More

    ಊಟದ ಮೆನು ಪರಿಷ್ಕರಣೆ

    ಉಡುಪಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ಹೊಸ ವರ್ಷದಿಂದ ಊಟದ ಮೆನು ಬದಲಾಗಿದ್ದು, ಫೆಬ್ರವರಿ ತಿಂಗಳಿನಿಂದ ಹೊಸ ವ್ಯವಸ್ಥೆಯಲ್ಲಿ ಆಹಾರ ಪೂರೈಕೆಯಾಗಲಿದೆ. ವಾರಕ್ಕೊಮ್ಮೆ ಚಿಕನ್, ಬ್ರೆಡ್ ಆಮ್ಲೆಟ್, ಬಿಸ್ಕಿಟ್ ಬದಲಿಗೆ ಉಪಾಹಾರ, ಎರಡು ಸಲ ಮೀನಿನ ಪದಾರ್ಥ ಹೊಸ ಊಟದ ಮೆನುವಿಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಉಡುಪಿ ಜಿಲ್ಲೆಯಲ್ಲಿರುವ ಇಲಾಖೆಯ 22 ಹಾಸ್ಟೆಲ್‌ಗಳಿಗೂ ಉಪ ನಿರ್ದೇಶಕರಿಂದ ಸೂಚನೆ ರವಾನೆಯಾಗಿದೆ.
    ಪೋಸ್ಟ್ ಮೆಟ್ರಿಕ್‌ನಲ್ಲಿ ಈ ಹಿಂದೆ ತಿಂಗಳಿಗೆ 1 ಮತ್ತು 15ನೇ ತಾರೀಕಿನಂದು ಎರಡು ಬಾರಿ ಮಾತ್ರ ಊಟಕ್ಕೆ ಚಿಕನ್ ನೀಡಲಾಗುತಿತ್ತು. 8ನೇ ಮತ್ತು 23 ತಾರೀಕಿನಂದು ಎರಡು ಬಾರಿ ಮಾತ್ರ ಸಾಯಂಕಾಲ ಉಪಾಹಾರಕ್ಕೆ ಬ್ರೆಡ್ ಆಮ್ಲೆಟ್ ಇರುತ್ತಿತ್ತು. ಹೊಸ ಮೆನುವಿನಂತೆ ಈ ತಿಂಗಳಿನಿಂದ ವಾರಕ್ಕೊಮ್ಮೆ ಊಟಕ್ಕೆ ಚಿಕನ್, ಬ್ರೆಡ್ ಆಮ್ಲೆಟ್ ನೀಡಲಾಗುವುದು. ವಾರಕ್ಕೆ ಒಂದು ಸಲ ಮೀನಿನ ಊಟ ಮತ್ತು ಮಧ್ಯಾಹ್ನದ ಊಟದಲ್ಲಿ ಪ್ರತೀ ದಿನ ಅನ್ನ, ಸಾರು, ತರಕಾರಿ ಊಟ ಎಂದಿನಂತೆ ಮುಂದುವರಿಯಲಿದೆ.

    ಸಾಯಂಕಾಲದ ಉಪಾಹಾರವೂ ಬದಲು: ಇಲಾಖೆಯ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ ಈ ಹಿಂದೆ ಸಾಯಂಕಾಲ ಚಹಾ ಜತೆಗೆ ಬಿಸ್ಕಿಟ್ ಮಾತ್ರ ನೀಡಲಾಗುತಿತ್ತು. ಇನ್ನು ಮುಂದೆ ಬಿಸ್ಕಿಟನ್ನು ವಾರಕ್ಕೊಮ್ಮೆ ಮಾತ್ರ ಇಟ್ಟು ಉಪ್ಪಿಟ್ಟು, ಶ್ಯಾವಿಗೆ ಬಾತ್, ಬೋಂಡಾ, ಬಜ್ಜಿ, ಬ್ರೆಡ್ ಆಮ್ಲೆಟ್, ಗೋಧಿ ದೋಸೆ, ಶೀರಾ ನೀಡಲಾಗುವುದು.

    ವಾರಕ್ಕೆ ಎರಡು ಬಾರಿ ಮೀನೂಟ
    ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಬೆಳಗ್ಗೆ ಎಂದಿಂತೆ ಕೊಡುತ್ತಿದ್ದ ಗಂಜಿ, ಇಡ್ಲಿ, ದೋಸೆ ಇತರೆ ಉಪಾಹಾರ ಮುಂದುವರಿಯಲಿದೆ. ಸಾಯಂಕಾಲ ಊಟಕ್ಕೆ ತಿಂಗಳಿಗೆ ಎರಡು ಸಲವಿದ್ದ ಚಿಕನ್ ವಾರಕ್ಕೊಮ್ಮೆ ಮಾಡಲಾಗಿದೆ. ವಾರಕ್ಕೆ ಒಂದು ಸಲ ಕೊಡುತ್ತಿದ್ದ ಮೀನೂಟವನ್ನು ಪರಿಷ್ಕರಿಸಿ ವಾರಕ್ಕೆ ಎರಡು ಸಲ ಮೀನಿನ ಸಾರು/ಮೀನಿನ ಫ್ರೈ ಸಿಗಲಿದೆ. ಪ್ರತೀ ವಾರ ಒಂದು ದಿನ ಕೊಡುತ್ತಿದ್ದ ಮೊಟ್ಟೆ ಎಂದಿನಂತೆ ಮುಂದುವರಿಯಲಿದೆ. ವಾರದಲ್ಲಿ 4 ದಿನ ಹಾಸ್ಟೆಲ್ ಮಕ್ಕಳು ಮೀನು, ಮೊಟ್ಟೆ, ಚಿಕನ್ ಸವಿಯಲಿದ್ದಾರೆ.

    ಗುಣಮಟ್ಟಕ್ಕೆ ಆದ್ಯತೆ :ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಕ್ಕಳಿಗೆ ಕೊಡುವ ಊಟದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳ ತಂಡ ನಿರಂತರ ಹಾಸ್ಟೆಲ್‌ಗಳ ಭೇಟಿ, ಅಡುಗೆ ಕೋಣೆ, ಆಹಾರ ಗುಣಮಟ್ಟ ಪರಿಶೀಲನೆ ನಡೆಸುತ್ತಾರೆ. ಆಗಾಗ ಮಕ್ಕಳೊಂದಿಗೆ ಆಹಾರ ಸೇವಿಸಿ ಗುಣಮಟ್ಟ, ರುಚಿ ಪರೀಕ್ಷಿಸುತ್ತಾರೆ. ತಿಂಗಳಿಗೊಮ್ಮೆ ಗುತ್ತಿಗೆದಾರರಿಂದ ಪೂರೈಕೆಯಾಗುವ ದಿನಸಿ ಪದಾರ್ಥಗಳ ಗುಣಮಟ್ಟವನ್ನು ಹಾಸ್ಟೆಲ್‌ಗಳ ಮೇಲ್ವಿಚಾರಕರು ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಕೊಡುತ್ತಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಅಡುಗೆ ಸಿಬ್ಬಂದಿ ಕೊರತೆ ಇದ್ದು, ಹೆಚ್ಚಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಿಸಿಎಂನಲ್ಲಿ ಬದಲಾವಣೆ ಇಲ್ಲ: ಹಿಂದುಳಿದ ವರ್ಗ ಇಲಾಖೆ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ಹಾಸ್ಟೆಲ್ ಮೆನುವಿನಲ್ಲಿ ಹೊಸ ವರ್ಷ ಬದಲಾವಣೆ ಮಾಡಿಲ್ಲ. ತಿಂಗಳಿಗೆ ಎರಡು ಸಲ ಊಟಕ್ಕೆ ಚಿಕನ್, ವಾರಕ್ಕೊಮ್ಮೆ ಮೀನು/ಮೊಟ್ಟೆ ಪದಾರ್ಥ. ತಿಂಗಳಿಗೆ ಎರಡು ಬಾರಿ ಬ್ರೆಡ್ ಆಮ್ಲೆಟ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯಾದ್ಯಂತ ಏಕರೂಪ ವ್ಯವಸ್ಥೆ ಅಲ್ಲ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳ ಆಹಾರ ಕ್ರಮ ರಾಜ್ಯದಾದ್ಯಂತ ಏಕರೂಪ ಇಲ್ಲ. ಇಲಾಖೆಯ ಆಯುಕ್ತರ ಅನುಮತಿ ಪಡೆದು ಸ್ಥಳೀಯ ಜನರ ಆಹಾರ ಕ್ರಮ ಆಧರಿಸಿ ಜಿಲ್ಲಾ ಮಟ್ಟದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಉಪಾಹಾರ ಪಟ್ಟಿಯಲ್ಲಿ ಬದಲಾಣೆ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ.

    ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅವರ ಸೂಚನೆಯಂತೆ ಊಟದ ಮೆನು ಪರಿಷ್ಕರಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳ ಬೇಡಿಕೆಯಂತೆ ಅಗತ್ಯ ಆಹಾರ ಕೊಡುವುದು ಉದ್ದೇಶ. ಫೆಬ್ರವರಿಯಿಂದ ಪರಿಷ್ಕೃತ ಮೆನುವಿನಂತೆ ವಿದ್ಯಾರ್ಥಿಗಳು ಊಟ, ಉಪಾಹಾರ ಸೇವಿಸಲಿದ್ದಾರೆ. ಆಹಾರ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
    ರಮೇಶ್ ಎನ್., ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಮಕ್ಕಳ ಆಹಾರ ಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೆಟ್ರಿಕ್ ನಂತರದ, ಮೆಟ್ರಿಕ್ ಪೂರ್ವ ವ್ಯವಸ್ಥೆಯಲ್ಲಿಯೂ ಬದಲಾವಣೆ ಇಲ್ಲ. ವಾರದಲ್ಲಿ ಒಂದು ದಿನ ಚಿಕನ್, ಎರಡು ದಿನ ಮೊಟ್ಟೆ, ಬಾಳೆಹಣ್ಣು, ಚಪಾತಿ, ಸಿಹಿ, ಉಳಿದಂತೆ ಪ್ರತೀ ದಿನ ಬೆಳಗ್ಗೆ, ಸಾಯಂಕಾಲ ತಿಂಡಿ, ಮಧ್ಯಾಹ್ನ, ರಾತ್ರಿ ಅನ್ನ, ಸಾಂಬಾರು ಮತ್ತು ಇತರ ಸಾಮಾನ್ಯ ಆಹಾರ ವ್ಯವಸ್ಥೆ ಇರುತ್ತದೆ.
    – ಯೋಗೀಶ್, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ

    – ಅವಿನ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts