More

    ಬಸವ ಸಂಸ್ಕೃತಿ ಎಲ್ಲರೂ ಪಾಲನೆ ಮಾಡಿ

    ಬಸವಕಲ್ಯಾಣ: ಮನುಷ್ಯರಿಗೆ ತಮ್ಮ ಅರಿವಿನ ಮೂಲಕ ಬುದ್ಧಿ ಬಳಸಿ ಸುಂದರ ಸುಖಮಯ ಜೀವನ ರೂಪಿಸಿಕೊಳ್ಳಲು ಕಲ್ಯಾಣ ಮಾರ್ಗ ತೋರಿಸಿದೆ ಎಂದು ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.

    ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿವಿಧ ಬಸವಪರ ಸಂಘಟನೆಗಳ ಸಹಯೋಗದಡಿ ಬಿಕೆಡಿಬಿ ಸಭಾಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಬಸವಕಲ್ಯಾಣ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಜೀವನ ಸೃಷ್ಟಿಯ ಕೊಡುಗೆ. ನಾವೆಲ್ಲರೂ ಕಿಂಕರತ್ವ ಮತ್ತು ಸದ್ವಿನಯದಿಂದ ಬದುಕಬೇಕಿದೆ ಎಂದರು.

    ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು, ಅಸಹಾಯಕರು, ಧ್ವನಿ ಇಲ್ಲದವರು ಮತ್ತು ಶೋಷಿತರನ್ನು ಮೇಲಕ್ಕೆ ಎತ್ತಿ ಸಮಾಜದ ಮುಖ್ಯ ವಾಹಿನಿಗೆ ತರುವುದು ಶರಣ ಸಂಸ್ಕೃತಿಯಾಗಿದೆ. ಸಮಾನತೆ, ದಾಸೋಹ, ಕಾಯಕ ಸಂದೇಶ ಸಾರುವ ಬಸವ ಸಂಸ್ಕೃತಿ ಎಲ್ಲರೂ ಪಾಲನೆ ಮಾಡಬೇಕು. ಕಲ್ಯಾಣ ಕ್ರಾಂತಿಗೆ ನಾಂದಿಯಾದ ಶರಣು ಶರಣಾರ್ಥಿ ಪದ ಈ ವರ್ಷ ಬಸವಕಲ್ಯಾಣ ಉತ್ಸವದ ಘೋಷವಾಕ್ಯ. ಇದನ್ನು ಪ್ರತಿಯೊಬ್ಬರೂ ಬಳಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ರಾಜಾ ಬಾಗಸವಾರ್ ದರ್ಗಾದ ಮುತವಲ್ಲಿ ಖಾಜಾ ಜಿಯಾವುಲ್ ಹಸನ್ ಜಾಗೀರದಾರ್ ಮಾತನಾಡಿ, ಇಸ್ಲಾಂ ಮತ್ತು ಬಸವಣ್ಣನವರ ತತ್ವಗಳಲ್ಲಿ ಸಾಮ್ಯತೆ ಇದೆ. ಎರಡೂ ಏಕದೇವೋಪಾಸನೆಗೆ ಹೆಚ್ಚಿನ ಮಹತ್ವ ನೀಡುತ್ತವೆ ಎಂದರು.

    ಪೂಜ್ಯ ಸರಸ್ವತಿ ಬಹೇನ್‌ಜಿ, ಐಡಿಯಲ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮುಜಾಹಿದ್ ಖುರೇಷಿ, ಜಮಾತೆ ಇಸ್ಲಾಮಿಕ್ ಹಿಂದ್ ಸ್ಥಳೀಯ ಶಾಖೆ ಅಧ್ಯಕ್ಷ ಅಸ್ಲಂ ಜನಾಬ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಶಸಾಪ ಅಧ್ಯಕ್ಷ ಗುರುನಾಥ ಗಡ್ಡೆ, ಪ್ರೊ.ಶಂಕರ ಕರ್ಣೆ, ಸುಲೋಚನಾ ಮಾಮಾ ಇತರರಿದ್ದರು.

    ಡಾ.ಮಹೇಶ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಮಕ್ಕಳಿಂದ ವಚನ ಗಾಯನ, ವಚನ ನೃತ್ಯ, ವಿವಿಧ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಉತ್ಸವದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ನೀಡಲಾಯಿತು.

    ೧೦೮ ವಚನ ಪಠಣ: ಬಸವಕಲ್ಯಾಣ ಉತ್ಸವ ಮತ್ತು ಅಲ್ಲಮಪ್ರಭು ಜಯಂತಿ ನಿಮಿತ್ತ ಬೆಳಗ್ಗೆ ಪರುಷ ಕಟ್ಟೆಯಲ್ಲಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಾನ್ನಿಧ್ಯದಲ್ಲಿ ೧೦೮ ವಚನಗಳ ಪಠಣ ನಡೆಯಿತು. ವಿಕಾಸ ಅಕಾಡೆಮಿ ಮುಖ್ಯ ಸಂಚಾಲಕ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಶರಣ ಸಂಸ್ಕೃತಿ ತತ್ವಗಳು ನಮ್ಮಲ್ಲಿ ಧಾರಣೆ ಆಗಬೇಕಾದರೆ ಮೂಲ ಮಂತ್ರ ಶರಣ ಶರಣಾರ್ಥಿ ಪದ ನಮ್ಮ ಮನೆ ಮನಗಳಲ್ಲಿ ಅಳವಡಿಸಿಕೊಳ್ಳಬೇಕು. ಯಾರೇ ಬಂದರೂ ಮೊದಲು ಶರಣು ಶರಣಾರ್ಥಿ ಎನ್ನಬೇಕು ಎಂದರು. ಶ್ರೀ ಶಿವಾನಂದ ದೇವರು, ಪೂಜ್ಯ ಸತ್ಯಕ್ಕತಾಯಿ, ಮಾತೆ ಕಲ್ಯಾಣಮ್ಮ, ಬಿಡಿಪಿಸಿ ನಿರ್ದೇಶಕರಾದ ವಿಜಯಲಕ್ಷ್ಮೀ ಗಡ್ಡೆ, ಜಗನ್ನಾಥ ಖೂಬಾ, ರೇವಣಪ್ಪ ರಾಯವಾಡೆ, ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts