More

    ಅನುದಾನ ಸರ್ಕಾರಕ್ಕೆ ವಾಪಸಾದರೆ ಅಧಿಕಾರಿಗಳ ತಲೆದಂಡ

    ಚಿಕ್ಕಬಳ್ಳಾಪುರ: ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗದೆ ವಾಪಸಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡ ಖಚಿತ ಎಂದು ಖಡಕ್ ಎಚ್ಚರಿಕೆ ನೀಡಿದ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಫೆ.15ರೊಳಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವಿಧ ಇಲಾಖೆಗಳ ಅನುದಾನ ಸಂಪೂರ್ಣ ಬಳಸಿಕೊಂಡು ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷೃ ವಹಿಸುವಂತಿಲ್ಲ ಎಂದು ಸೂಚಿಸಿದರು.

    ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್​! ಇನ್ನೂ ನಾಲ್ಕು ತಿಂಗಳು ಸೋನಿಯಾ ಗಾಂಧಿಯೇ ಅಧ್ಯಕ್ಷೆ

    ಆಂಬುಲೆನ್ಸ್‌ಗಳಿಗೆ ಚಾಲಕರನ್ನು ನಿಯೋಜಿಸದಿರುವುದು, ಮಿಂಡಿಗಲ್‌ನ ತಂಗುದಾಣದಲ್ಲಿ ವಾಸವಾಗಿರುವ ಬಡ ಕುಟುಂಬಕ್ಕೆ ವಸತಿ ಸೌಲಭ್ಯ ಕಲ್ಪಿಸದಿರುವುದು, 10 ತಿಂಗಳಿಂದಲೂ ಪಿಆರ್‌ಡಿ ಕಚೇರಿ ಉದ್ಘಾಟನೆಗೆ ಮೀನಮೇಷ ಎಣಿಸುತ್ತಿರುವುದಕ್ಕೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.

    ಪಿಎಫ್ ವಂಚನೆಗೆ ಮೊಕದ್ದಮೆ; ಶಿಡ್ಲಘಟ್ಟ ತಾಪಂ ಹೊರಗುತ್ತಿಗೆ ನೌಕರರಿಗೆ ಪಿಎಫ್, ಇಎಸ್‌ಐ ವಂತಿಗೆ ಹಣವನ್ನು 5 ವರ್ಷಗಳಿಂದ ಪಾವತಿಸದ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು, ಹಣ ವಸೂಲಿ ಮಾಡಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

    ಮತ್ತೊಮ್ಮೆ ಬಂದ್ರೆ ಸುಟ್ಟು ಹಾಕ್ತಾರೆ !: ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಖರಾಬು ಜಮೀನು ವಿಚಾರವಾಗಿ ಅರಣ್ಯ ಇಲಾಖೆ ಮತ್ತು ಸಾಗುವಳಿದಾರರ ನಡುವಿನ ವಿವಾದದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಬಂಕ್ ಮುನಿಯಪ್ಪ, ಸರ್ವೇ ನಂಬರ್ 1ರಲ್ಲಿ ದೊಡ್ಡತೇಕಹಳ್ಳಿ, ಗೌಡನಹಳ್ಳಿ, ಮುದ್ದೇನಹಳ್ಳಿ ಸೇರಿ ಸುತ್ತಲಿನ ಗ್ರಾಮದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು 20 ವರ್ಷಗಳಿಂದ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದು ಸಾಗುವಳಿ ಚೀಟಿಗೆ ಅರ್ಜಿ ಹಾಕಿದ್ದಾರೆ. ಆದರೆ ಇಲ್ಲಿನ ಅರಣ್ಯಾಧಿಕಾರಿ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ಜೆಸಿಬಿ ತೆಗೆದುಕೊಂಡು ಬಂದು ತೆರವುಗೊಳಿಸಲು ಮುಂದಾಗುತ್ತಿದ್ದು ಮತ್ತೊಮ್ಮೆ ಬಂದರೆ ಅವರನ್ನು, ವಾಹನವನ್ನು ರೈತರೇ ಸುಟ್ಟು ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದರು. ಕೊನೆಗೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಅಭಯದೊಂದಿಗೆ ಚರ್ಚೆಗೆ ತೆರೆ ಎಳೆಯಲಾಯಿತು.

    35 ಸಾವಿರ ಲಂಚಕ್ಕೆ ಒತ್ತಾಯ: ಚಿಂತಾಮಣಿ ತಾಲೂಕಿನ ಯಗವಕೋಟೆಯ ವಿದ್ಯಾರ್ಥಿನಿಲಯದಲ್ಲಿ ಹೊರಗುತ್ತಿಗೆಯ ಅಡುಗೆ ಸಹಾಯಕಿ ಹುದ್ದೆಗೆ ಕಾಯಂಗೊಳಿಸಲು ಸಹಾಯಕಿ ಮಂಜುಳಾ ಅವರಿಗೆ 35 ಸಾವಿರ ನೀಡುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ ಎಂದು ಸದಸ್ಯೆ ಕಮಲಮ್ಮ ಗಂಭೀರ ಆರೋಪ ಮಾಡಿದರು. 25 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಮಂಜುಳಾಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಈಕೆಯ ಬದಲಿಗೆ ಹೊಸಬರನ್ನು ನೇಮಿಸಿಕೊಳ್ಳಲಾಗಿದೆ. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಯಲ್ಲಿ ಮತ್ತು ಮೌಖಿಕವಾಗಿ ಉತ್ತರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸಾಮಾನ್ಯ ಸಮಿತಿಯು ಚಿಂತಾಮಣಿಗೆ ಭೇಟಿ ನೀಡಿ, ತನಿಖೆ ನಡೆಸುವುದರ ಕುರಿತು ನಿರ್ಧರಿಸಲಾಯಿತು.

    ವಾರ್ಷಿಕ ಕೈಪಿಡಿ ಬಿಡುಗಡೆ: 2020-21ನೇ ಸಾಲಿನ ಜಿಪಂನ ಲಿಂಕ್ ಡಾಕ್ಯೂಮೆಂಟ್‌ನಲ್ಲಿ ನಿಗದಿಪಡಿಸಿರುವ ಅನುದಾನದ ಕ್ರಿಯಾ ಯೋಜನೆ, ಅಭಿವೃದ್ಧಿ ಅನುದಾನದ ಕ್ರಿಯಾ ಯೋಜನೆ ಹಾಗೂ ಜಿಪಂ 2019-20ರ ವಾರ್ಷಿಕ ಲೆಕ್ಕ ಪತ್ರಕ್ಕೆ ಅನುಮೋದನೆ ನೀಡಲಾಯಿತು. ವಾರ್ಷಿಕ ಆಡಳಿತ ವರದಿ 2019-2020 ಕೈಪಿಡಿ, 2021ನೇ ವರ್ಷದ ಕ್ಯಾಲೆಂಡರ್, ದಿನಚರಿ ಪುಸ್ತಕ ಬಿಡುಗಡೆ ಮಾಡಲಾಯಿತು.

    ಎಇಇ ಅಮಾನತು ಎಚ್ಚರಿಕೆ: ಸದಸ್ಯರ ಬಗ್ಗೆ ಅಗೌರವದಿಂದ ಮಾತನಾಡಿರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಶಿಡ್ಲಘಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತ ರಮೇಶ್ ಅವರನ್ನು ಅಮಾನತುಗೊಳಿಸುವ ಇಲ್ಲವೇ ಬೇರೆಡೆ ವರ್ಗಾವಣೆ ಮಾಡಲು ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಸಿಇಒ ಶಿವಶಂಕರ್‌ಗೆ ಸೂಚಿಸಿದರು. ಅಸಮರ್ಪಕ ಕಾರ್ಯ ನಿರ್ವಹಣೆಯ ಜತೆಗೆ ಜಿಪಂ ಸದಸ್ಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಹಿಸುವುದು ಸಾಧ್ಯವಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಪಂ ಚುನಾವಣೆ ಜವಾಬ್ದಾರಿ ನಿರ್ವಹಣೆಯಿಂದ ಕೆಲಸದ ಕಡೆಗೆ ಗಮನಹರಿಸಲಾಗಲಿಲ್ಲ. ಯಾರಿಗೂ ಅಗೌರವನ್ನೂ ತೋರಿಲ್ಲ. ಯಾವುದೇ ತಪ್ಪು ಮಾಡದಿದ್ದರೂ ಕ್ರಮ ಕೈಗೊಳ್ಳುವುದು ಸರಿಯೇ? ಎಂದು ಎಇಇ ಪ್ರಶ್ನಿಸಿದರು. ಕೊನೆಗೆ ಗೌಪ್ಯ ಮಾತುಕತೆಯಲ್ಲಿ ಚರ್ಚಿಸುವ ತೀರ್ಮಾನ ಕೈಗೊಳ್ಳಲಾಯಿತು.

    ಜಿಪಂ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಸಿಇಒ ಪಿ.ಶಿವಶಂಕರ್, ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ಮತ್ತಿತರರು ಇದ್ದರು.

    ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts