More

    ಕೇಂದ್ರದ ವಿಕಸಿತ ಸಂದೇಶ, ಫ್ಯಾಕ್ಟ್ ಚೆಕ್​ಗೆ ತಡೆ; ಅನುಸರಣಾ ವರದಿ ಸಲ್ಲಿಕೆಗೂ ಆದೇಶ

    ನವದೆಹಲಿ: ಚುನಾವಣಾ ನೀತಿಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾರತೀಯ ಚುನಾವಣಾ ಆಯೋಗ ಬಿಜೆಪಿಯ ‘ವಿಕಸಿತ ಭಾರತ’ ಸಂದೇಶಕ್ಕೆ ತಡೆಯೊಡ್ಡಿದೆ. ‘ವಿಕಸಿತ ಭಾರತ’ ಹೆಸರಿನಲ್ಲಿ ವಾಟ್ಸ್​ಆಪ್ ಮೂಲಕ ಸಂದೇಶ ಕಳುಹಿಸುತ್ತಿರುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಆಯೋಗವು ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇಂಥ ಸಂದೇಶಗಳ ರವಾನೆ ಕುರಿತು ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಅನುಸರಣಾ ವರದಿಯನ್ನೂ ತಕ್ಷಣ ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೂ ನಿರ್ದೇಶನ ನೀಡಿದ್ದಾಗಿ ಆಯೋಗ ತಿಳಿಸಿದೆ.

    ಆಯೋಗದ ಈ ಸೂಚನೆಗೆ ಸಚಿವಾಲಯ ಪ್ರತಿಕ್ರಿಯಿಸಿದ್ದು, ಪ್ರಧಾನಮಂತ್ರಿಯ ಪತ್ರ ಇರುವ ಇಂಥ ಸಂದೇಶಗಳನ್ನು ಮಾ. 15ಕ್ಕೂ ಮೊದಲು ಕಳುಹಿಸಲಾಗಿದೆ. ಆದರೆ ತಾಂತ್ರಿಕ ಕಾರಣಕ್ಕೆ ಕೆಲವೊಂದು ತಡವಾಗಿ ತಲುಪಿರಬಹುದು ಎಂದು ಸಮಜಾಯಿಷಿ ನೀಡಿದೆ. ‘ವಿಕಸಿತ ಭಾರತ ಸಂಪರ್ಕ’ ಎಂಬ ವೆರಿಫೈಡ್ ವಾಟ್ಸ್ ಆಪ್ ಖಾತೆಯಿಂದ ಸರ್ಕಾರ ಸಾರ್ವಜನಿಕರಿಗೆ ಸಂದೇಶಗಳನ್ನು ರವಾನಿಸುತ್ತಿದೆ. ಸರ್ಕಾರದ ವಿವಿಧ ಯೋಜನೆ ಹಾಗೂ ನೀತಿಗಳ ಕುರಿತ ಮಾಹಿತಿಯನ್ನು ಈ ಮೂಲಕ ಪಸರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮಕೈಗೊಂಡಿದೆ. ಮಾ.16ರಂದು ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅಂದಿನಿಂದಲೇ ನೀತಿಸಂಹಿತೆ ಜಾರಿಗೆ ಬಂದಿದೆ.

    ‘ಸತ್ಯ ಶೋಧನೆ’ಗೂ ಬ್ರೇಕ್: ಸುಳ್ಳು ಸುದ್ದಿಗಳ ಸವಾಲು ಎದುರಿಸುವ ನಿಟ್ಟಿನಲ್ಲಿ ಪ್ರೆಸ್ ಇನ್​ಫಾಮೇಷನ್ ಬ್ಯೂರೋ (ಪಿಐಬಿ) ಅಧೀನದಲ್ಲಿರುವ ‘ಫ್ಯಾಕ್ಟ್ ಚೆಕ್’ ಘಟಕಕ್ಕೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆಯೊಡ್ಡಿದೆ. ಅಧಿಸೂಚನೆ ಪ್ರಕಟವಾದ ಮರುದಿನವೇ ಬೆಳವಣಿಗೆ ನಡೆದಿದೆ. ಈ ಮೂಲಕ ಕೇಂದ್ರ ಸರ್ಕಾರದ ನಡೆಗೆ ಸಮ್ಮತಿ ಸೂಚಿಸಿದ ಬಾಂಬೆ ಹೈಕೋರ್ಟ್ ಆದೇಶಕ್ಕೂ ಹಿನ್ನಡೆ ಆದಂತಾಗಿದೆ. ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠವು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಫ್ಯಾಕ್ಟ್ ಚೆಕ್ ಘಟಕಕ್ಕೆ ಸೂಚನೆ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸ್ಟಾ್ಯಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

    ಚುನಾವಣಾಧಿಕಾರಿಗಳ ನೇಮಕಕ್ಕೆ ಇಲ್ಲ ಅಡ್ಡಿ: ಇತ್ತೀಚೆಗಷ್ಟೇ ನಡೆದಿದ್ದ ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈಗ ತಡೆಯೊಡ್ಡಿದರೆ ಚುನಾವಣೆ ಸಂದರ್ಭ ಅವ್ಯವಸ್ಥೆ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ನೂತನವಾಗಿ ನೇಮಕವಾಗಿರುವ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್​ಬೀರ್ ಸಿಂಗ್ ಸಂಧು ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದೂ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿಂದಿದ್ದ ಇಬ್ಬರು ಚುನಾವಣಾ ಆಯುಕ್ತರ ಪೈಕಿ ಒಬ್ಬರ ನಿವೃತ್ತಿ ಹಾಗೂ ಇನ್ನೊಬ್ಬರು ಮಾ. 9ರಂದು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಹೊಸದಾಗಿ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಲಾಗಿತ್ತು. ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯೂ ಇರಬೇಕು ಎಂಬ ಹಿನ್ನೆಲೆಯಲ್ಲಿ ಈ ನೇಮಕಾತಿ ವಿರುದ್ಧ ತಕರಾರು ಎದುರಾಗಿತ್ತು. ಆದರೆ ಚುನಾವಣಾ ಆಯುಕ್ತರ ನೇಮಕವನ್ನು ಹೊಸ ನಿಯಮಗಳ ಅನುಸಾರ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts