More

    ಕೃಷಿಯತ್ತ ಪೇಟೆ ಜನರ ಚಿತ್ತ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಕರೊನಾ ವೈರಸ್ ಪರಿಣಾಮ ನಗರ, ಪಟ್ಟಣ ಬಿಟ್ಟು ಹಳ್ಳಿಯತ್ತ ಮುಖ ಮಾಡಿರುವ ಪೇಟೆಯಲ್ಲಿ ಸೆಟ್ಲ್ ಆಗಿದ್ದ ಹೆಚ್ಚಿನವರು ಕೃಷಿಯತ್ತ ಚಿತ್ತ ಹರಿಸಿದ್ದಾರೆ.

    ಅಲ್ಪ ಸ್ವಲ್ಪ ಜಮೀನು, ಟ್ರಾೃಕ್ಟರ್ ಮಾರಿದವರು ಹಲವರಾದರೆ, ಕೆಲವರು ಇರುವ ಆಸ್ತಿಯನ್ನು ಬೀಳು ಬಿಟ್ಟು ಉದ್ಯೋಗ ಅರಸಿ ನಗರದತ್ತ ಮುಖ ಮಾಡಿದ್ದವರೇ ಹೆಚ್ಚು. ಈಗ ಕರೊನಾ ಕಾರಣದಿಂದ ಬೆಚ್ಚಿಬಿದ್ದಿರುವ ಗ್ರಾಮೀಣರು ಏನೇ ಆದರೂ ನಮ್ಮೂರು ನಮಗೆ ಸವಿಬೆಲ್ಲವೆಂದು ಊರಿಗೆ ಮರಳಿದ್ದಾರೆ. ಈಗಾಗಲೇ ಜಮೀನಿದ್ದವರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಭೂಮಿ ಇಲ್ಲದವರು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ.

    ಸದ್ಯ ಸಕಾಲಕ್ಕೆ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಮೀನುಗಳಲ್ಲಿ ಬೆಳೆದಿರುವ ಗಿಡ-ಗಂಟೆ ತೆರವುಗೊಳಿಸುವ ಮತ್ತು ಬಿತ್ತನೆಗೆ ಭೂತಾಯಿಯನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಹೆಚ್ಚಿನವರು ತೊಡಗಿಕೊಂಡಿದ್ದಾರೆ. ಇದರಿಂದ ಈ ಸಲದ ಮುಂಗಾರು ಬಿತ್ತನೆ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ.

    ತಾಲೂಕಿನಲ್ಲಿ ಮೇ ತಿಂಗಳಿಂದ ಬಿತ್ತನೆ ಆರಂಭವಾಗುವ ವಾಡಿಕೆ ಇದೆ. ಕಳೆದ ವರ್ಷ 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಈ ವರ್ಷ ಸಕಾಲಕ್ಕೆ ಮಳೆ ಆರಂಭಗೊಂಡಿರುವ ಕಾರಣ ಕೃಷಿ ಚಟುವಟಿಕೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. 1 ಲಕ್ಷ ಹೆಕ್ಟೇರ್ ಬಿತ್ತನೆಗೆ ಗುರಿ ಇಟ್ಟುಕೊಳ್ಳಲಾಗಿದೆ.

    ಶೇಂಗಾ ಬಿತ್ತನೆ ಬೀಜ ಖರೀದಿಗಾಗಿ ಕೃಷಿ ಇಲಾಖೆ ತಯಾರಿ ನಡೆಸಿದೆ. ಕೆಒಎಫ್ ನಿಗಮ ನೀಡುವ ಶೇಂಗಾವನ್ನು ಪರಿಶೀಲನೆ ಮಾಡಿಕೊಂಡು ನಗರ, ಪರಶುರಾಂಪುರ, ದೊಡ್ಡ ಉಳ್ಳಾರ್ತಿ, ತಳಕು, ನಾಯಕನಹಟ್ಟಿ ಭಾಗದಲ್ಲಿ 2 ಸಾವಿರ ಕ್ವಿಂಟಾಲ್ ದಾಸ್ತಾನು ಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ.

    ಚಳ್ಳಕೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಹೇಳಿಕೆ: ಒಂದು ವೇಳೆ ಲಾಕ್‌ಡೌನ್ ಕಾರಣ ಸಕಾಲಕ್ಕೆ ಬೀಜ, ಗೊಬ್ಬರ ವಿತರಣೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಕಳೆದ ವರ್ಷ ಬಿತ್ತನೆ ಬೀಜ ಉಳಿಸಿಕೊಂಡಿರುವ ರೈತರು ಅದನ್ನೇ ಸಕಾಲಕ್ಕೆ ಬಳಸಿಕೊಂಡು ಬಿತ್ತನೆ ಮಾಡಬೇಕು.

    ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿಕೆ: ಲಾಕ್‌ಡೌನ್ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಕೃಷಿ ವಲಯಕ್ಕೆ ಉತ್ತೇಜನ ಕೊಡಬೇಕಾಗಿದೆ. ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರಗಳ ವಿತರಣೆಗೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು. ಫರ್ಟಿಲೈಸರ್ ಅಂಗಡಿಗಳಲ್ಲಿ ಕಳಪೆ ಬೀಜ, ಗೊಬ್ಬರ ಮಾರದಂತೆ ಜಾಗ್ರತೆ ವಹಿಸಬೇಕು. ಲಾಕ್‌ಡೌನ್ ಸಂಕಷ್ಟದಲ್ಲಿರುವ ರೈತರಿಗೆ ಕಡಿಮೆ ದರದಲ್ಲಿ ಶೇಂಗಾ ವಿತರಣೆಗೆ ಸರ್ಕಾರ ಮುಂದಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts