More

    ಸೋಂಕಿತರ ಪ್ರಾಣಹಾನಿಗೆ ಆಸ್ಪದ ನೀಡಬೇಡಿ : ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿನ ತೀವ್ರತೆ, ಚಿಕಿತ್ಸಾ ಸೌಲಭ್ಯದ ಮಾಹಿತಿ ಪಡೆದ ಮಾಜಿ ಸಿಎಂ ಕುಮಾರಸ್ವಾಮಿ

    ಚನ್ನಪಟ್ಟಣ :  ನಗರದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯರ ಜತೆ ಚರ್ಚೆ ನಡೆಸಿದ ಅವರು, ತಾಲೂಕಿನಲ್ಲಿ ಸೋಂಕಿನ ತೀವ್ರತೆ ಹಾಗೂ ಸೋಂಕಿತರ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿನ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದರು.

    ಪ್ರತ್ಯೇಕ ಕೇರ್ ಸೆಂಟರ್ ಅವಶ್ಯಕ: ಸಾರ್ವಜನಿಕ ಆಸ್ಪತ್ರೆಯ ಎರಡು ಕೊಠಡಿಗಳಲ್ಲಿ 50 ಬೆಡ್‌ಗಳ ಕೇರ್ ಸೆಂಟರ್ ಆರಂಭಿಸಲಾಗಿದೆ. ಪ್ರತಿನಿತ್ಯ ಆಸ್ಪತ್ರೆಗೆ ನೂರಾರು ಹೊರರೋಗಿಗಳು ಮತ್ತು ಒಳರೋಗಿಗಳು ಆಗಮಿಸುತ್ತಿದ್ದಾರೆ. ಇದರ ನಡುವೆ ಕೇರ್ ಸೆಂಟರ್ ನಡೆಸಬೇಕಾದ ಅನಿವಾರ್ಯತೆಯಿದೆ. ಕರೊನಾ ಸೋಂಕಿತರು ಮತ್ತು ಇತರೆ ರೋಗಿಗಳು ಒಂದೇ ದ್ವಾರದಲ್ಲಿ ತಿರುಗಾಡಬೇಕಾದ ಅನಿವಾರ್ಯತೆಯಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಪ್ರತ್ಯೇಕ ಕೋವಿಡ್ ಸೆಂಟರ್ ಆರಂಭಿಸಿ, ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯನರಸಿಂಹ ಮನವಿ ಮಾಡಿದರು.

    ಇದಕ್ಕೆ ಸ್ಪಂದಿಸಿದ ಎಚ್‌ಡಿಕೆ, ಕರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಸಿಬ್ಬಂದಿ, ಅಧಿಕಾರಿ ವರ್ಗದ ಬಗ್ಗೆ ನನಗೆ ಹೆಮ್ಮೆಯಿದೆ. ಹೊಸದಾದ ಕೋವಿಡ್ ಕೇರ್ ಸೆಂಟರ್, ಸಮರ್ಪಕ ಆಕ್ಸಿಜನ್ ಪೂರೈಕೆ, ಮತ್ತಿತರ ಸವಲತ್ತು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಾಣಹಾನಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.
    ಎಚ್‌ಡಿಕೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುವ ವಿಚಾರ ತಿಳಿದ ಹಲವು ಮುಖಂಡರು ಹಾಗೂ ನಗರಸಭೆ ನೂತನ ಸದಸ್ಯರು ಲಾಕ್‌ಡೌನ್ ನಡುವೆಯೂ ಆಸ್ಪತ್ರೆಯ ಮುಂದೆ ಜಮಾಯಿಸಿದ್ದು ಕಂಡುಬಂತು.

    ರಾಮನಗರ ಉಪವಿಭಾಗಧಿಕಾರಿ ಮಂಜುನಾಥ್, ಡಿಎಚ್‌ಒ ಡಾ.ನಿರಂಜನ್, ತಹಸೀಲ್ದಾರ್ ಎಲ್. ನಾಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ರಾಜು, ತಾಪಂ ಇಒ ಚಂದ್ರು, ನಗರಸಭೆ ಪೌರಾಯುಕ್ತ ಶಿವನಂಕರಿಗೌಡ, ಆಸ್ಪತ್ರೆಯ ಅಧೀಕ್ಷಕ ಡಾ.ವಿಜಯನರಸಿಂಹ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರ ಠಾಣೆ ಪಿಎಸ್‌ಐ ರವೀಂದ್ರ, ಸಂಚಾರಿ ಪಿಎಸ್‌ಐ ಬಿ.ಕೆ.ಪ್ರಕಾಶ್ ಇದ್ದರು.

    ರೋಗಿಗಳ ಸಂಬಂಧಿಕರ ಅಳಲು : ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಮಾಜಿ ಸಿಎಂ ಅವರ ಬಳಿ ಅಳಲು ತೋಡಿಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಯಾವುದಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ. ಕೆಲ ಸವಲತ್ತುಗಳನ್ನು ವಿತರಿಸಲು ಸರ್ಕಾರ ವಿಫಲವಾಗಿದೆ. ಇದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ. ಸೋಂಕಿತರು ಮತ್ತು ಅವರ ಕುಟುಂಬದವರು ಧೈರ್ಯದಿಂದ ಇರಬೇಕು. ನಿಮ್ಮ ಜತೆ ನಾನಿರುತ್ತೇನೆ ಎಂದು ಭರವಸೆ ನೀಡಿದರು.

    ಆಕ್ಸಿಜನ್ ಘಟಕ ಸ್ಥಾಪನೆ : ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 10 ದಿನದೊಳಗೆ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಾಗಿರುವ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿದ ಡಿಸಿಎಂ, ಒಂದೇ ದಿನ 550 ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ 3,000 ಸೋಂಕಿತರು ಇದ್ದಾರೆ.

    ಈ ಪ್ರಮಾಣದಲ್ಲಿ ಕೇವಲ ಶೇ.10ರಷ್ಟು ಸೋಂಕಿತರಿಗೆ ಆಕ್ಸಿಜನ್ ಬೆಡ್‌ಗಳ ಅಗತ್ಯವಿದೆ. ಆದರೆ, ಸರ್ಕಾರ ಶೇ.20-30ರಷ್ಟು ಸೋಂಕಿತರಿಗೂ ಆಕ್ಸಿಜನ್ ಬೆಡ್‌ಗಳನ್ನು ವ್ಯವಸ್ಥೆ ಮಾಡಿದೆ ಎಂದರು. ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಕಾಲ್ ಸೆಂಟರ್ ಮಾಡುತ್ತಿದ್ದೇವೆ. ಇನ್ನು 10 ದಿನದೊಳಗೆ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಅಳವಡಿಸಲಾಗುತ್ತಿದೆ. ಪ್ರತಿ ನಿಮಿಷಕ್ಕೆ 1000 ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ಆಕ್ಸಿಜನ್ ಜನರೇಟರ್ ಹಾಕಲಿಕ್ಕೂ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts