More

    ಚಿರತೆ ಪತ್ತೆ ಸ್ಥಳದಲ್ಲಿ ದೂರವಾಗಿಲ್ಲ ಆತಂಕ, ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

    ಸುಬ್ರಹ್ಮಣ್ಯ: ಕೈಕಂಬ ಬಳಿಯ ಮೂಲೆಮನೆ ಜಯಲಕ್ಷ್ಮಿ ಎಂಬುವರ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ನಾಯಿಯ ಜತೆ ಶೌಚಗೃಹದಲ್ಲಿ ಬಂಧಿಯಾಗಿತ್ತು. ಮಾಹಿತಿ ತಿಳಿದು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ, ಕೊನೆ ಹಂತದಲ್ಲಿ ಚಿರತೆ ತಪ್ಪಿಸಿಕೊಂಡು ತೋಟದ ಕಡೆ ಓಡಿ ಹೋಗಿ ಕಣ್ಮರೆಯಾಗಿತ್ತು. ಸದ್ಯ ಘಟನಾ ವ್ಯಾಪ್ತಿಯ ಸ್ಥಳೀಯರು ಆತಂಕದಿಂದ ಜೀವಿಸುವಂತಾಗಿದೆ.

    ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆಗಳು ಸದಾ ತಿರುಗಾಡುತ್ತಿದ್ದು, ಸುಮಾರು 400ಕ್ಕೂ ಅಧಿಕ ನಾಯಿಗಳನ್ನು, ದನದ ಕರುಗಳನ್ನು ಬಲಿ ಪಡೆದುಕೊಂಡಿದೆ. ಸ್ಥಳೀಯರು ನಿತ್ಯ ಸಂಚರಿಸಲು ಭಯ ಪಡುವ ಸ್ಥಿತಿ ನಿರ್ಮಾಣಗೊಂಡಿದೆ. ಕೃಷಿ ಕೆಲಸಗಳಿಗೆ ತೋಟದ ಕಡೆ ಹಾಗೂ ಮುಂಜಾನೆ ರಬ್ಬರ್ ಟ್ಯಾಪಿಂಗ್‌ಗೆ ತೆರಳಲು ಜನ ಆತಂಕ ಪಡುವಂತಾಗಿದೆ. ಸದ್ಯ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಚಿರತೆ ಕೆರಳಿದ್ದು, ಮುಂದೆ ದಾಳಿ ಮಾಡಬಹುದೆನ್ನುವ ಭೀತಿ ಸ್ಥಳಿಯರಲ್ಲಿದೆ.

    ಬೋನು ಅಳವಡಿಕೆ: ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಚಿರತೆ ಬಂಧಿಯಾದ ಸ್ಥಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಜತೆಗೆ ಸ್ಥಳದಲ್ಲಿ ಇಲಾಖೆ ವತಿಯಿಂದ ಬೋನು ಇಟ್ಟು ಚಿರತೆ ಹಿಡಿಯಲು ಪ್ರಯತ್ನ ನಡೆಯುತ್ತಿದೆ. ಸ್ಥಳೀಯರು ಯಾವ ಜಾಗದಲ್ಲಿ ಬೋನು ಇಡಲು ಸೂಚಿಸುತ್ತಾರೆಯೋ ಅಲ್ಲಿ ಬೋನು ಇಡಲಾಗುವುದು ಹಾಗೂ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜಿಸಿ, ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೇಕಿದೆ ತಂಡ: ಸುಬ್ರಹ್ಮಣ್ಯ ಭಾಗದಲ್ಲಿ ಚಿರತೆ, ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿದ್ದು, ಅವುಗಳನ್ನು ಸೆರೆ ಹಿಡಿಯಲು ತಜ್ಞ ತರಬೇತಿದಾರರ ಕೊರತೆ ಇದೆ. 2020ರ ಜನವರಿಯಲ್ಲಿ ಬಳ್ಪದಲ್ಲಿ ಪತ್ತೆಯಾದ ಚಿರತೆ ಬಲೆಯ ಮೂಲಕ ಹಿಡಿಯುವ ವೇಳೆ ತಪ್ಪಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿ ಹಾಗೂ ಅರಣ್ಯಾಧಿಕಾರಿಗಳಿಗೂ ಚಿರತೆ ದಾಳಿ ನಡೆಸಿತ್ತು. ಇದೀಗ ಕೈಕಂಬದಲ್ಲಿಯೂ ಚಿರತೆ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದೆ. ಅರೆವಳಿಕೆ ನೀಡಲು ಸೂಕ್ತ ತರಬೇತಿ ಪಡೆದ ತಂಡದ ಅಗತ್ಯ ಇಲ್ಲಿಗೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts