More

    ಬಿಸಿಯೂಟದಿಂದ ಮಕ್ಕಳ ದಾಖಲಾತಿ ಹೆಚ್ಚಳ

    ಚಳ್ಳಕೆರೆ: ಅಕ್ಷರ ದಾಸೋಹ ಯೋಜನೆಯಿಂದ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳ ಮತ್ತು ಶಿಕ್ಷಣದ ಪ್ರಗತಿಗೆ ಅನುಕೂಲವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕು ಅಕ್ಷರ ದಾಸೋಹ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಭಾನುವಾರ ತಾಲೂಕಿನ ಅಡುಗೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಶಾಲಾ ಸಮಿತಿ ಅಧ್ಯಕ್ಷರು, ಮುಖ್ಯಶಿಕ್ಷಕರ ಸಮನ್ವಯತೆಯೊಂದಿಗೆ ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಕೆಲ ಗ್ರಾಮಗಳಲ್ಲಿ ಶಾಲಾ ಸಮಿತಿ ಮತ್ತು ಶಿಕ್ಷಕರ ನಡುವಿನ ಗುಂಪುಗಾರಿಕೆಯಿಂದ ಅಡುಗೆ ಸಿಬ್ಬಂದಿ ಸಲ್ಲದ ಸಮಸ್ಯೆ ಎದುರಿಸುವಂತಾಗಿದೆ. ತಮ್ಮನ್ನು ಸೇವೆಯಿಂದ ತೆಗೆದು ಹಾಕುವ ಅಧಿಕಾರ ಶಾಲಾ ಸಮಿತಿ ಅಧ್ಯಕ್ಷ, ಮುಖ್ಯಶಿಕ್ಷಕರಿಗೆ ಇರುವುದಿಲ್ಲ. ತಾವು ಯಾರಿಗೂ ಭಯ ಪಡೆದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

    ಬಿಇಒ ಸಿ.ಎಸ್.ವೆಂಕಟೇಶ್ ಮಾತನಾಡಿ, ಅಕ್ಷರ ದಾಸೋಹ ಯೋಜನೆ ತಾಲೂಕಿನ 4 ಸಾವಿರ ಮಕ್ಕಳಿಗೆ ಇದು ಆಧಾರವಾಗಿದೆ. ಅಡುಗೆ ಸಿಬ್ಬಂದಿ ತಾಯಂದಿರ ಸ್ಥಾನದಲ್ಲಿದ್ದು, ದಾಸೋಹ ಸೇವೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ನಿರ್ದೇಶನದಂತೆ ಮಕ್ಕಳ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದರು.

    ಆರೋಗ್ಯ ಸಹಾಯಕ ಎಸ್.ಬಿ.ತಿಪ್ಪೇಸ್ವಾಮಿ, ಬಿಸಿಯೂಟ ತಯಾರಕರ ಸಂಘಟನೆಯ ಸಿ.ವೈ.ಶಿವರುದ್ರಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿದರು.

    ನಗರಸಭೆ ಸದಸ್ಯರಾದ ಸುಜಾತಾ, ಬಿ.ಟಿ.ರಮೇಶಗೌಡ, ಮುಖಂಡರಾದ ಎಚ್.ಎಸ್.ಸೈಯದ್, ಆರ್.ಪ್ರಸನ್ನಕುಮಾರ್, ಬೋರಣ್ಣ, ಪ್ರಹ್ಲಾದ್, ಮುಖ್ಯಶಿಕ್ಷಕಿ ಡಿ.ಆರ್.ಪ್ರಮೀಳಾ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ಶಫೀವುಲ್ಲಾ ಮತ್ತಿತರರಿದ್ದರು.

    ಶಿಕ್ಷಣ ಸಚಿವರು ಅಂತಃಕರಣ ವ್ಯಕ್ತಿ: ಘೋಷಣೆ ಆಗಲಿರುವ ರಾಜ್ಯ ಬಜೆಟ್‌ನಲ್ಲಿ ಅಡುಗೆ ಸಿಬ್ಬಂದಿ ವೇತನ ಹೆಚ್ಚಿಸುವ ಭರವಸೆ ಇದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್, ಅಂತಃಕರಣ ಉಳ್ಳವರು. ರಾಜ್ಯಾದ್ಯಂತ ಪ್ರವಾಸ ಮಾಡಿ ಶಾಲಾ ಮಕ್ಕಳು, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಸಮಸ್ಯೆ ಆಲಿಸಿದ್ದಾರೆ. ಎಲ್ಲರ ತೊಂದರೆಗೂ ನ್ಯಾಯ ಕೊಡುವ ಚಿಂತನೆ ಅವರದ್ದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ಅಡುಗೆ ಸಿಬ್ಬಂದಿಗೆ ಸಮವಸ್ತ್ರ: ವಾರ್ಷಿಕವಾಗಿ ಶಾಸಕರ ವಿವೇಚನಾ ಅಭಿವೃದ್ಧಿ ಕಾರ್ಯಗಳಿಗೆ 2 ಕೋಟಿ ರೂ. ಅನುದಾನ ನೀಡುವ ವ್ಯವಸ್ಥೆ ಇದೆ. ತಾಲೂಕಿನ 451 ಶಾಲೆಯ 1051 ಅಡುಗೆ ಸಿಬ್ಬಂದಿಗೆ ತಲಾ 500 ರೂ. ನಂತೆ ಸಮವಸ್ತ್ರ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ. ಒಪ್ಪಿಗೆ ಸಿಕ್ಕಲ್ಲಿ ಪ್ರತಿಯೊಬ್ಬರಿಗೂ ಸಾವಿರದಂತೆ 2 ಜತೆ ಸಮವಸ್ತ್ರ ವಿತರಣೆಗೆ ಮಾಡಲಾಗುವುದು ಎಂದು ರಘುಮೂರ್ತಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts