More

    ಐಪಿಎಲ್ ಕ್ಯಾಪ್ಟನ್ಸ್‌ಗೆ ಸವಾಲು, 8 ನಾಯಕರ ಎದುರಿದೆ ಭಿನ್ನವಾದ ಚಾಲೆಂಜ್

    ಬೆಂಗಳೂರು: ಕರೊನಾ ಭೀತಿಯ ನಡುವೆ ಐಪಿಎಲ್‌ನಂಥ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವುದು ಕಠಿಣ ಸವಾಲು. ಇದರೊಂದಿಗೆ ಟೂರ್ನಿಯ 8 ತಂಡಗಳನ್ನು ಮುನ್ನಡೆಸಲಿರುವ ನಾಯಕರೂ ಭಿನ್ನವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲ ನಾಯಕರಿಗೆ ಇದು ವೃತ್ತಿಜೀವನದ ದೆಸೆಯನ್ನೇ ಬದಲಾಯಿಸುವ ಟೂರ್ನಿಯಾಗಬಹುದು. ಯುಎಇ ಪಿಚ್‌ಗಳ ಮರ್ಮವನ್ನು ಬೇಗನೆ ಅರಿತುಕೊಂಡು ತಂಡದ ಆಟಗಾರರನ್ನು ಅದಕ್ಕೆ ತಕ್ಕಂತೆ ಸಮರ್ಥವಾಗಿ ಬಳಸಿಕೊಳ್ಳುವ ಚಾಲೆಂಜ್ ಕೂಡ ನಾಯಕರ ಮುಂದಿದೆ.

    ವಿರಾಟ್ ಕೊಹ್ಲಿ (ಆರ್‌ಸಿಬಿ)
    ಕಳೆದ 5 ವರ್ಷಗಳಿಂದ ಟೀಮ್ ಇಂಡಿಯಾ ನಾಯಕರಾಗಿದ್ದರೂ, ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದಿರುವ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲೂ ಕಳೆದ 7 ವರ್ಷಗಳಿಂದ ಆರ್‌ಸಿಬಿ ನಾಯಕರಾಗಿದ್ದರೂ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಈ ಕೊರತೆಯನ್ನು ಹಾಲಿ ವರ್ಷವಾದರೂ ನೀಗಿಸುವ ಸವಾಲು ಅವರ ಮುಂದಿದೆ.
    ಐಪಿಎಲ್ ನಾಯಕತ್ವ: ಪಂದ್ಯ: 110, ಜಯ: 50, ಸೋಲು: 56, ರದ್ದು: 4, ಗೆಲುವಿನ ಸರಾಸರಿ: 47.16.

    ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್)
    ಈಗಾಗಲೆ 4 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದರೂ, ಮುಂಬೈ ಇಂಡಿಯನ್ಸ್ ತಂಡವನ್ನು ಒಮ್ಮೆಯೂ ಸತತ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸದ ಕೊರತೆಯನ್ನು ನೀಗಿಸುವ ಸವಾಲು ರೋಹಿತ್ ಶರ್ಮ ಮುಂದಿದೆ. ಜತೆಗೆ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಚಾಣಕ್ಷ ನಾಯಕತ್ವದ ಮೇಲಿನ ನಿರೀಕ್ಷೆ ಉಳಿಸಿಕೊಳ್ಳಬೇಕಾಗಿದೆ.
    ಐಪಿಎಲ್ ನಾಯಕತ್ವ: ಪಂದ್ಯ: 104, ಜಯ: 62, ಸೋಲು: 42, ಗೆಲುವಿನ ಸರಾಸರಿ: 58.65.

    ಎಂಎಸ್ ಧೋನಿ (ಚೆನ್ನೈ ಸೂಪರ್‌ಕಿಂಗ್ಸ್)
    ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕಾರಣ ಈ ಬಾರಿ ಧೋನಿ ನಿರಾಳವಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಉಪನಾಯಕ ಸುರೇಶ್ ರೈನಾ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಧೋನಿ ಹೆಗಲ ಮೇಲಿನ ಹೊಣೆ ಇನ್ನಷ್ಟು ಹೆಚ್ಚಾಗಿದೆ.
    ಐಪಿಎಲ್ ನಾಯಕತ್ವ: ಪಂದ್ಯ: 174, ಜಯ: 104, ಸೋಲು: 69, ರದ್ದು: 1, ಗೆಲುವಿನ ಸರಾಸರಿ: 60.11.

    ಇದನ್ನೂ ಓದಿ: 120 ದೇಶಗಳಲ್ಲಿ ಐಪಿಎಲ್ ನೇರಪ್ರಸಾರ, ಆದರೆ ಈ ನೆರೆಯ ದೇಶದಲ್ಲೇ ಪ್ರಸಾರ ಕಾಣಲ್ಲ!

    ಕೆಎಲ್ ರಾಹುಲ್ (ಕಿಂಗ್ಸ್ ಇಲೆವೆನ್ ಪಂಜಾಬ್)
    ಬ್ಯಾಟ್ಸ್‌ಮನ್ ಆಗಿ ಈಗಾಗಲೆ ಭರವಸೆ ಮೂಡಿಸಿರುವ ಕನ್ನಡಿಗ ಕೆಎಲ್ ರಾಹುಲ್ ಮೊದಲ ಬಾರಿ ಐಪಿಎಲ್ ತಂಡವೊಂದರ ನಾಯಕರಾಗಿದ್ದಾರೆ. ಬ್ಯಾಟಿಂಗ್-ವಿಕೆಟ್ ಕೀಪಿಂಗ್ ಜತೆಗೆ ನಾಯಕತ್ವದ ಹೊಣೆಯನ್ನೂ ಸಮರ್ಥವಾಗಿ ಮುನ್ನಡೆಸುವ ಸವಾಲು ಅವರ ಮುಂದಿದೆ. ಕನ್ನಡಿಗ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿರುವುದು ಅವರ ನಾಯಕತ್ವದ ಭಾರವನ್ನು ಅರ್ಧದಷ್ಟು ಇಳಿಸಿದೆ.

    ಶ್ರೇಯಸ್ ಅಯ್ಯರ್ (ಡೆಲ್ಲಿ ಕ್ಯಾಪಿಟಲ್ಸ್)
    ಕಳೆದ ಆವೃತ್ತಿಯಲ್ಲಿ ಯುವ ಆಟಗಾರರ ತಂಡವನ್ನು ಉತ್ತಮವಾಗಿಯೇ ಮುನ್ನಡೆಸಿದ್ದ ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಈ ಬಾರಿ ನಾಯಕತ್ವದಲ್ಲಿ ಇನ್ನಷ್ಟು ಪಕ್ವತೆ ತೋರಬೇಕಾಗಿದೆ. ಈ ಮೂಲಕ ತಮ್ಮಲ್ಲಿನ ನಾಯಕತ್ವ ಗುಣವನ್ನು ಇನ್ನಷ್ಟು ಸಾಬೀತುಪಡಿಸಬೇಕಾಗಿದೆ.
    ಐಪಿಎಲ್ ನಾಯಕತ್ವ: ಪಂದ್ಯ: 24, ಜಯ: 14, ಸೋಲು: 10, ಗೆಲುವಿನ ಸರಾಸರಿ: 56.25.

    ಐಪಿಎಲ್ ಕ್ಯಾಪ್ಟನ್ಸ್‌ಗೆ ಸವಾಲು, 8 ನಾಯಕರ ಎದುರಿದೆ ಭಿನ್ನವಾದ ಚಾಲೆಂಜ್

    ಡೇವಿಡ್ ವಾರ್ನರ್ (ಸನ್‌ರೈಸರ್ಸ್‌ ಹೈದರಾಬಾದ್)
    ಕಿವೀಸ್ ಕೂಲ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರನ್ನೇ ಹಿಂದಿಕ್ಕಿ ನಾಯಕತ್ವ ಸಂಪಾದಿಸಿರುವ ಡೇವಿಡ್ ವಾರ್ನರ್ ಈ ಹಿಂದೆ 2016ರಲ್ಲಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಅನುಭವ ಹೊಂದಿದ್ದಾರೆ. ತಂಡದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಯುಎಇ ಪಿಚ್‌ನಲ್ಲಿ ಅವರು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
    ಐಪಿಎಲ್ ನಾಯಕತ್ವ: ಪಂದ್ಯ: 47, ಜಯ: 26, ಸೋಲು: 21, ಗೆಲುವಿನ ಸರಾಸರಿ: 55.31.

    ಸ್ಟೀವನ್ ಸ್ಮಿತ್ (ರಾಜಸ್ಥಾನ ರಾಯಲ್ಸ್)
    ಚೆಂಡು ವಿರೂಪ ಪ್ರಕರಣಕ್ಕೆ ಮುನ್ನ ಆಸ್ಟ್ರೇಲಿಯಾ ನಾಯಕರಾಗಿ ಉತ್ತಮ ಯಶಸ್ಸನ್ನೇ ಕಂಡಿದ್ದ ಸ್ಟೀವನ್ ಸ್ಮಿತ್, ರಾಷ್ಟ್ರೀಯ ತಂಡದ ನಾಯಕತ್ವಕ್ಕೆ ಮರಳಲು ಐಪಿಎಲ್ ಯಶಸ್ಸು ರಹದಾರಿಯಾಗಬಹುದು.
    ಐಪಿಎಲ್ ನಾಯಕತ್ವ: ಪಂದ್ಯ: 29, ಜಯ: 19, ಸೋಲು: 9, ರದ್ದು: 1, ಗೆಲುವಿನ ಸರಾಸರಿ: 67.85.

    ದಿನೇಶ್ ಕಾರ್ತಿಕ್ (ಕೋಲ್ಕತ ನೈಟ್‌ರೈಡರ್ಸ್‌)
    ಇತರೆಲ್ಲ ನಾಯಕರಿಗಿಂತ ಹೆಚ್ಚಾಗಿ ತೂಗುಗತ್ತಿಯ ನಡಿಗೆ ದಿನೇಶ್ ಕಾರ್ತಿಕ್ ಅವರದು. ಕಳೆದ ಬಾರಿ ನಿರೀಕ್ಷಿತ ಯಶ ಕಾಣದಿದ್ದರೂ ಹುದ್ದೆ ಉಳಿಸಿಕೊಂಡಿರುವ ಅವರು, ಈ ಬಾರಿ ಯಶಸ್ಸು ಗಳಿಸದಿದ್ದರೆ ಖಂಡಿತವಾಗಿಯೂ ನಾಯಕತ್ವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇಂಗ್ಲೆಂಡ್‌ನ ವಿಶ್ವಕಪ್ ವಿಜೇನ ನಾಯಕ ಇವೊಯಿನ್ ಮಾರ್ಗನ್ ತಂಡದ ಉಪನಾಯಕರಾಗಿ ನೆರವಾಗಲಿರುವುದು ಈ ಬಾರಿ ಕಾರ್ತಿಕ್ ಸವಾಲನ್ನು ಸ್ವಲ್ಪ ಸುಲಭಗೊಳಿಸಬಹುದು.
    ಐಪಿಎಲ್ ನಾಯಕತ್ವ: ಪಂದ್ಯ: 36, ಜಯ: 17, ಸೋಲು: 19, ಗೆಲುವಿನ ಸರಾಸರಿ: 48.61.

    ಕ್ರಿಕೆಟಿಗ ಮೊಹಮದ್ ಶಮಿ ಪತ್ನಿಯಿಂದ ಪೊಲೀಸರ ವಿರುದ್ಧವೇ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts