More

    ಸರ್ಕಾರಿ ಶಾಲೆ ಉಳಿವಿಗೆ ಸಂಕಲ್ಪ ಬೇಕು

    ಚಳ್ಳಕೆರೆ: ಬಯಲುಸೀಮೆಯ ಜನಜೀವನದ ಸಂಸ್ಕೃತಿ ವಿಭಿನ್ನವಾಗಿದೆ. ಇಲ್ಲಿನ ಬುಡಕಟ್ಟು ಆಚರಣೆಗಳ ಅನುಭವ ಬದುಕಿನ ಮೌಲ್ಯತೆಯನ್ನು ಕಲಿಸುತ್ತದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.

    ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಭಾನುವಾರ ಸಿಜಿಕೆ ವೇದಿಕೆಯಲ್ಲಿ ಆಯೋಜಿಸಿದ್ದ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

    ಭೌಗೋಳಿಕತೆ ನೆಲೆಯಲ್ಲಿನ ಅಸಮಾನತೆ, ಅವಧೂತ ಪರಂಪರೆ, ಜಾನಪದ ಅನುಭವ, ಸಾಹಿತ್ಯ ಸಂಸ್ಕೃತಿಯ ವೈವಿದ್ಯತೆ, ರಂಗಭೂಮಿ ಕಲೆ, ರಾಜಕೀಯ ತೊಳಲಾಟ ಎಲ್ಲವೂ ವಿಭಿನ್ನ ಮತ್ತು ವೈಶಿಷ್ಟ್ಯತೆಯ ಕುರುಹು ಆಗಿದೆ ಎಂದರು.

    ಶತಮಾನ ಕಂಡ ಶಾಲೆಗಳು ತಾಲೂಕಿನಲ್ಲಿ 11 ಇವೆ. ಇಂತಹ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಂಡಂತೆ ಶಾಸಕರು ಇನ್ನಷ್ಟು ಇಚ್ಛಾಶಕ್ತಿ ತೋರಿಸಬೇಕು. ನಮ್ಮೂರ ಶಾಲೆ ನಮ್ಮೂರಿನ ಮಕ್ಕಳಿಗೆ ಎನ್ನುವ ಭಾವನೆ ಪಾಲಕರು ಪ್ರದರ್ಶಿಸಬೇಕು. ಈ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

    ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗುತ್ತಿವೆ. ಶೈಕ್ಷಣಿಕ ಮತ್ತು ಸಾಮಾಜಿಕ ಭದ್ರತೆಗಾಗಿ 371ಜೆ ಕಾಯಿದೆಗೆ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕನ್ನು ಸೇರಿಸುವ ಕೆಲಸ ಆಗಬೇಕು. ಪರಶುರಾಂಪುರ ಹೋಬಳಿಗೆ ತಾಲೂಕು ಸ್ಥಾನಮಾನ ಸಿಗಬೇಕು ಎಂದು ಒತ್ತಾಯಿಸಿದರು.

    ರಾಣಿಕೆರೆ ನಾಲೆಗಳ ತಳಪಾಯ ವಿಸ್ತರಣೆ ಮತ್ತು ಅಭಿವೃದ್ಧಿ ಆಗಬೇಕು. ಅಪಾಯದಂತಹ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಭೂಮಿ ನೀಡಿರುವುದಕ್ಕಾದರೂ, ಸ್ಥಳೀಯರಿಗೆ ಉದ್ಯೋಗ ಮತ್ತು ಮೂಲ ಸೌಕರ್ಯಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಮಟ್ಟದಲ್ಲಿ ಶಾಸಕರು ಒತ್ತಡ ತರಬೇಕು ಎಂದು ಮನವಿ ಮಾಡಿದರು.

    ಕಸವನಿಗೊಂಡನಹಳ್ಳಿಯ ಕೋಲಾಟದ ನರಸಜ್ಜ ಜನಪದ ಹಾಡುಗಳನ್ನು ಹೇಳಿ ರಂಜಿಸಿದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕಾಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಬಿ.ತಿಪ್ಪಣ್ಣ ಮರಿಕುಂಟೆ, ಎಚ್.ರಾಮಚಂದ್ರಪ್ಪ, ಡಾ.ಮೀರಸಾಬಿಹಳ್ಳಿ ಶಿವಣ್ಣ, ಡಾ.ಎಂ.ಮಂಜಣ್ಣ, ತಹಸೀಲ್ದಾರ್ ರೆಹನ್ ಪಾಷಾ, ಇಒ ಬಿ.ಕೆ.ಹೊನ್ನಯ್ಯ, ರೈತನಾಯಕ ಸೋಮಗುದ್ದು ರಂಗಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ನಗರಸಭಾ ಅಧ್ಯಕ್ಷೆ ಸುಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯ ಬಿ.ಟಿ.ರಮೇಶ್‌ಗೌಡ, ಟಿ.ಜೆ.ತಿಪ್ಪೇಸ್ವಾಮಿ, ಪಿ.ತಿಪ್ಪೇಸ್ವಾಮಿ, ಟಿ.ಜಗದೀಶ್, ಬಿ.ಎಂ.ತಿಪ್ಪೇರುದ್ರಸ್ವಾಮಿ, ಡಾ.ಕೆ.ಚಿತ್ತಯ್ಯ, ಡಿ.ದಯಾನಂದ, ಆರ್.ಎ.ದಯಾನಂದ ಮೂರ್ತಿ, ಮಲ್ಲೇಶಿ ಇದ್ದರು.

    ಸಮ್ಮೇಳನದ ನಿರ್ಣಯಗಳ ಜಾರಿಗೆ ಬದ್ಧ
    ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಯಲ್ಲಿ ಶ್ರೀಮಂತವಾಗಿರುವ ನೆಲದಲ್ಲಿ ಕನ್ನಡ ಭವನ ಸ್ಥಾಪನೆ ಮತ್ತು ಶತಮಾನ ಕಂಡ ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಟಿ.ರಘಮೂರ್ತಿ ಹೇಳಿದರು. 3ನೇ ಸಮ್ಮೇಳನದ ಬೇಡಿಕೆಗಳಂತೆ ಬಸ್ ನಿಲ್ದಾಣ, ವೇದಾವತಿಗೆ ಚೆಕ್‌ಡ್ಯಾಂ ನಿರ್ಮಾಣ ಮತ್ತು ನೀರು ಹರಿಸುವ ಕೆಲಸ ಮಾಡಲಾಗಿದೆ. ಅದೇ ರೀತಿ ನಾಲ್ಕನೇ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸುವ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

    ಅಧ್ಯಕ್ಷರ ನಡೆಗೆ ಖಂಡನೆ
    ಸಾಹಿತ್ಯ ಪರಿಷತ್ ಸದಸ್ಯತ್ವದಿಂದ ನಿರ್ಮಲಾ ಎಲಿಗಾರ ಅವರನ್ನು ವಜಾಗೊಳಿಸಿರುವ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರ ನಿರ್ಧಾರವನ್ನು ಸಮ್ಮೇಳನಾಧ್ಯಕ್ಷ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ.ಸಿ.ಶಿವಲಿಂಗಪ್ಪ, ಕತೆಗಾರ ಮೋದೂರುತೇಜ ಇತರರು ತಮ್ಮ ಭಾಷಣದಲ್ಲಿ ಖಂಡಿಸಿದರು.

    ಅದ್ದೂರಿ ಮೆರವಣಿಗೆ
    ಚಳ್ಳಕೆರೆಮ್ಮ ದೇವಸ್ಥಾನದಿಂದ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರನ್ನು ವಿವಿಧ ಕಲಾ ತಂಡಗಳೊಂದಿಗೆ ನೆಹರು ವೃತ್ತದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

    ಮಹಿಳಾ ಸ್ವತಂತ್ರಕ್ಕೆ ಕಂಟಕ
    ಮಹಿಳೆ ಒಬ್ಬಂಟಿಯಾಗಿ ಸಿನಿಮಾ ವೀಕ್ಷಣೆ, ಹೋಟೆಲ್ ಊಟಕ್ಕೆ ಸಂತೋಷವಾಗಿ ಹೋಗಿ ಬರಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಸಾಹಿತಿ ಶೈಲಜಾ ಕಳವಳ ವ್ಯಕ್ತಪಡಿಸಿದರು.
    ಮಹಿಳೆ ಮತ್ತು ಸಾಹಿತ್ಯ ಕುರಿತ ವಿಷಯ ಮಂಡನೆಯಲ್ಲಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಅಭಿವ್ಯಕ್ತಿಗೆ ಅವಕಾಶ ಸಿಗುತ್ತಿಲ್ಲ ಎಂದು ಬೇಸರಿಸಿದರು.
    ಸಾಹಿತ್ಯ ಮತ್ತು ಬುಡಕಟ್ಟು ಪರಿಸರ ಕುರಿತು ಮಾತನಾಡಿದ ಡಾ.ಎಂ.ಎಸ್.ಮುತ್ತಯ್ಯ ಮಾತನಾಡಿ, ನೆಲಮೂಲದ ನೋವನ್ನು ಸಾಹಿತ್ಯವಾಗಿಸಬೇಕಿದೆ. ಬದುಕು ಕಟ್ಟಿಕೊಳ್ಳಲು ಭೌಗೋಳಿಕವಾಗಿ ನಡೆಸಬೇಕಾಗಿರುವ ಸಂಘರ್ಷಗಳ ಮಧ್ಯೆ ಅನುಭವವೇ ಒಂದು ಬರಹದ ನೆಲೆಯಾಗಿ ಕಾಣಬೇಕಾಗಿದೆ ಎಂದು ಹೇಳಿದರು.
    ಕತೆಗಾರ ಮೋದೂರು ತೇಜ ಮಾತನಾಡಿ, ಮೃಗಿತ್ವ ಮನುಷ್ಯನನ್ನು ಬದಲಾಯಿಸುವಂತ ಸೃಜನಶೀಲ ಸಾಹಿತ್ಯ ಅಗತ್ಯವಿದೆ. ಪ್ರಸ್ತುತ ಸಮಾಜದ ತಲ್ಲಣಗಳಿಗೆ ಪ್ರತಿಕ್ರಿಯಿಸುವ ಗುಣ ಕವಿಳಿಗೆ ಇರಬೇಕು ಎಂದು ಹೇಳಿದರು.

    ಕುದಾಪುರ ಮತ್ತು ದೊಡ್ಡ ಉಳ್ಳಾರ್ತಿ ಭಾಗದಲ್ಲಿ 11,800 ಎಕರೆ ಭೂಮಿಯನ್ನು ವಿಜ್ಞಾನ ಸಂಸ್ಥೆಗಳಿಗೆ ನೀಡುವ ಅಗತ್ಯ ಇರಲಿಲ್ಲ. ವಿಶ್ವಮಟ್ಟದಲ್ಲಿ ತಾಲೂಕಿನ ಹಿರಿಮೆ ಬೆಳೆದಿದೆಯಾದರೂ, ಸಂಸ್ಥೆಗಳ ಸ್ಥಾಪನೆಯಿಂದ ಸ್ಥಳೀಯರಿಗೆ ಯಾವುದೇ ಅನುಕೂಲ ಆಗಿಲ್ಲ.
    ಟಿ.ರಘುಮೂರ್ತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts