More

    ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಿ ಮಾನಸಿಕ ಖಿನ್ನತೆ


    ಐಮಂಗಲ: ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆ ಮೇಲೂ ಪರಿಣಾಮ ಬೀರುವುದರೆ ಜತೆಗೆ ಹಲವು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ಮರಡಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

    ಮಕ್ಕಳ ಉತ್ತಮ ಆರೋಗ್ಯಕ್ಕೆ, ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆಗಳು ಅವಶ್ಯ. ಹಿಂದೆಲ್ಲಾ ವಿದ್ಯಾರ್ಥಿಗಳು ಗ್ರಾಮೀಣ ಕ್ರೀಡೆಗಳಲ್ಲೇ ಹೆಚ್ಚು ತೊಡಗಿಕೊಳ್ಳುತ್ತ ಚೈತನ್ಯದಿಂದ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಜೀವನ ಕೇವಲ ಅಂಕ ಪಡೆಯಲು ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಮಕ್ಕಳು ಮೊಬೈಲ್ ಹುಚ್ಚಿಗೆ ಬಲಿಯಾಗುತ್ತಿದ್ದು, ದಿನದ 24 ತಾಸೂ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಲಗೋರಿ, ಚಿನ್ನಿ ದಾಂಡು, ಕಬಡ್ಡಿ, ಗೋಲಿ, ಬುಗುರಿ ಆಟದಂತಹ ಗ್ರಾಮೀಣ ಕ್ರೀಡೆಗಳು ಮರೆಯಾಗಿವೆ ಎಂದು ಹೇಳಿದರು.

    ಪಠ್ಯದ ಜತೆ ದೈಹಿಕ ಶಿಕ್ಷಣ, ಕ್ರೀಡಾ ಚಟುವಟಿಕೆ ಸಹ ವಿದ್ಯಾರ್ಥಿಗಳ ಬೆಳವಣಿಗೆಗೆ ಅವಶ್ಯಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಉಲ್ಲಸಿತರಾಗಿ ಶಿಕ್ಷಣದ ಕಡೆ ಹೆಚ್ಚು ಒಲವು ತೋರಲು ಸಾಧ್ಯವಾಗುತ್ತದೆ ಎಂದರು.

    ಕ್ರೀಡೆಗೆ ಸಮಯ ಮೀಸಲಿಡಿ:
    ಮಕ್ಕಳು ಓದಿನೊಂದಿಗೆ ಸ್ವಲ್ಪ ಸಮಯವನ್ನು ಕ್ರೀಡೆಗೂ ಮೀಸಲಿಡಬೇಕು. ಕಳೆದೆರಡು ವರ್ಷದಿಂದ ಕರೊನಾದಿಂದಾಗಿ ಯಾವುದೇ ಕ್ರೀಡೆಗಳನ್ನು ನಡೆಸಲಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆಟೋಟ ಮರೆತಂತೆ ಕಾಣುತ್ತಿದೆ. ಪಾಲಕರು, ಶಿಕ್ಷಕರು ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಶಾಸಕರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳ ಪಥ ಸಂಚಲನ ಗಮನ ಸೆಳೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ವೇಣುಗೋಪಾಲ್ ತಿಮ್ಮಪ್ಪಸ್ವಾಮಿ ದೇವಸ್ಥಾನದಿಂದ ಬೈಕ್ ರ‌್ಯಾಲಿಯಲ್ಲಿ ಕ್ರೀಡಾಜ್ಯೋತಿ ತಂದರು.

    ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಪ್ರತಿಜ್ಞಾವಿಧಿ ಬೋಧಿಸಿದರು. ಹೋಬಳಿಯ ಒಟ್ಟು 34 ಶಾಲೆಗಳ 512 ವಿದ್ಯಾರ್ಥಿಗಳು ಕ್ರೀಡಾಕೂಡದಲ್ಲಿ ಭಾಗವಹಿಸಿದ್ದರು.

    ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ, ಜಿಪಂ ಮಾಜಿ ಸದಸ್ಯೆ ಟಿ.ಆರ್.ರಾಜೇಶ್ವರಿ, ಬಿಇಒ ನಾಗಭೂಷಣ್, ಬಿಆರ್‌ಸಿ ತಿಪ್ಪೇರುದ್ರಪ್ಪ, ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ಇಸಿಒಗಳಾದ ಹರೀಶ್, ಶಶಿಧರ್, ಶಿವಾನಂದ್, ಲೋಹಿತ್, ಸಿಆರ್‌ಪಿ ವೀರೇಶ್, ಚಕ್ರಪಾಣಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ.ಎನ್.ಕೃಷ್ಣ, ಮುಖ್ಯ ಶಿಕ್ಷಕ ವಿ.ಟಿ.ಜಯಣ್ಣ, ಒ.ಬಿ.ಬಸವರಾಜ್, ತಿಪ್ಪೀರಣ್ಣ ಹಾಗೂ ವಿವಿಧ ಗ್ರಾಪಂ ಸದಸ್ಯರು, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

    ಮರಡಿಹಳ್ಳಿ ಶಾಲೆಗೆ 1 ಕೋಟಿ ರೂ.ಮಂಜೂರು:
    ಹಿರಿಯೂರು ತಾಲೂಕಿನ ಮರಡಿಹಳ್ಳಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಮುಖ್ಯಮಂತ್ರಿ 1 ಕೋಟಿ ರೂ. ಮಂಜೂರು ಮಾಡಿದ್ದಾರೆ. ಈ ಶಾಲೆ ಸಹ ಮುಂದಿನ ವರ್ಷ ಶತಮಾನಕ್ಕೆ ಪದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ಶಾಸಕರಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕ್ಷೇತ್ರದಲ್ಲಿ ಶಿಥಿಲಗೊಂಡ ಶಾಲೆಗಳ ದುರಸ್ತಿ, ಕಟ್ಟಡ ನಿರ್ಮಾಣ ಹಾಗೂ ಅಗತ್ಯ ಪರಿಕರ ಒದಗಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕಿ ಕೆ. ಪೂರ್ಣಿಮಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts