

ಬೆಳಗಾವಿ: ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ಐವರು ಅಪಹರಣಕಾರರನ್ನು ಅಥಣಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಬಂಧಿತರನ್ನು ಪ್ರಶಾಂತ್ ಬಡಕಂಬಿ, ಜ್ಯೋತಿಬಾ ಬಂಗಿ, ಅನಿಲ್ ಬಡಕಂಬಿ, ಜಂಬುಸಾಗರ ನಾಡಗೌಡ ಹಾಗೂ ಕುಮಾರ್ ಹಿರೇಮನಿ ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯ ಹುಸೇನವ್ವ ಬಹುರೂಪಿ ಎಂಬುವರ ಎರಡು ವರ್ಷದ ಮಗ ಯಲ್ಲಪ್ಪನನ್ನು ಅಪಹರಿಸಿದ್ದರು.
ಫೆಬ್ರವರಿ 6 ರಂದು ಸಂಜೆ 4 ಗಂಟೆ ಸುಮಾರಿಗೆ ಮಗು ಕಿಡ್ನಾಪ್ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡ ರಚಿಸಿದ್ದರು. ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ಅಥಣಿ ಪೊಲೀಸರಿಗೆ ತನಿಖೆ ವೇಳೆ ಹಣದ ಆಸೆಗಾಗಿಯೇ ಮಗುವಿನ ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ಯಾವುದೇ ಸುಳಿವು ಇರದ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ಲೋಕೇಶನ್ ಸೇರಿ ಇತರ ವೈಜ್ಞಾನಿಕ ತಂತ್ರಜ್ಞಾನ ಬಳಸಿ ತನಿಖೆ ಮುಂದುವರಿಸಿದ್ದರು.
ಕೊನೆಗೂ ಗುರುವಾರ ಸಂಜೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಆರೋಪಿಗಳು ಬಿಚ್ಚಿಟ್ಟಿದ್ದು, ಗಂಡು ಮಗು ಇಲ್ಲದಿದ್ದಕ್ಕೆ ಅಥಣಿಯ ಓರ್ವ ಮಹಿಳೆ, ಆರೋಪಿಗಳ ಬಳಿ ಅನಾಥ ಆಶ್ರಮದಿಂದ ಗಂಡು ಮಗು ತಂದು ಕೊಡುವಂತೆ ಕೇಳಿದ್ದಳಂತೆ.
ಮಹಿಳೆಯ ಬಳಿ 4 ಲಕ್ಷಕ್ಕೆ ಬೇಡಿಕೆ ಇಟ್ಟು ಎರಡು ಲಕ್ಷಕ್ಕೆ ಡೀಲ್ ಫೈನಲ್ ಮಾಡಿದ್ದ ಆರೋಪಿಗಳು ಎರಡು ವರ್ಷದ ಮಗು ಕಿಡ್ನಾಪ್ ಮಾಡಿ ಮಹಿಳೆಗೆ ನೀಡಿದ್ದರು. ಅನಾಥ ಆಶ್ರಮದಿಂದ ಕಾನೂನುಬದ್ಧವಾಗಿ ಮಗು ತಂದಿದ್ದಾಗಿ ಹೇಳಿ ಮಗು ನೀಡಿ, ಮಹಿಳೆಯಿಂದ ಎರಡು ಲಕ್ಷ ರೂ. ಹಣ ಪಡೆದು ಹಂಚಿಕೊಂಡಿದ್ದರು.
ಇದೀಗ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ 65 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)