More

    ಚೀನೀ ಕಾಂಚಾಣ ಕುಣಿಯುತ್ತಲಿದೆ..

    ಬೆಂಗಳೂರು: ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರ ಬಲಿದಾನದ ಬಳಿಕ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಇದರ ಜತೆಗೆ ಬಿಸಿಸಿಐ ಸಹಿತ ಭಾರತೀಯ ಕ್ರೀಡಾ ಸಂಸ್ಥೆಗಳು ಚೀನಾ ಕಂಪನಿಗಳ ಪ್ರಾಯೋಜಕತ್ವವನ್ನು ತ್ಯಜಿಸುವ ಚಿಂತನೆ ನಡೆಸಿವೆ. ಆದರೆ ಚೀನಾ ಕಂಪನಿಗಳು ಅಥವಾ ಚೀನಾ ಹೂಡಿಕೆ ಇರುವ ಕಂಪನಿಗಳ ಪ್ರಾಯೋಜಕತ್ವ ವ್ಯಾಪಕವಾಗಿ ಆವರಿಸಿರು ವುದರಿಂದ ಭಾರತೀಯ ಕ್ರೀಡಾಕ್ಷೇತ್ರವನ್ನು ಇದು ಧರ್ಮಸಂಕಟಕ್ಕೂ ಸಿಲುಕಿಸಿದೆ.

    ಚೀನಾ ವಸ್ತುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಕ್ರೀಡಾಕ್ಷೇತ್ರ ಮತ್ತು ಕ್ರೀಡಾತಾರೆಯರು ಪ್ರಮುಖ ಸಾಧನ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಚೀನಾ ವಾರ್ಷಿಕ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಾಯೋಜಕತ್ವ ಹಕ್ಕು ಹೊಂದಿದೆ. ಹೀಗಾಗಿ ಚೀನಾ ಕಂಪನಿಗಳ ಪ್ರಾಯೋಜಕತ್ವವನ್ನು ತ್ಯಜಿಸುವುದಾದರೆ ಮುಂದಿನ ಸವಾಲುಗಳನ್ನು ಎದುರಿಸಲು ಕೂಡ ಸಜ್ಜಾಗಿರಬೇಕಾಗಿದೆ. ಇಲ್ಲದಿದ್ದರೆ ಭಾರತೀಯ ಕ್ರೀಡಾಕ್ಷೇತ್ರ ದೊಡ್ಡ ಹೊಡೆತ ಎದುರಿಸಬೇಕಾಗುತ್ತದೆ.

    ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆಯುವಲ್ಲಿ ಚೀನಾ ಕಂಪನಿಗಳ ಪ್ರಾಯೋಜಕತ್ವ ಮತ್ತು ಇತರ ಒಪ್ಪಂದಗಳ ಪಾಲು ದೊಡ್ಡದಾಗಿದೆ. ಶ್ರೀಮಂತ ಟಿ20 ಟೂರ್ನಿ ಐಪಿಎಲ್ ಪ್ರಾಯೋಜಕರ ಪಟ್ಟಿಯಲ್ಲೂ ಚೀನಾ ಮೂಲದ ಕಂಪನಿಗಳದ್ದೇ ಪ್ರಾಬಲ್ಯವಿದೆ. ಚೀನಾದ ಮೊಬೈಲ್ ಕಂಪನಿ ವಿವೋ ಜತೆಗಿನ ಒಪ್ಪಂದದ ಸಹಿತ ಕೆಲವು ಪ್ರಾಯೋಜಕತ್ವ ತ್ಯಜಿಸುವ ಬಗ್ಗೆ ಮರುಪರಿಶೀಲನೆ ನಡೆಸಲು ಬಿಸಿಸಿಐ ಮುಂದಾಗಿದೆ. ಈ ಸಂಬಂಧ ಐಪಿಎಲ್ ಆಡಳಿತ ಮಂಡಳಿ ಈ ವಾರ ಸಭೆಯನ್ನೂ ಸೇರಲಿದೆ. ಆದರೆ ಚೀನಾ ಕಂಪನಿಗಳ ಪ್ರಾಯೋಜಕತ್ವದ ಅತಿಕ್ರಮಣದಿಂದ ಬಿಸಿಸಿಐ ಮುಕ್ತಿ ಪಡೆಯುವುದು ದೊಡ್ಡ ಸವಾಲು. ಯಾಕೆಂದರೆ ಅಷ್ಟರ ಮಟ್ಟಿಗೆ ಚೀನಾ ಕಂಪನಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಾಯೋಜಕತ್ವ ಭಾರತೀಯ ಕ್ರಿಕೆಟ್ ಕ್ಷೇತ್ರವನ್ನು ಆವರಿಸಿದೆ. ಬ್ಯಾಡ್ಮಿಂಟನ್, ಕಬಡ್ಡಿ, ಫುಟ್​ಬಾಲ್​ನಲ್ಲೂ ಚೀನಾ ಕಂಪನಿಗಳ ಪ್ರಾಯೋಜಕತ್ವದ ಪಾಲು ಸಾಕಷ್ಟಿದೆ.

    ಭಾರತೀಯ ಕ್ರಿಕೆಟ್​ನಲ್ಲೇ ಚೀನಾ ಕಂಪನಿಗಳು ಅಥವಾ ಚೀನಾ ಹೂಡಿಕೆ ಇರುವ ಭಾರತೀಯ ಕಂಪನಿಗಳ ಪ್ರಾಯೋಜಕತ್ವ 1,600 ಕೋಟಿ ರೂಪಾಯಿಗೂ ಅಧಿಕವಿದೆ. ಆರ್ಥಿಕ ಮುಗ್ಗಟ್ಟಿನ ಈ ಸಮಯದಲ್ಲಿ ಚೀನಾ ಕಂಪನಿಗಳ ಹಾಲಿ ಒಪ್ಪಂದವನ್ನು ತ್ಯಜಿಸಿ ಹೊಸ ಒಪ್ಪಂದವನ್ನು ಇದೇ ಮೊತ್ತಕ್ಕೆ ಪಡೆದುಕೊಳ್ಳುವುದು ಸುಲಭದ ಮಾತಲ್ಲ.

    ಟೀಮ್ ಇಂಡಿಯಾಗೂ ಚೀನಾ ಪ್ರಾಯೋಜಕತ್ವ!

    ಚೀನಾದ ಮೊಬೈಲ್ ಕಂಪನಿ ಒಪ್ಪೋ ಈ ಹಿಂದೆ ಟೀಮ್ ಇಂಡಿಯಾದ ಪ್ರಾಯೋಜಕತ್ವ ಹೊಂದಿತ್ತು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಒಪ್ಪಂದದಿಂದ ಹಿಂದೆ ಸರಿದಾಗ ಬೆಂಗಳೂರು ಮೂಲದ ಆನ್​ಲೈನ್ ಶಿಕ್ಷಣದ ಆಪ್ ‘ಬೈಜುಸ್’ ಟೀಮ್ ಇಂಡಿಯಾ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಕಳೆದ ವರ್ಷದ ಒಪ್ಪಂದದ ಅನ್ವಯ ಬೈಜುಸ್, 5 ವರ್ಷಗಳಿಗೆ 1,079 ಕೋಟಿ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸಲಿದೆ. ಆದರೆ ಇತ್ತ ಬೈಜುಸ್​ನಲ್ಲೂ ಚೀನಾದ ಟೆನ್​ಸೆಂಟ್ ಕಂಪನಿ ಸುಮಾರು 350 ಕೋಟಿ ರೂ. ಹೂಡಿಕೆ ಮಾಡಿದೆ.

    ಹಣ ಪಡೆದುಕೊಳ್ಳಬೇಕು, ಕೊಡಬಾರದು!

    ಆರ್ಥಿಕ ತಜ್ಞರ ಲೆಕ್ಕಾಚಾರದ ಪ್ರಕಾರ, ಚೀನಾದ ಕಂಪನಿಗಳಿಗೆ ಭಾರತೀಯರು ನಿಜಕ್ಕೂ ಹೊಡೆತ ನೀಡಬೇಕೆಂದಿದ್ದರೆ, ಅವರ ಪ್ರಾಯೋಜಕತ್ವವನ್ನು ನಿಲ್ಲಿಸಬಾರದು. ಚೀನಾ ವಸ್ತುಗಳನ್ನು ಮಾತ್ರ ಬಹಿಷ್ಕರಿಸಬೇಕು. ಹಾಗಾದರೆ, ಚೀನಾ ಕಂಪನಿಗಳಿಂದ ಪ್ರಾಯೋಜಕತ್ವಕ್ಕಾಗಿ ಭಾರತೀಯರು ಹಣವನ್ನು ಪಡೆದುಕೊಂಡಂತಾಗಲಿದೆ. ಇದಕ್ಕೆ ಬದಲಾಗಿ ಭಾರತೀಯರು ಚೀನಾದ ಉತ್ಪನ್ನಗಳನ್ನು ಖರೀದಿಸದೆ ಅವರ ಕೈಗೆ ಹಣವನ್ನು ವಾಪಸ್ ನೀಡಬಾರದು. ಆದರೆ ಇದರ ಜಾರಿ ಕಷ್ಟಕರ.

    ಭಾರತೀಯ ಕ್ರೀಡೆಯಲ್ಲಿ ಚೀನಾ ಪ್ರಾಯೋಜಕರು: ಚೀನಾ ಕಂಪನಿಗಳು: ವಿವೋ, ಒಪ್ಪೋ (ಮೊಬೈಲ್ ಕಂಪನಿಗಳು) ಪರೋಕ್ಷ ಪ್ರಾಯೋಜಕ ಚೀನಾ ಕಂಪನಿ: ಟೆನ್​ಸೆಂಟ್, ಅಲಿಬಾಬ, ಸಿಟ್ರಿಪ್. ಚೀನಾ ಹೂಡಿಕೆ ಇರುವ ಭಾರತೀಯ ಕಂಪನಿಗಳು: ಬೈಜುಸ್ (ಟೆನ್​ಸೆಂಟ್ 350 ಕೋಟಿ ರೂ. ಹೂಡಿಕೆ), ಪೇಟಿಎಂ (ಅಲಿಬಾಬ 37.15 ಪಾಲು), ಡ್ರೀಮ್1 (ಟೆನ್​ಸೆಂಟ್ 750 ಕೋಟಿ ರೂ. ಹೂಡಿಕೆ), ಸ್ವಿಗ್ಗಿ (ಟೆನ್​ಸೆಂಟ್ ಶೇ. 5.27 ಪಾಲು), ಝೊಮಾಟೊ (ಅಲಿಬಾಬ ಶೇ. 23 ಪಾಲು), ಮೇಕ್​ಮೈಟ್ರಿಪ್ (ಸಿಟ್ರಿಪ್ ಶೇ. 49 ಪಾಲು).

    ಇದನ್ನೂ ಓದಿ: ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!

    ಚೀನಾ ಕಂಪನಿಗಳ ಜತೆ ಬಿಸಿಸಿಐ ಒಪ್ಪಂದ: ಭಾರತ ತಂಡದ ಜೆರ್ಸಿ ಪ್ರಾಯೋಜಕ: ಬೈಜುಸ್-5 ವರ್ಷಗಳಿಗೆ 1,079 ಕೋಟಿ ರೂ. ಶೀರ್ಷಿಕೆ ಪ್ರಾಯೋಜಕತ್ವ: ಪೇಟಿಎಂ -5 ವರ್ಷಗಳಿಗೆ 326.8 ಕೋಟಿ ರೂ. ಅಫಿಷಿಯಲ್ ಪ್ರಾಯೋಜಕ: ಡ್ರೀಮ್ ಇಲೆವೆನ್.

    ಚೀನಾ ಕಂಪನಿಗಳ ಜತೆ ಐಪಿಎಲ್ ಒಪ್ಪಂದ: ಶೀರ್ಷಿಕೆ ಪ್ರಾಯೋಜಕತ್ವ: ವಿವೋ-5 ವರ್ಷಗಳಿಗೆ 2,200 ಕೋಟಿ ರೂ. ಅಫಿಷಿಯಲ್ ಪ್ರಾಯೋಜಕ: ಡ್ರೀಮ್ ಇಲೆವೆನ್-4 ವರ್ಷಗಳಿಗೆ 210 ಕೋಟಿ ರೂ. ಸಹ-ಪ್ರಾಯೋಜಕ: ಸ್ವಿಗ್ಗಿ, ಮೇಕ್​ಮೈಟ್ರಿಪ್, ಬೈಜುಸ್-ವಾರ್ಷಿಕ 25 ಕೋಟಿ ರೂ.

    ಚೀನಾ ಕಂಪನಿ ಜತೆ ಕ್ರೀಡಾಪಟುಗಳ ಒಪ್ಪಂದ: ಪಿವಿ ಸಿಂಧು (ಬ್ಯಾಡ್ಮಿಂಟನ್): ಲೀ ನಿಂಗ್ ಜತೆಗೆ -ಠಿ;50 ಕೋಟಿ, 4 ವರ್ಷ. ಕೆ. ಶ್ರೀಕಾಂತ್ (ಬ್ಯಾಡ್ಮಿಂಟನ್): ಲೀ ನಿಂಗ್ ಜತೆಗೆ 35 ಕೋಟಿ ರೂಪಾಯಿ, 4 ವರ್ಷ. ವಿರಾಟ್ ಕೊಹ್ಲಿ (ಕ್ರಿಕೆಟ್): ಐಕ್ಯೂಒಒ ಸ್ಮಾರ್ಟ್​ಫೋನ್, ಒಪ್ಪಂದದ ಮೊತ್ತ ತಿಳಿದಿಲ್ಲ.

    ಚೀನಾ ಕಂಪನಿ ಜತೆ ಒಪ್ಪಂದವಿರುವ ಐಪಿಎಲ್ ತಂಡಗಳು ಆರ್​ಸಿಬಿ: ಝೊಮಾಟೊ ಸಹ ಪ್ರಾಯೋಜಕ ಚೆನ್ನೈ ಸೂಪರ್ಕಿಂಗ್ಸ್: ಡ್ರೀಮ್ ಇಲೆವೆನ್, ಝೊಮಟೊ ಸಹ ಪ್ರಾಯೋಜಕ ಕಿಂಗ್ಸ್ ಇಲೆವೆನ್ ಪಂಜಾಬ್: ಡ್ರೀಮ್ ಇಲೆವೆನ್ ಪ್ರಾಯೋಜಕ ಡೆಲ್ಲಿ ಕ್ಯಾಪಿಟಲ್ಸ್: ಡ್ರೀಮ್ ಇಲೆವೆನ್, ಪೇಟಿಎಂ ಪ್ರಾಯೋಜಕರು ರಾಜಸ್ಥಾನ ರಾಯಲ್ಸ್: ಡ್ರೀಮ್ ಇಲೆವೆನ್ ಪ್ರಾಯೋಜಕ ಮುಂಬೈ ಇಂಡಿಯನ್ಸ್: ಡ್ರೀಮ್ ಇಲೆವೆನ್ ಪ್ರಾಯೋಜಕ

    ಭಾರತೀಯ ಒಲಿಂಪಿಕ್ಸ್ ಸಂಸ್ಥೆ: ಚೀನಾದ ಕ್ರೀಡಾ ಸಾಮಗ್ರಿ ಕಂಪನಿ ಲೀ-ನಿಂಗ್ ಜತೆ ಒಲಿಂಪಿಕ್ಸ್​ವರೆಗೆ ಒಪ್ಪಂದ. ಭಾರತದ ಕ್ರೀಡಾಪಟುಗಳಿಗೆ 5-6 ಕೋಟಿ ರೂ. ಮೊತ್ತದ ಕಿಟ್ ಪೂರೈಕೆ. ಪ್ರೊ ಕಬಡ್ಡಿ ಲೀಗ್: ಶೀರ್ಷಿಕೆ ಪ್ರಾಯೋಜಕತ್ವ: ವಿವೋ ಜತೆಗೆ 5 ವರ್ಷಗಳಿಗೆ 300 ಕೋಟಿ ರೂಪಾಯಿ ಒಪ್ಪಂದ.

    2000ದ ಸನಿಹದಲ್ಲಿದೆ ಬೆಂಗಳೂರಿನಲ್ಲಿ ಕೋವಿಡ್​ ಕೇಸ್​: ರಾಜ್ಯದಲ್ಲಿ 445 ಹೊಸ ಕೇಸ್​ ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts