More

    ಮಹಿಳಾ, ಮಕ್ಕಳ ಕಾವಲು ಸಮಿತಿ ಚುರುಕಾಗಲಿ

    ಬಸವಕಲ್ಯಾಣ: ಎಲ್ಲ ಗ್ರಾಪಂಗಳಲ್ಲಿ ಗ್ರಾಮ ಮಟ್ಟದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಬೇಕು. ಮಹಿಳಾ ಮತ್ತು ಮಕ್ಕಳ ಅಕ್ರಮ ಸಾಗಣೆ ನಿಯಂತ್ರಣ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಬಾಲ್ಯ ವಿವಾಹ ನಿಷೇಧಕ್ಕೆ ಸಮಿತಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

    ನಗರದ ಎಂಪಿಎಸ್ ಶಾಲೆಯಲ್ಲಿ ಗ್ರಾಮೀಣ ಶಿಕ್ಷಣ ಪತ್ತು ಆರೋಗ್ಯ ಸಂಸ್ಥೆ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಆಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ತರಬೇತಿ, ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿವಿಧ ಗ್ರಾಪಂ ಅಧ್ಯಕ್ಷರು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಂದ ಅಹವಾಲು ಸ್ವೀಕರಿಸಿ, ಒಂಬತ್ತು ಗ್ರಾಪಂಗಳಿಂದ ಪಿಡಿಒಗಳು ಬರಬೇಕಾಗಿತ್ತು. ಕೇವಲ ಮೂವರು ಬಂದಿರುವುದನ್ನು ಪ್ರಶ್ನಿಸಿ, ಶೋಕಾಸ್ ನೋಟಿಸ್ ನೀಡಿ ಆಯೊಗಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.

    ತಾಲೂಕಿನ ಒಂಬತ್ತು ಗ್ರಾಮ ಪಂಚಾಯಿತಿಯಲ್ಲಿ ಸಂಸ್ಥೆ ಸಮೀಕ್ಷೆ ಮಾಡಿದ್ದು, ೭೩೪ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಕಳವಳಕಾರಿ ಸಂಗತಿ. ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಪಡೆದು ಕೂಡಲೇ ಕಾರ್ಯ ನಿರತರಾಗಿ ಶಾಲೆಗೆ ಪುನಃ ಸೇರಿಸುವ ಕೆಲಸ ತ್ವರಿತಗತಿಯಲ್ಲಿ ಮಾಡಬೇಕು ಎಂದರು.

    ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಂದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಆಂದೋಲನ ಮಾಡುವ ಆದೇಶ ಬಂದಿದೆ. ಕೂಡಲೇ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹ ನಿಷೇಧಕ್ಕೆ ಮುಂದಾಗಬೇಕು. ತಾಲೂಕಿನಲ್ಲಿ ಅತಿ ಹೆಚ್ಚು ಬಾಲ ಕಾರ್ಮಿಕರಿರುವುದನ್ನು ತಹಸೀಲ್ದಾರ್ ಗಮನಕ್ಕೆ ತಂದು ಬಾಲ ಕಾರ್ಮಿಕ ರಕ್ಷಣಾ ಕಾರ್ಯ ಪಡೆ ರಚಿಸುವಂತೆ ಆದೇಶಿಸಿದ್ದು, ಕೂಡಲೇ ತಹಸೀಲ್ದಾರ್ ಸಂಬಂಧಿಸಿದ ಅಧಿಕಾರಿಗಳನ್ನು ಸಭೆ ಕರೆದು ಕಾರ್ಯಪಡೆ ರಚಿಸಬೇಕು ಎಂದರು.

    ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಎಂ.ವೆಂಕಟೇಶ ಮಾತನಾಡಿದರು. ಸಹಾಯಕ ಆಯುಕ್ತ ಪ್ರಕಾಶ ಕುದರೆ ಮಾತನಾಡಿ, ತಾಲೂಕಿನಲ್ಲಿ ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬAಧಿಸಿದ ಎಲ್ಲ ಅಧಿಕಾರಿಗಳು ಕೂಡಲೇ ಕಾರ್ಯ ನಿರತರಾಗಬೇಕು ಎಂದರು.

    ಇಒ ಮಹಾದೇವ, ಸಿಡಿಪಿಒ ಗೌತಮ ಶಿಂಧೆ, ಗುರುರಾಜ, ಕೃಷ್ಣಕುಮಾರ, ಸಂಸ್ಥೆ ಸಿಬ್ಬಂದಿ ನಟರಾಜ, ನಾಗೇಶ, ಸುನಂದಾ, ಸೋನಾಲಿ, ಶೃತಿ ಇತರರಿದ್ದರು. ಸಂಪತ್ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು, ನಾಗೇಶ ಸ್ವಾಗತಿಸಿದರೆ, ನಾಗರಾಜ ಶೀಲವಂತ ನಿರೂಪಣೆ ಮಾಡಿದರು. ನಟರಾಜ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts