ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಪವರ್ ಸ್ಟಾರ್ ಪುನೀತ್‌ರಾಜಕುಮಾರ್ ಭಾನುವಾರ ಭೇಟಿ ನೀಡಿ, ತಾವು ಅಭಿನಯಿಸಿದ ‘ಯುವರತ್ನ’ ಸಿನಿಮಾದ ಪ್ರಚಾರ ಮಾಡಿದರು. ಪುನೀತ್ ರಾಜಕುಮಾರ್‌ಗೆ, ನಟರಾದ ಡಾಲಿ ಧನಂಜಯ, ರವಿಶಂಕರ ಹಾಗೂ ಸಹ ನಟರು ಸಾಥ್ ನೀಡಿದರು.
‘ಯುವರತ್ನ’ ಸಿನಿಮಾ ಪ್ರಚಾರಕ್ಕಾಗಿ ಪುನೀತ್, ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಸಾಂಬ್ರಾ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಚಿತ್ರತಂಡ ನೇರವಾಗಿ ಕ್ಯಾಂಪ್‌ನ ಐನಾಕ್ಸ್ ಚಿತ್ರಮಂದಿರಕ್ಕೆ ಆಗಮಿಸಿತು. ಈ ವೇಳೆ ಅಭಿಮಾನಿಗಳು ಹೂವಿನ ಹಾರ ಹಾಕಿ, ಡೊಳ್ಳು ಬಾರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಪುನೀತ್‌ರಾಜಕುಮಾರ್ ನೋಡಲು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕನ್ನಡದ ಬಾವುಟ ಹಿಡಿದು ಅಭಿಮಾನಿಗಳು ಅಪ್ಪುಗೆ ಸ್ವಾಗತ ಕೋರಿದರು. ಪುನೀತ್ ಬರುತ್ತಿದ್ದಂತೆ ನಗರದಲ್ಲಿ ತುಂತುರು ಮಳೆ ಕೂಡ ಆರಂಭವಾಯಿತು. ಮಳೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ಮರಿಸಿದರು.
‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಎಂದು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನಿಮ್ಮನ್ನು ನೋಡಬೇಕು ಎಂದೇ ನಾನು ಬಂದಿದ್ದೇನೆ. ನಿಮಗೋಸ್ಕರ ನಾನು ಡ್ಯಾನ್ಸ್ ಮಾಡಿದ್ದೇನೆ. ಕರೊನಾ ನಿಯಮ ಪಾಲಿಸಿಕೊಂಡು, ಮಾಸ್ಕ್ ಧರಿಸಿ ಸುರಕ್ಷಿತವಾಗಿ ಸಿನಿಮಾ ನೋಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಯುವರತ್ನ ಸಿನಿಮಾದ ಡೈಲಾಗ್ ಹೇಲುವ ಮೂಲಕ ಸೇರಿದ್ದ ನೂರಾರು ಅಭಿಮಾನಿಗಳನ್ನು ಅಪ್ಪು ಸಂತಸಗೊಳಿಸಿದರು.