More

    ವಚನ ಸಾಹಿತ್ಯದಲ್ಲಿದೆ ಬದುಕಿನ ದಾರಿ

    ಬಸವಕಲ್ಯಾಣ: ವಚನ ಸಾಹಿತ್ಯ ವರ್ತಮಾನಕ್ಕೆ ತಕ್ಕಂತೆ ಮಾನವೀಯ ಮತ್ತು ಅರಿವಿನ ಪ್ರಜ್ಞೆಯೊಂದಿಗೆ ಬದುಕುವ ದಾರಿ ತೋರಿಸಿಕೊಡುತ್ತದೆ ಎಂದು ಪ್ರಗತಿಪರ ಚಿಂತಕ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

    ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶರಣ ಸಮಾಗಮ ಮತ್ತು ದಾನಮ್ಮ ದೇವಿ ಉತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ವಚನ ಸಾಹಿತ್ಯ ಜನ್ಮ ಜನ್ಮಾಂತರದ ಆಚೆಗಿನ ಕರ್ಮ ಸಿದ್ಧಾಂತದ ಬಗ್ಗೆಯಾಗಲಿ, ಆತ್ಮ ಸಂಚಾರದ ಬಗ್ಗೆಯಾಗಲಿ ಹೇಳುವುದಿಲ್ಲ. ಮಾನವೀಯ ಬದುಕಿಗೆ ಬೆಳಕು ತೋರುವಂಥದ್ದು ಎಂದರು.

    ೧೨ನೇ ಶತಮಾನದಲ್ಲಿ ದೀನರು, ದುಃಖಿತರು, ದುಡಿಯುವ ವರ್ಗ, ಮಹಿಳೆಯರು, ಶೋಷಿತರು ಮತ್ತು ಶ್ರಮಿಕರ ಪರವಾಗಿ ಮಾತನಾಡಿ ಜೀವಧ್ವನಿಯಾದವರು ವಿಶ್ವಗುರು ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು. ಬಸವಣ್ಣ, ಅಲ್ಲಮ, ಅಕ್ಕ ಅವರನ್ನು ಕೇವಲ ಉತ್ಸವಗಳಿಗೆ ಸೀಮಿತಗೊಳಿಸದೆ ಅವರ ಕಳಕಳಿಯ ಧರ್ಮದ ಮಾತುಗಳನ್ನು ಆಚಾರವಾಗಿ ಅಳವಡಿಸಿಕೊಂಡಲ್ಲಿ ಲಿಂಗಾಯತ ಧರ್ಮದ ಉಳಿವು ಸಾಧ್ಯ ಎಂದು ಪ್ರತಿಪಾದಿಸಿದರು.

    ಉತ್ಸವ ಉದ್ಘಾಟಿಸಿದ ಬೆಂಗಳೂರು ಬಸವಯೋಗಾಶ್ರಮದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರು ಆತ್ಮವಿಕಾಸ ಮಾಡಿಕೊಂಡು ಆತ್ಮೀಯ ಮತ್ತು ಪರುಷಮಯ ಶಕ್ತಿ ಗಳಿಸಿದ್ದರಿಂದ ಅವರಲ್ಲಿ ಬಹುಮುಖ ವ್ಯಕ್ತಿತ್ವ ರೂಪುಗೊಂಡಿತು. ಹೀಗಾಗಿ ಅವರು ನಾಡಿನ ಜನಪದರು, ಸಾಹಿತಿಗಳು, ವೈಚಾರಿಕರು ಮತ್ತು ಭಕ್ತಿ ಪತಿಕರ ಆರಾಧ್ಯ ಗುರುವಾದರು ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಶ್ರೀ ಬಸವಪ್ರಭು ಸ್ವಾಮೀಜಿ ಮೂರು ವರ್ಷಗಳಿಂದ ಅಧ್ಯಯನ ಕೈಗೊಂಡು ಕಲ್ಯಾಣಕ್ಕೆ ಬಂದ ದಾನಮ್ಮಳ ಸ್ಥಳ ಗುಣತೀರ್ಥವಾಡಿ ಮತ್ತು ನಾರಾಯಣಪುರ ಎಂದು ಪತ್ತೆ ಹಚ್ಚಿಕೊಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಕೆಲವೇ ದಿನಗಳಲ್ಲಿ ಶರಣ ಸಮಾಗಮದ ಮೂಲಕ ದಾನಮ್ಮ ದೇವಿ ಉತ್ಸವ ಆಯೋಜಿಸಿ ಬಸವತತ್ವ ಸೇವೆ ಮಾಡಿದ್ದಾರೆ. ಅವರಿಗೆ ನಾವು ಸದಾ ಬೆಂಬಲವಾಗಿ ಇರುತ್ತೇವೆ ಎಂದರು.

    ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿದರು. ಕೌಠಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ, ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಬೀದರ್‌ನ ವಿಶ್ವ ಆಸ್ಪತ್ರೆಯ ಡಾ.ಶ್ರೀಕಾಂತ ಬೋಗಲೆ, ಹುಬ್ಬಳ್ಳಿಯ ಶ್ರೀ ಗಂಗಾ ಆರೋಗ್ಯ ಮಹಾಮನೆಯ ಚೆನ್ನಬಸವಣ್ಣ, ಬಸವಕುಮಾರ ಪಾಟೀಲ್, ವಲಯ ಅರಣ್ಯಾಧಿಕಾರಿ ಐಶ್ವರ್ಯ ಗೊಬ್ಬೂರ, ವಲಯ ಉಪ ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ ಇತರರಿದ್ದರು.
    ರಾತ್ರಿ ಸೊಲ್ಲಾಪುರದ ಶ್ರೀ ಶಂಕರಲಿಂಗ ಮಹಿಳಾ ಮಂಡಳಿ ಶರಣೆಯರಿಂದ ಶರಣೆ ದಾನಮ್ಮ ದೇವಿ ನಾಟಕ ಪ್ರದರ್ಶನಗೊಂಡಿತು.

    ಶೋಧಿಸಿ ನೋಡು' ಕೃತಿ ಲೋಕಾರ್ಪಣೆ: ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬರೆದಶೋಧಿಸಿ ನೋಡು’ ಕೃತಿಯನ್ನು ಚಿಂತಕ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು. ಪೂಜ್ಯರ ಈ ಕೃತಿ ಅರಿವು-ಆಚಾರದ ಪ್ರತೀಕವಾಗಿದೆ. ವಿವಿಧ ಕ್ಷೇತ್ರದ ೪೦೩ ವಿಷಯಗಳನ್ನು ಒಳಗೊಂಡ ವಚನ ಭಾಷೆ ಭಾವದ ಕಿರು ವಿಚಾರ ಪ್ರವಾಹಗಳು ವಿನೂತನ ಸಾಹಿತ್ಯ ಪ್ರಕಾರಕ್ಕೆ ಮುನ್ನುಡಿ ಬರೆದಂತಿವೆ. ಸ್ವತಂತ್ರ ಚಿಂತನೆ ಮತ್ತು ವಿಮರ್ಶಾ ಶಕ್ತಿ ಶ್ಲಾಘನೀಯವಾದದ್ದು. ಈ ಕೃತಿ ಓದಿದವರಿಗೆ ವಿಶೇಷ ಅನುಭವವಾಗಿ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗಲಿದೆ. ಪುಸ್ತಕ ಪ್ರಿಯರು, ಯುವಕ-ಯುವತಿಯರು ಇಂತಹ ಕೃತಿಗಳ ಅಧ್ಯಯನ ಮಾಡಬೇಕು ಎಂದು ಪ್ರೊ.ಸಿದ್ಧರಾಮಯ್ಯ ಸಲಹೆ ನೀಡಿದರು.

    ಹಿರಿಯ ಸಾಹಿತಿ ರಾಮೇಶ್ವರಗೆ ಪ್ರಶಸ್ತಿ: ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅವರಿಗೆ ಶರಣೆ ದಾನಮ್ಮ ದೇವಿ ಪ್ರಶಸ್ತಿ, ಮುಖಂಡ ದಿಲೀಪ ಶಿಂಧೆ ಅವರಿಗೆ ಕಲ್ಯಾಣ ರತ್ನ ಹಾಗೂ ಸೊಲ್ಲಾಪುರದ ಶಂಕರಲಿಂಗ ಮಹಿಳಾ ಮಂಡಳಿಗೆ ಅಮರಜ್ಯೋತಿ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಪ್ರಶಸ್ತಿ ಫಲಕ ಜತೆಗೆ ದಾಸೋಹಿಗಳನ್ನು ಸತ್ಕಾರಿಸಲಾಯಿತು.

    ಬಸವಣ್ಣನವರಲ್ಲಿ ದೈವೀಗುಣ ಇರುವುದರಿಂದ ನಾವು ಮಾಡುವ ಪ್ರತಿ ಕಾಯಕ, ನಡೆ-ನುಡಿಯಲ್ಲಿ ಅವರನ್ನು ಗೌರವಿಸಿ ಪೂಜಿಸಬೇಕು. ಬಸವಣ್ಣನವರ ತತ್ವ ಪರಿಪಾಲನೆ ಮಾಡುವಲ್ಲಿ ಹಿಂದೆ ಬೀಳಬಾರದು. ಬಸವತತ್ವ ಆಚರಣೆ ಮಾಡುವ ಲಿಂಗಾಯತ ಧರ್ಮೀಯರು ಭ್ರಷ್ಟಾಚಾರಕ್ಕೆ ಇಳಿಯಬಾರದು. ದುಶ್ಚಟಗಳಿಗೆ ಬಲಿಯಾಗಬಾರದು.
    | ಶ್ರೀ ಅಲ್ಲಮಪ್ರಭು ಸ್ವಾಮೀಜಿ ಬಸವಯೋಗಾಶ್ರಮ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts