More

    21ರಿಂದ ಮನೆ ಮನೆಗೆ ‘ವೋಟರ್ ಗೈಡ್’ ವಿತರಣೆ; ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಡಿಸಿ ರಘುನಂದನ ಮೂರ್ತಿ ಮಾಹಿತಿ

    ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.21ರಿಂದ ಬೂತ್ ಮಟ್ಟದ ಅಧಿಕಾರಿಗಳ (ಬಿ.ಎಲ್.ಒ) ಮೂಲಕ ಮನೆ ಮನೆಗೆ ವೋಟರ್ ಸ್ಲಿಪ್ ಹಾಗೂ ಮನೆಗೊಂದು ವೋಟರ್ ಗೈಡ್ ವಿತರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದಿಂದ ಅಧಿಕೃತವಾಗಿ ನೇಮಕಗೊಂಡ ಬೂತ್ ಮಟ್ಟದ ಏಜೆಂಟರು ಭಾಗವಹಿಸಿ ವಿತರಣಾ ಪ್ರಕ್ರಿಯೆಯನ್ನು ವಿಕ್ಷೀಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಮಾಹಿತಿ ಚೀಟಿ ವಿತರಣೆ, ಎಲೆಕ್ಸನ್ ಬೂತ್ ನಿರ್ಮಾಣ, ಪೋಲಿಂಗ್ ಏಜೆಂಟ್‌ಗಳ ನೇಮಕ ಕುರಿತು ಹಾಗೂ ಡಮ್ಮಿ ಮತಪತ್ರ ಮತ್ತು ಮತಯಂತ್ರಗಳ ಕುರಿತು, ವೋಟರ್ ಸ್ಲಿಪ್‌ಗಳ ವಿತರಣೆ ಕುರಿತು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಚುನಾವಣಾ ಆಯೋಗದ ಮಾರ್ಗಸೂಚಿಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
    ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ವೋಟರ್ ಸ್ಲಿಪ್‌ಗಳನ್ನು ವಿತರಿಸಿ ಸ್ವೀಕೃತಿ ಪಡೆಯುತ್ತಾರೆ. ಮರಣ ಹೊಂದಿವರು, ಸ್ಥಳಾಂತರಗೊಂಡವರು ಹಾಗೂ ಬಿ.ಎಲ್.ಒಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ಇರದೇ ಇದ್ದವರ ವೋಟರ್ ಸ್ಲಿಪ್‌ಗಳನ್ನು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರಗಳಿಗೆ ಹಿಂದಿರುಗಿಸುತ್ತಾರೆ. ವೋಟರ್ ಸ್ಲಿಪ್‌ಗಳನ್ನು ಯಾವುದೇ ಕಾರಣಕ್ಕೂ ಬಲ್ಕ್ ಆಗಿ (ಸಗಟಾಗಿ) ಯಾರೊಬ್ಬರ ಕೈಯಲ್ಲಿಯೂ ನೀಡುವಂತಿಲ್ಲ. ಯಾವುದೇ ಒಂದು ಸ್ಥಳದಲ್ಲಿ ಕುಳಿತು ವಿತರಿಸುವಂತಿಲ್ಲ. ಕಡ್ಡಾಯವಾಗಿ ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್ ವಿತರಿಸಬೇಕು. ಅಧಿಕೃತವಾಗಿ ನೇಮಕಗೊಂಡ ಏಜೆಂಟರು ಮಾತ್ರ ವೋಟರ್ ಸ್ಲಿಪ್ ವಿತರಣೆಯಲ್ಲಿ ಭಾಗವಹಿಸಬಹುದು ಎಂದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾದರಿ ನೀತಿಸಂಹಿತೆ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ, ಸಹಾಯಕ ಚುನಾವಣಾಧಿಕಾರಿಗಳಾದ ಎಚ್.ಬಿ.ಚನ್ನಪ್ಪ, ಮಹ್ಮದ್ ಖಿಜರ್, ರೇಷ್ಮಾ ಕೌಸರ್, ಎನ್.ಜೆ.ನಾಗರಾಜ, ವೋಟರ್ ಸ್ಲಿಪ್ ವಿತರಣಾ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
    ಡಮ್ಮಿ ಬ್ಯಾಲಟ್ ಯಂತ್ರ :
    ಮತದಾರರಿಗೆ ಜಾಗೃತಿ ಮೂಡಿಸಲು ಡಮ್ಮಿ ಬ್ಯಾಲಟ್ ಯುನಿಟ್ ತಯಾರಿಕೆಗೆ ಅಭ್ಯರ್ಥಿಗಳಿಗೆ ಅವಕಾಶವಿದೆ. ಕಟ್ಟಿಗೆ, ಪ್ಲಾಸ್ಟಿಕ್, ಪ್ಲೈವುಡ್‌ನಿಂದ ತಯಾರಿಸಿರುವ ಬ್ಯಾಲೆಟಿಂಗ್ ಯುನಿಟ್ ಬಳಸಿಕೊಳ್ಳಬಹುದು. ಹಳದಿ, ಗ್ರೇ ಮತ್ತು ಕಂದು ಬಣ್ಣದಲ್ಲಿ ಪೇಂಟ್ ಮಾಡಿರುವ ಯುನಿಟ್‌ನಲ್ಲಿ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆ, ಬ್ಯಾಟರಿ ಹೊಂದಿರಬಹುದು ಮತ್ತು ಬಟನ್ ಒತ್ತಿದಾಗ ಲೈಟ್ ಹೊರಹೊಮ್ಮುವುದನ್ನು ತೋರಿಸುವ ಅವಕಾಶವಿದೆ. ಆದರೆ, ಡಮ್ಮಿ ಬ್ಯಾಲಟ್ ಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಹಾಗೂ ಚಿಹ್ನೆಗಳನ್ನು ಮುದ್ರಿಸುವಂತಿಲ್ಲ ಎಂದರು.
    ವೋಟರ್ ಸ್ಲಿಪ್:
    ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನಧಿಕೃತ ಮತದಾರರ ಚೀಟಿಗಳನ್ನು ವಿತರಿಸಬಹುದು. ಆದರೆ, ವೋಟರ್ ಸ್ಲಿಪ್‌ಗಳು ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ಹೆಸರು ಮತ್ತು ಕ್ರಮಸಂಖ್ಯೆ, ಮತದಾರರ ಭಾಗ ಸಂಖ್ಯೆ, ಮತಗಟ್ಟೆಯ ಕ್ರಮಸಂಖ್ಯೆ ಮಾತ್ರ ಇರಬೇಕು ಹಾಗೂ ಕೇವಲ ಬಿಳಿ ಬಣ್ಣದ್ದಾಗಿರಬೇಕು.
    ಚುನಾವಣಾ ಬೂತ್ ಸ್ಥಾಪನೆ:
    ಮತದಾನದ ದಿನ ಮತದಾನಕ್ಕೆ ಗುರುತಿಸಲಾದ ಮತಗಟ್ಟೆಯಿಂದ 200 ಮೀಟರ್‌ನ ಹೊರಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಬೂತ್‌ನ್ನು ಸ್ಥಾಪಿಸಬಹುದು. 10/10 ಫೀಟ್ ಅಳತೆ ಮೀರದ ಛತ್ರಿ ಅಥವಾ ಸಣ್ಣ ಟೆಂಟ್ ಬಳಸಿಕೊಳ್ಳಬಹುದು. ಬೂತ್‌ನಲ್ಲಿ ಕೇವಲ 4/8 ಅಳತೆಯ ಒಂದು ಪಕ್ಷದ ಧ್ವಜ ಅಥವಾ ಬ್ಯಾನರ್‌ಗೆ ಅವಕಾಶವಿದೆ. ಬ್ಯಾನರ್‌ನಲ್ಲಿ ಪಕ್ಷದ ಚಿಹ್ನೆ ಮತ್ತು ಭಾವಚಿತ್ರಕ್ಕೆ ಅವಕಾಶವಿದೆ ಎಂದು ಡಿಸಿ ತಿಳಿಸಿದರು.
    ಪೋಲಿಂಗ್ ಏಜೆಂಟರ ನೇಮಕಾತಿ:
    ಪೋಲಿಂಗ್ ಏಜೆಂಟರು ಅದೇ ಮತಗಟ್ಟೆಯ ಅಥವಾ ಪಕ್ಕದ ಮತಗಟ್ಟೆಯ ಅಥವಾ ಅದೇ ವಿಧಾನಸಭಾ ಕ್ಷೇತ್ರದ ಮತದಾರನಾಗಿರಬೇಕು. ಮತದಾರರ ಭಾವಚಿತ್ರದ ಗುರುತಿನ ಚೀಟಿ (ಎಪಿಕ್)ಹೊಂದಿರಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯ, ನಗರಸಭೆ ಸದಸ್ಯರುಗಳು ಪೋಲಿಂಗ್ ಏಜೆಂಟರಾಗಲು ನಿರ್ಬಂಧವಿಲ್ಲ. ಆದರೆ, ಹಾಲಿ ಸಚಿವರು, ಹಾಲಿ ಶಾಸಕರು, ಮಹಾನಗರ ಪಾಲಿಕೆಗಳ ಮೇಯರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ನಿಗಮ ಮಂಡಳಿಯ ಅಧ್ಯಕ್ಷರು, ಸರ್ಕಾರಿ/ಅನುದಾನಿತ ನೌಕರರು, ಅರೆಕಾಲಿಕ ನೌಕರರು, ಅಂಗನವಾಡಿ ಕಾರ್ಯಕರ್ತರು ಹಾಗೂ ರೇಷನ್ ಅಂಗಡಿ ಮಾಲೀಕರು, ಭದ್ರತಾ ಸಿಬ್ಬಂದಿ ಹೊಂದಿದ ಯಾವುದೇ ವ್ಯಕ್ತಿ ಪೋಲಿಂಗ್ ಏಜೆಂಟರಾಗುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts