More

    ಬೆಂಕಿ ಶಮನ ಕಾರ್ಯ ಬಿರುಸು, ಮೂರು ದಿನ ಕಳೆದರೂ ಆರದ ಕಾಡ್ಗಿಚ್ಚು, ಚಾರ್ಮಾಡಿ ಘಾಟ್‌ನಲ್ಲಿ ನೂರಾರು ಪ್ರಾಣಿ, ಪಕ್ಷಿಗಳು ಆಹುತಿ ಶಂಕೆ

    ಮಂಗಳೂರು: ನೆರಿಯ, ಚಾರ್ಮಾಡಿ ಹಾಗೂ ಬಾಂಜಾರು ಅರಣ್ಯ ವ್ಯಾಪ್ತಿಯಲ್ಲಿ ಹಬ್ಬಿದ ಬೆಂಕಿ ಕೆನ್ನಾಲಗೆ ಹತೋಟಿಗೆ ತರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಹರಸಾಹಸ ಬುಧವಾರವೂ ಮುಂದುವರಿದಿದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ದಿನಗಳಿಂದ ನಿರಂತರ ಉರಿಯುತ್ತಲೇ ಇದೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಎನ್‌ಐಟಿಕೆಯಿಂದ ತಾಂತ್ರಿಕ ನೆರವು ಪಡೆದ ಬಳಿಕ ಬೆಂಕಿ ನಂದಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಕಾಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

    ಅರಣ್ಯ ವ್ಯಾಪ್ತಿಯಲ್ಲಿ ಹಬ್ಬಿದ ಬೆಂಕಿ ಕೆನ್ನಾಲಗೆಗೆ ನೂರಾರು ಪಕ್ಷಿ, ಪ್ರಾಣಿಗಳು ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನಲ್ಲಿ ನಿರಂತರ ಬೆಂಕಿ ಉರಿಯತೊಡಗಿದ್ದು, ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಕಾಡಿನಲ್ಲಿರುವ ಜೀವ ಜಂತುಗಳು ಹೊರಕ್ಕೆ ಬರುತ್ತಿವೆ. ಬುಧವಾರ ದ.ಕ ಚಿಕ್ಕಮಗಳೂರು ಕಾಡಂಚಿನ ಗ್ರಾಮ ತರುವೆಯಲ್ಲಿ ಬೃಹತ್ ಕಾಳಿಂಗ ಸರ್ಪ ಹೊರಗೆ ಬಂದು ಸೆರೆಯಾಗಿದೆ.

    ದೈತ್ಯಾಕಾರದ ಕಾಳಿಂಗನನ್ನ ನೋಡಿ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಹಾವಾಡಿಗ ಆರೀಫ್ ಕಾಳಿಂಗನನ್ನು ಹಿಡಿದಿದ್ದಾರೆ. ಹಾವು ಎತ್ತಲಾಗದಷ್ಟು ದೈತ್ಯಾಕಾರವಾಗಿತ್ತು. ಸರ್ಪವನ್ನು ಬಳಿಕ ಚಾರ್ಮಾಡಿ ಘಾಟಿಯ ಬೆಂಕಿ ಬೀಳದ ಪ್ರದೇಶಕ್ಕೆ ಬಿಡಲಾಗಿದೆ. ಭಾರಿ ಬಿಸಿಲಿನ ಕಾರಣದಿಂದ ಬೆಂಕಿ ವ್ಯಾಪಕಗೊಳ್ಳುತ್ತಿದೆ. ಚಾರ್ಮಡಿ ಉತ್ತರ ಭಾಗ, ನೆರಿಯಾ ಅರಣ್ಯ, ಬಾಂಜಾರು ಮಲೆ ವ್ಯಾಪ್ತಿಯ ದುರ್ಗಮ ಪ್ರದೇಶದ ಹಾದಿಯಲ್ಲಿ ಬೆಂಕಿಯ ಕೆನ್ನಾಲಿಗೆ ಮುಂದುವರಿದಿದ್ದು, ಅರಣ್ಯ ಇಲಾಖೆಯ ಆ30ಕ್ಕೂ ಅಧಿಕ ಸಿಬ್ಬಂದಿ ಹಗಲು ರಾತ್ರಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

    ಬೆಂಕಿ ಹಚ್ಚಿದ ಕಿಡಿಗೇಡಿಗಳ ಬಂಧನ

    ಕಾಡಂಚಿನಲ್ಲಿ ಇರುವ ಗ್ರಾಮಸ್ಥರು ಎಸ್ಟೇಟ್ ಮಾಫಿಯಾದ ಹುನ್ನಾರದಲ್ಲಿ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆಂಬ ಶಂಕೆ ವ್ಯಾಕ್ತವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಚಾರ್ಮಾಡಿಯಲ್ಲಿ ಬೆಂಕಿ ಹಾಕಿರುವ ಬೆಳ್ತಂಗಡಿ ನಿವಾಸಿಯನ್ನು ಅನುಮಾನದ ಮೇರೆಗೆ ಬಂಧಿಸಿದ್ದಾರೆ. ಇದೇ ವೇಳೆ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ರಘು ಎಂಬಾತನನ್ನು ಬಂಧಿಸಿದ್ದು, ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ. ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಆವರಿಸಿದ್ದರಿಂದ ನೂರಾರು ಎಕರೆ ಅರಣ್ಯ, ತೋಟ ಬೆಂಕಿಗಾಹುತಿಯಾಗಿತ್ತು.


    ನೆರಿಯ, ಚಾರ್ಮಾಡಿ ಹಾಗೂ ಬಾಂಜಾರು ಅರಣ್ಯ ವ್ಯಾಪ್ತಿಯಲ್ಲಿ ಹಬ್ಬಿದ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಸಾಧ್ಯವಾದಷ್ಟು ಸಿಬ್ಬಂದಿಯನ್ನು ಬಳಸಿ ರಾತ್ರಿ ಹಗಲೆನ್ನದೆ ಬೆಂಕಿ ನಂದಿಸಲಾಗುತ್ತಿದೆ. ಶೇ.80ರಷ್ಟು ಬೆಂಕಿ ಆರಿಸುವ ಕಾರ್ಯವಾಗಿದೆ.

    ದಿನೇಶ್ ಕುಮಾರ್, .ಕ ಅರಣ್ಯ ಸಂರಕ್ಷಣಾಧಿಕಾರಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts