More

    ಚಂದ್ರಯಾನ-3ರಲ್ಲಿ ಕೊಟ್ಟೂರು ಮೂಲದ ವಿಜ್ಞಾನಿ

    ಹೊಸಪೇಟೆ: ಭಾರತದ ಹೆಮ್ಮೆಯಾದ ಚಂದ್ರಯಾನ-3 ಯಶಸ್ವಿ ಉಡಾವಣೆಯಾಗಿದ್ದು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಮುಗಿಲೆತ್ತರಕ್ಕೇರಿದೆ.

    ಚಂದ್ರಯಾನ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಸಾಹಸಗಾಥೆಯಲ್ಲಿ ಜಿಲ್ಲೆಯ ಕೊಟ್ಟೂರು ಮೂಲದ ಇಸ್ರೋ ವಿಜ್ಞಾನಿ ಡಾ.ಬಿ.ಎಚ್‌ಎಂ. ದಾರುಕೇಶ್ ಭಾಗಿಯಾಗಿದ್ದು ಮತ್ತೊಂದು ಹೆಮ್ಮೆಯ ಸಂಗತಿ.

    ಜಿಲ್ಲೆಯ ಹೂವಿನಹಡಗಲಿಯ ಬಾವಿಹಳ್ಳಿಯ ಮೂಲದ ಸುವರ್ಣಮ್ಮ ಹಾಗೂ ಮಹದೇವಯ್ಯ ದಂಪತಿ ಮೊದಲ ಪುತ್ರರಾಗಿ 1979ರ ಆ.6ರಂದು ದಾರುಕೇಶ್ ಜನಿಸಿದ್ದಾರೆ.

    ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿಯಲ್ಲಿ ಏಕೋಪಧ್ಯಾಯ ಶಿಕ್ಷಕರಾಗಿದ್ದ ತಂದೆಯ ಶಾಲೆಯಲ್ಲೇ ಒಂದರಿಂದ ನಾಲ್ಕನೇ ತರಗತಿ, ನಂತರ ಕೊಟ್ಟೂರು ನಾಗರಾಜ ಸರ್ಕಾರಿ ಪ್ರಾಥಮಿಕ ಶಾಲೆ, ಬಾಯ್ಸ ಹೈಸ್ಕೂಲ್, ಪಿಯುಸಿ ವಿಜ್ಞಾನ, ಬಿಎಸ್‌ಸಿ ಹಾಗೂ ಎಂಎಸ್ಸಿ ಹಾಗೂ ಪಿಎಚ್.ಡಿ ಪೂರ್ಣಗೊಳಿಸಿದ್ದಾರೆ.

    ಎಂಎಸ್‌ಸಿ ವಿದ್ಯಾರ್ಥಿಯಾಗಿದ್ದಾಗ ಅಹಮದಾಬಾದ್ ಫಿಸಿಕಲ್ ರಿಸರ್ಚ್ ಲ್ಯಾಬರೋಟರಿಯಲ್ಲಿ ನೀಡಲಾಗುವ ಎರಡು ತಿಂಗಳ ತರಬೇತಿಗೆ ದಾರುಕೇಶ್ ಆಯ್ಕೆಯಾಗಿದ್ದರು. ದೇಶದ 25 ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದರು.

    ಇದನ್ನೂ ಓದಿ:http://ಚಂದ್ರಯಾನ-3ರಲ್ಲಿ ಕೊಟ್ಟೂರು ಮೂಲದ ವಿಜ್ಞಾನಿ

    ಅಲ್ಲಿಂದ ಇವರ ಜೀವನದ ಗುರಿ ಬದಲಾಯಿತು. ಭೌತಶಾಸ್ತ್ರದಲ್ಲಿ ಮುಂದುವರಿಯಲು ನಿರ್ಧರಿಸಿದ್ದ ಅವರು, 1998ರಲ್ಲಿ ಇಸ್ರೋ ವಿಜ್ಞಾನಿಯಾಗಿ ನೇಮಕವಾದರು. ಅಲ್ಲಿಂದ ಈವರೆಗೆ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಇಸ್ರೋ ಬೆಂಗಳೂರು ಕೇಂದ್ರ ಕಚೇರಿಯ ಸಹ ನಿರ್ದೇಶಕರಾಗಿದ್ದಾರೆ.

    ಸಂದೇಶ ವಾಹಕದ ರೂವಾರಿ: ಭೂಮಿ ಹಾಗೂ ಉಪಗ್ರಹಗಳ ಸಂಪರ್ಕವು ಮೈಕ್ರೋ ವೇವ್ ಫ್ರಿಕ್ವೆನ್ಸಿಯಲ್ಲಿರುತ್ತದೆ. ಚಂದ್ರಯಾನ-1ಕ್ಕೆ ಕೈಹಾಕಿದ್ದ ಇಸ್ರೋಗೆ ಆಂಪ್ಲಿಫೈರ್ ಸಿದ್ಧಗೊಳಿಸುವುದೆ ಸವಾಲಾಗಿತ್ತು. ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಮೀ ದೂರದಲ್ಲಿರುವ ಚಂದ್ರನ ಮೇಲ್ಮೈನಲ್ಲಿ ಸುತ್ತುವ ಉಪಗ್ರಹಕ್ಕೆ ಲ್ಯಾಂಡರ್ ಮತ್ತು ರೂವರ್‌ನಿಂದ ಸಂದೇಶ ಪಡೆಯಲು, ರೂವರ್ ಹಾಗೂ ಲ್ಯಾಂಡರ್‌ನ ತಾಂತ್ರಿಕ ಸ್ಥಿತಿಗತಿ ತಿಳಿವಲ್ಲಿ ಆಂಪ್ಲಿಫೈಯರ್ ಪಾತ್ರ ಪ್ರಮುಖ. ಅದಕ್ಕಾಗಿ ಐದು ವಾಟ್ ಸಿಗ್ನಲ್ ಆಂಪ್ಲಿಫೈರ್‌ಗಾಗಿ ಇಸ್ರೋ ಹುಡುಕಾಟದಲ್ಲಿತ್ತು. ಇದನ್ನು ಬಹುತೇಕ ಸೇನಾಪಡೆಗಳಲ್ಲಿ ಬಳಕೆ ಆಗುವುದರಿಂದ ಆಂಪ್ಲಿಫೈರ್ ನೀಡಲು ಯಾವ ದೇಶವೂ ಮುಂದಾಗಲಿಲ್ಲ. ಆದರೆ, ಜಪಾನ್ ಸಂಸ್ಥೆಯೊಂದು ತನ್ನಲ್ಲಿರುವ 12 ವಾಟ್‌ನ ಆಂಪ್ಲಿಫೈರ್ ಒದಗಿಸಿತ್ತು. ಆದರೆ, ಅದು ಅಂತರಿಕ್ಷ ಯಾನಕ್ಕೆ ಬಳಕೆಯಾಗುವ ಬಗ್ಗೆ ಭರವಸೆ ಇರಲಿಲ್ಲ. ಆದರೂ, ಅದನ್ನು ಪಡೆದ ಇಸ್ರೋ, ಆಂಪ್ಲಿಫೈರ್ ಸಿದ್ಧಗೊಳಿಸುವ ಹೊಣೆಯನ್ನು ಐಸಿ (ಇಂಟಿಗ್ರೇಟ್ ಸರ್ಕ್ಯೂಟ್) ಡಿಸೈನ್ ತಂಡದ ಮುಖ್ಯಸ್ಥರಾಗಿದ್ದ ಡಾ.ಬಿ.ಎಚ್.ಎಂ.ದಾರುಕೇಶ್ ಹೆಗಲೇರಿಸಿತು. ಇಸ್ರೋ ನಿರೀಕ್ಷೆಯಂತೆ ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ ಇಸ್ರೋ ನೀಡುವ ವಿವಿಧ ಪ್ರಶಸ್ತಿಗಳ ಭಾಜನರಾದರು. ಆನಂತರ ಚಂದ್ರಯಾನ-2, ಮಂಗಳಯಾನ, ಇದೀಗ ಚಂದ್ರಯಾನ-3ಗೂ ದಾರುಕೇಶ್ ನೇತೃತ್ವದ ತಂಡ ಆಂಪ್ಲಿಫೈರ್ ಸಿದ್ಧಗೊಳಿಸಿದೆ. ಅದನ್ನು ಲ್ಯಾಂಡರ್ (ನೌಕೆ), ರೋವರ್(ತೆವಳುವ ಬಂಡಿ)ಯಲ್ಲಿ ತಲಾ ಎರಡು ಯುನಿಟ್ ಐದು ವಾಟ್ ಆಂಪ್ಲಿಫೈರ್ ಅಳವಡಿಸಲಾಗಿದೆ ಎಂಬುದು ಗಮನಾರ್ಹ.

    ಅಂತರಿಕ್ಷ ಯಾನದಲ್ಲಿ ಮೆಟೇರಿಯಲ್, ಡೈಮೆನ್ಷನ್ ಅಂಡ್ ಪ್ರೋಸೆಸ್ ಎಂಬುದು ಅತಿಮುಖ್ಯ. ಆಂಪ್ಲಿಫೈರ್‌ನಿಂದಲೇ ಉಗ್ರಹದ ಆರೋಗ್ಯ, ಸೆನ್ಸರ್ ಕೆಲಸ ಮಾಡುವ ಬಗೆ ತಿಳಿಯಲು ಸಾಧ್ಯ. ಅದನ್ನು ಸಿದ್ಧಗೊಳಿಸುವ ಹೊಣೆ ನನ್ನದಾಗಿತ್ತು. ಜತೆಗೆ ಚಂದ್ರಯಾನ-3ರಲ್ಲಿ ಇಸ್ರೋ ಚೇರ್ಮನ್‌ಗೆ ಪಿಆರ್‌ಒ ಕೂಡಾ ಆಗಿದ್ದು, ಖುಷಿ ತಂದಿದೆ. ಎಲ್ಲರ ಆಸೆಯಂತೆ ಅದು ಚಂದ್ರನ ಅಂಗಳದಲ್ಲಿ ಕೆಲಸ ಮಾಡುವಂತಾಗಬೇಕು. ಆಗ ನಮ್ಮೆಲ್ಲರ ಶ್ರಮ ಫಲಿಸಿದಂತೆ.
    ಡಾ.ಬಿ.ಎಚ್‌ಎಂ. ದಾರುಕೇಶ್, ಇಸ್ರೋ ಸಹ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts