More

    ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ

    ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ ಸೂಚನೆ

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಜಿಲ್ಲೆಯ ನಾಲ್ಕು ತಾಲೂಕುಗಳ ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ ಶೀಘ್ರ ಸ್ಪಂದಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮೇಲ್ವಿಚಾರಣೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ಸಂಬಂಧ ಸೋಮವಾರ ದೇವನಹಳ್ಳಿ ಜಿಲ್ಲಾಡಳಿಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಪರ್ಯಾಯವಾಗಿ ನೀರು ಪೂರೈಸಲು ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲು ಮೊದಲ ಆದ್ಯತೆ ನೀಡಿ. ಅವಶ್ಯವಿದ್ದಲ್ಲಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕುಡಿಯುವ ನೀರು ಸಮಸ್ಯೆಗೆ ತಕ್ಷಣ ಸ್ಪಂದಿಸುವ ಸಂಬಂಧ ಈಗಾಗಲೇ ಸಹಾಯವಾಣಿ ತೆರೆಯಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದ್ದು ಸಿಬ್ಬಂದಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಲಿದ್ದು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
    ತ್ವರಿತವಾಗಿ ಕ್ರಮಕೈಗೊಳ್ಳಬೇಕು: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ನೋಡುವುದಾದರೆ ನೆಲಮಂಗಲದ ನಗರ ವ್ಯಾಪ್ತಿಯಲ್ಲಿ ಕೆಲವು ಭಾಗ ಹಾಗೂ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ, ಚನ್ನರಾಯಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತು ಬೂದಿಗೆರೆಯ ಇಂದ್ರಹಳ್ಳಿ ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದ ಸಮಸ್ಯೆ ಕಂಡು ಬಂದಿದ್ದು ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬರಗಾಲದಿಂದ ಕೊಳವೆಬಾವಿಗಳಲ್ಲಿ 10 ಅಡಿಯಷ್ಟು ನೀರು ಇಳಿಕೆಯಾಗಿದೆ. ಯಾವುದೇ ನಗರ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಕಂಡುಬಂದಲ್ಲಿ ತ್ವರಿತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾಹಿತಿ ನೀಡಿದರು.
    ಮೇವು ಸಂಗ್ರಹಿಸಿಡಿ: ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದುವರೆಗೂ ಕಂಡುಬಂದಿಲ್ಲ, ಆದರೂ ಮುಂಜಾಗ್ರತ ಕ್ರಮವಾಗಿ ಗೋಶಾಲೆಗಳಲ್ಲಿ ಹೆಚ್ಚಿನ ಮೇವು ಸಂಗ್ರಹಿಸಿಡಿಲು ಅಧಿಕಾರಿಗಳಿಗೆ ಸೂಚಿಸಿದರು. ಕಡ್ಡಾಯವಾಗಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳನ್ನು ನಿತ್ಯವೂ ಸ್ವಚ್ಛಗೊಳಿಸಿ, ನೀರಿನ ವ್ಯವಸ್ಥೆಯನ್ನು ಒದಗಿಸುವ ಕೆಲಸ ಮಾಡಬೇಕು. ಬರ ಪರಿಸ್ಥಿತಿಯನ್ನು ಸಮಗ್ರವಾಗಿ ನಿರ್ವಹಿಸಲು ತಾಲ್ಲೂಕುವಾರು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ವಾರಕ್ಕೊಮ್ಮೆ ತಾಲ್ಲೂಕುಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಹೇಳಿದರು.
    ಬಿಸಿಗಾಳಿಯಿಂದ ರಕ್ಷಣೆ ಪಡೆಯಿರಿ:- ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಗಾಳಿ ಆತಂಕವಿದ್ದು ಬಿಸಿಲಿನಿಂದ ರಕ್ಷಣೆ ಪಡೆಯುವುದು ಮುಖ್ಯ. ಜನರು ಬಿಸಿಲಿನ ಸಮಯದಲ್ಲಿ ಮನೆಗಳಿಂದ ಅತೀ ಅವಶ್ಯವಿದ್ದಾಗ ಮಾತ್ರ ಹೊರ ಬನ್ನಿ, ಅನಗತ್ಯ ಬಿಸಿಲಿನಲ್ಲಿ ಓಡಾಡುವುದು ನಿಲ್ಲಿಸಬೇಕು. ಮನೆಯಿಂದ ಹೊರಗಡೆ ಓಡಾಡುವ ವೇಳೆ ತಲೆ ಭಾಗಕ್ಕೆ ಟೋಪಿ ಇಲ್ಲವೇ ಬಟ್ಟೆಯನ್ನು ಬಳಸಿಕೊಂಡು ಬಿಸಿಗಾಳಿಯಿಂದ ರಕ್ಷಣೆ ಪಡೆಯಿರಿ ಎಂದು ಸಲಹೆ ನೀಡಿದರು.
    ಗುಡುಗು ಸಿಡಿಲಿನ ಅಪಾಯದಿಂದ ರಕ್ಷಣೆ: ಗುಡುಗು ಸಿಡಿಲಿನ ವೇಳೆಯಲ್ಲಿ ಜನರು ಹಾಗೂ ಜಾನುವಾರು ಸಂರಕ್ಷಿಸಿಕೊಳ್ಳಲು ಹೊಲ-ಗದ್ದೆಗಳಲ್ಲಿ ರೈತರು ಕೆಲಸ ಮಾಡುವಾಗ ಗಿಡ-ಮರಗಳ ಆಶ್ರಯ ಪಡೆಯುವುದನ್ನು ಮಾಡಬಾರದು. ಅಕಾಲಿಕ ಮಳೆ ಸಂದರ್ಭ ಕಂಡುಬಂದಲ್ಲಿ ಮನೆಗಳಿಗೆ ತೆರಳಿ. ಬಿಸಿಗಾಳಿ, ಗುಡುಗು ಸಿಡಿಲು ಬಗ್ಗೆ ಮುನ್ನೆಚ್ಚರಿಕೆ ಪಾಲಿಸಲು ಸ್ಥಳೀಯವಾಗಿ ಜನರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts