಅವಧಿಯ ಮುಕ್ತಾಯದ ಹೊತ್ತಿಗೆ ನಡೆದ ಪಕ್ಷದ ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಆಜೀವ ಪರ್ಯಂತ ಅಲಂಕರಿಸಬಹುದು ಎಂಬ ಠರಾವನ್ನು ಅಂಗೀಕರಿಸಲಾಗಿತ್ತು. 68 ವರ್ಷದ ಜಿನ್​ಪಿಂಗ್ ಸಿಪಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರೀಯ ಮಿಲಿಟರಿ ಆಯೋಗದ (ಸಿಎಂಸಿ) ಹಾಗೂ ದೇಶದ ಅಧ್ಯಕ್ಷ ಹೀಗೆ ಮೂರೂ ಆಯಕಟ್ಟಿನ ಹುದ್ದೆಗಳನ್ನು ಹೊಂದಿರುವ ಮೂಲಕ ಪಕ್ಷದ ಸಂಸ್ಥಾಪಕ ಮಾವೋ ಝೆಡುಂಗ್​ರ ನಂತರ ಬಲಿಷ್ಠ ನಾಯಕರಾಗಿ ಹೊರ ಹೊಮ್ಮಿದ್ದಾರೆ.

    ಭಾರತದ ಸ್ಪಷ್ಟನೆ: ಭಾರತದ ಪ್ರದೇಶಗಳನ್ನು ಚೀನಾ ಅಕ್ರಮವಾಗಿ ಅತಿಕ್ರಮಿಸಿರುವುದನ್ನು ದೇಶ ಒಪ್ಪಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಅರುಣಾಚಲ ಪ್ರದೇಶದಲ್ಲಿ ನೂರು ಮನೆಗಳುಳ್ಳ ಒಂದು ಗ್ರಾಮವನ್ನು ಚೀನಾ ನಿರ್ವಿುಸಿರುವ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ವರದಿ ಮಾಡಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಹಲವು ದಶಕಗಳಲ್ಲಿ ಅತಿಕ್ರಮಿಸಿಕೊಂಡಿರುವ ಪ್ರದೇಶಗಳ ಸಹಿತ ಗಡಿ ಭಾಗಗಳಲ್ಲಿ ಅನೇಕ ವರ್ಷಗಳಿಂದ ಚೀನಾ ನಿರ್ಮಾಣ ಚಟುವಟಿಕೆಗಳನ್ನು ನಡೆಸುತ್ತಿದೆ. ‘ಭಾರತ ಯಾವತ್ತೂ ಇಂಥ ಕಾನೂನುಬಾಹಿರ ಅತಿಕ್ರಮಣಗಳನ್ನು ಒಪ್ಪಿಕೊಂಡಿಲ್ಲ ಅಥವಾ ಚೀನಾದ ಅಸಮರ್ಥನೀಯ ಕ್ಲೇಮುಗಳನ್ನು ಅಂಗೀಕರಿಸಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಹೇಳಿದ್ದಾರೆ. ಇದನ್ನು ಚೀನಾಕ್ಕೆ ಪದೇ ಪದೆ ತಿಳಿಸಲಾಗಿದ್ದು ಮುಂದೆಯೂ ಸ್ಪಷ್ಟಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಭಾರತ ಮತ್ತು ಚೀನಾ ನಡುವೆ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್​ಎಸಿ) ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಗ್ರಾಮ ನಿರ್ವಣದ ವಿಚಾರವನ್ನು ಉಲ್ಲೇಖಿಸಿತ್ತು.

    ಏಷ್ಯಾ-ಪೆಸಿಫಿಕ್​ನಲ್ಲಿ ಶೀತಲ ಸಮರ: ಏಷ್ಯಾ-ಪೆಸಿಫಿಕ್ ವಲಯದಲ್ಲಿ ಬಿಗುವಿನ ವಾತಾವರಣಕ್ಕೆ ಅವಕಾಶ ಕಲ್ಪಿಸಿದರೆ ಶೀತಲ ಸಮರವೇ ಶುರುವಾಗಬಹುದು ಎಂದು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಗುರುವಾರ ಎಚ್ಚರಿಸಿದ್ದಾರೆ. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್) ವೇದಿಕೆಯ ವಾರ್ಷಿಕ ಶೃಂಗಸಭೆ ಸಂದರ್ಭ ಮಾತನಾಡಿದ ಅವರು, ಶೀತಲ ಸಮರದ ಕಿಡಿ ಹೊತ್ತಿಸಲು ಕೆಲವು ರಾಷ್ಟ್ರಗಳು ಚಿತಾವಣೆ ನಡೆಸಿವೆ ಎಂದು ಅಮೆರಿಕ, ಬ್ರಿಟನ್ ಮತ್ತು ಅಸ್ಟ್ರೇಲಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕೆಲವು ವಾರಗಳ ಹಿಂದೆ ಈ ವಲಯದಲ್ಲಿ ಹೊಸ ಭದ್ರತಾ ಮೈತ್ರಿ ಕೂಟ ರಚಿಸಿಕೊಂಡಿರುವುದು ಚೀನಾದ ಕೋಪಕ್ಕೆ ಕಾರಣವಾಗಿದೆ. ಮೈತ್ರಿ ಕೂಟವು ಆಸ್ಟ್ರೇಲಿಯಾಕ್ಕೆ ಅಣ್ವಸ್ತ್ರಯುಕ್ತ ಜಲಾಂತರ್ಗಾಮಿ ನಿರ್ವಣಕ್ಕೆ ನೆರವು ನೀಡಲಿದ್ದು ಅದನ್ನು ಚೀನಾ ಕಟುವಾಗಿ ವಿರೋಧಿಸಿದೆ. ಕ್ವಾಡ್​ನಂತೆ ಈ ಹೊಸ ಕೂಟ ಕೂಡ ತನ್ನ ವಿರುದ್ಧ ನಿರ್ದೇಶಿತವಾದುದು ಎಂಬುದು ಚೀನಾದ ಅಭಿಪ್ರಾಯವಾಗಿದೆ.

    ಅಪೆಕ್​ನಲ್ಲಿ ಒಡಕು: ಅಪೆಕ್​ನಲ್ಲಿ ಕೂಡ ಒಡಕು ಸೃಷ್ಟಿಯಾಗಿದ್ದು ಈ ವಲಯದಲ್ಲಿ ಭದ್ರತಾ ವಾತಾವರಣದ ಮೇಲೆ ಪರಿಣಾಮ ಬೀರಲಿದೆ. 2023ರ ಅಪೆಕ್ ಶೃಂಗ ಸಭೆಯನ್ನು ಅಮೆರಿಕ ಪ್ರಾಯೋಜಿಸುವ ವಿಚಾರದಲ್ಲಿ ಒಮ್ಮತಕ್ಕೆ ಬರಲು ಈ ಗುಂಪು ವಿಫಲವಾಗಿದೆ ಎಂದು ಆಗ್ನೇಯ ಏಷ್ಯಾ ನಿಯೋಗದ ಪ್ರತಿನಿಧಿಯೊಬ್ಬರು ಹೇಳಿರುವುದು ಅಪೆಕ್​ನಲ್ಲಿನ ಭಿನ್ನಾಭಿಪ್ರಾಯಕ್ಕೆ ಕನ್ನಡಿ ಹಿಡಿದಿದೆ.

    ಒಂದೇ ಕುಟುಂಬದ ಐವರ ಆತ್ಮಹತ್ಯೆ; ಅನುಮಾನ ಯಾರ ಮೇಲೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts