More

    ಸ್ವಂತ ಸೂರಿಗಾಗಿ ಕನಸು ಕಂಡವರು ಅತಂತ್ರ, ಬಾಡಿಗೆ ಮನೆಯಲ್ಲಿ ನೆಲೆ

    ಟಿ.ಎನ್.ಜಗದೀಶ್ ಚನ್ನಗಿರಿ: ಅನುದಾನ ಸ್ಥಗಿತದಿಂದಾಗಿ ಸ್ವಂತ ಸೂರು ಹೊಂದಬೇಕೆಂದು ಹಣ ಪಾವತಿಸಿದ 374 ಫಲಾನುಭವಿಗಳ ಸ್ಥಿತಿ ಈಗ ಅತಂತ್ರವಾಗಿದ್ದು, ಬಾಡಿಗೆ, ಸಂಬಂಧಿಕರ ಮನೆಯಲ್ಲಿ ನೆಲೆ ನಿಲ್ಲುವಂತಾಗಿದೆ.

    ಚನ್ನಗಿರಿ ಪಟ್ಟಣದ ನಿರಾಶ್ರಿತರಿಗೆ ಮನೆ ಕಲ್ಪಿಸುವ ಉದ್ದೇಶದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ 1004 ಮನೆಗಳನ್ನು ಮಂಜೂರು ಮಾಡಿ ಅರ್ಜಿ ಆಹ್ವಾನಿಸಿತ್ತು. ಕಾಲಿ ನಿವೇಶನ ಇದ್ದಂಥವರಿಗೆ ಮಾತ್ರ ಸೂರು ಸಿಗಲಿದೆ ಎಂಬ ನಿಯಮ ವಿಧಿಸಲಾಗಿತ್ತು.

    ಈ ಕಾರಣಕ್ಕಾಗಿ ಜನರು ಹಳೆಯ ಮನೆ ಕೆಡವಿ ಅರ್ಜಿ ಸಲ್ಲಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು 66 ಸಾವಿರ ಹಾಗೂ ಸಾಮಾನ್ಯ ವರ್ಗದವರು 98400 ರೂ. ಪಾವತಿಸಿದ್ದರು. ಅದರಂತೆ 374 ಜನರಿಗೆ ಮನೆ ಕೂಡ ಮಂಜೂರಾಗಿವೆ.

    ಆದರೆ, ಮನೆಗಳ ನಿರ್ಮಾಣ ಅರ್ಧಕ್ಕೇ ನಿಂತು ಒಂದು ವರ್ಷ ಗತಿಸುತ್ತಿದೆ. ಫಲಾನುಭವಿಗಳು ಇದ್ದ ಸೂರು ಕಳೆದುಕೊಂಡು, ಇತ್ತ ಹೊಸ ಮನೆಯೂ ಸಿಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಪ್ರತಿ ಮನೆಗೆ 7.5 ಲಕ್ಷ ರೂ. ಸಹಾಯಧನ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಪ್ರತಿ ಮನೆಗೆ 7.5 ಲಕ್ಷ ರೂ. ಸಹಾಯಧನ ನಿಗದಿ ಮಾಡಿದ್ದು, ಕಾಮಗಾರಿ ಟೆಂಡರ್ ಅನ್ನು ಬೆಂಗಳೂರಿನ ಉಷಾ ಕನ್ಸಟ್ರಕ್ಷನ್‌ಗೆ ಗುತ್ತಿಗೆ ನೀಡಿತ್ತು. ಇದರಂತೆ ಫಲಾನುಭವಿಗಳ ಪಟ್ಟಿ ಪಡೆದು ಸ್ಥಳ ಪರಿಶೀಲನೆ ನಡೆಸಿ, ಕೆಲಸ ಆರಂಭಿಸಿದ್ದರು. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಆಗದೆ, ಇದು ಅರ್ಧಕ್ಕೇ ನಿಂತಿದ್ದು, ಮನೆ ಮಾಹಿತಿ ಕೇಳಬೇಕೆಂದವರಿಗೆ ಕಂಪನಿಯವರು ಸಂಪರ್ಕಕ್ಕೇ ಸಿಗುತ್ತಿಲ್ಲ. ಹೊಸ ಸೂರಿನ ಕನಸು ಕಂಡು ಅಚ್ಚುಕಟ್ಟಾದ ಮನೆ ಕೆಡವಿಕೊಂಡವರು ಕಳೆದ ಆರು ತಿಂಗಳಿಂದ ಬಾಡಿಗೆ, ಸಂಬಂಧಿಕರ ಆಶ್ರಯದಲ್ಲಿ ಉಳಿದುಕೊಂಡಿದ್ದಾರೆ.

    ಮನೆ ಕಟ್ಟಲು ಪ್ರಾರಂಭವಾದ ದಿನದಿಂದ ಮನೆ ಮಾಲೀಕರು ಸ್ವಂತ ವಾಹನ ಪಡೆದು ಅವರು ತಿಳಿಸಿದ ಸ್ಥಳಕ್ಕೇ ಹೋಗಿ ಇಟ್ಟಿಗೆ, ಸಿಮೆಂಟ್ ಮತ್ತಿತರ ಸಾಮಗ್ರಿಗಳನ್ನು ಹೊತ್ತು ತಂದು ಕೆಲಸ ಮಾಡಿಸಬೇಕು. ಅನುದಾನಕ್ಕಿಂತ ಹೆಚ್ಚು ಮನೆ ಕಟ್ಟಿಕೊಳ್ಳಲು ಮಾಲೀಕರು ಹೆಚ್ಚಿಗೆ ಹಣ ಭರಿಸಬೇಕು. ಇಲ್ಲದಿದ್ದರೆ ಸಾಮಗ್ರಿ ಸಿಗುವುದಿಲ್ಲ. ಒಂದು ವರ್ಷ ಕಳೆದರೂ ಮನೆ ಆಗಿಲ್ಲ. ಕೈ ಕಾಲಿಯಾಗಿ ಬಾಡಿಗೆ ಕಟ್ಟಲು ಕಷ್ಟಪಡಬೇಕಾಗಿದೆ. ಕುಟುಂಬದವರು ಕಷ್ಟದಲ್ಲಿ ಇದ್ದೇವೆ.
    ಕರಿಬಸಪ್ಪ, ಫಲಾನುಭವಿ.

    ಮನೆ ಇಲ್ಲದವರಿಗೆ ಆಸರೆ ಆಗಲೆಂದು ಕಡತಗಳನ್ನು ಹಿಡಿದು ಸರ್ಕಾರದ ಹಂತದಲ್ಲಿ ಓಡಾಡಿ ಸಾವಿರ ಮನೆ ತಂದು ಅರ್ಹರಿಗೆ ನೀಡಲಾಗಿದೆ. ಮನೆ ಮಾಲೀಕರು ಇದೂವರೆಗೆ ಯಾರು ದೂರನ್ನು ನೀಡಿಲ್ಲ. ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಮಾತನಾಡಿ ಆದಷ್ಟು ಬೇಗ ಸೂರು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು.
    ಮಾಡಾಳು ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ.

    ಮನೆ ಕಾಮಾಗಾರಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಮನೆ ಕೆಲಸ ಮುಗಿಸಿ ಮಾಲೀಕರಿಗೆ ಬೀಗ ನೀಡಬೇಕು. ತಾಂತ್ರಿಕ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ವಾರದಿಂದ ಪ್ರಾರಂಭ ಮಾಡಿ ಬೇಗ ಕೆಲಸ ಮುಗಿಸಿಕೊಡಲಾಗುತ್ತದೆ.
    ಎಇ ನಿಶಾಂತ್ ದಾವಣಗೆರೆ ಕೊಳಗೇರಿ ಅಭಿವೃದ್ಧಿ ಮಂಡಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts