More

    ಹೋರಾಟ ಹತ್ತಿಕ್ಕುವುದು ಸಂವಿಧಾನ ವಿರೋಧಿ ಕೃತ್ಯ

    ಸಾಗರ: ಪೆಟ್ರೊಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ವ್ಯವಸ್ಥಿತವಾಗಿ ಸರ್ಕಾರವನ್ನು ನಡೆಸದಿದ್ದರೆ ಅದನ್ನು ವಿರೋದಿಸುವುದು ಪ್ರಜಾತಂತ್ರದ ವ್ಯವಸ್ಥೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಆಶಯಗಳನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಟ್ಟ ಆಡಳಿತ ವ್ಯವಸ್ಥೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಜನರಿಗೆ ವಿಷ ಉಣಿಸುತ್ತಿದ್ದಾರೆ. ಇಂತಹ ಸಂವಿಧಾನ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಸರ್ಕಾರವನ್ನು ಕೆಳಗಿಳಿಸಲು ಹೋರಾಟ ಅನಿವಾರ್ಯ. ಪ್ರಧಾನಿ ಮೋದಿ ಅಚ್ಚೇ ದಿನ್, ಸಬ್​ಕಾ ಸಾತ್ ಸಬ್​ಕಾ ವಿಕಾಸ ಘೊಷಣೆ ಮಾಡುತ್ತಲೇ ಇದ್ದಾರೆ. ಆದರೆ ವಿಕಾಸ ಎಲ್ಲಿ ಆಗಿದೆ? ಯಾರಿಗೆ ಆಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

    ಬ್ರಿಟಿಷರು ಕೂಡ ರಸ್ತೆಗೆ ಮೊಳೆ ಹೊಡೆದು ಸ್ವಾತಂತ್ರ್ಯ ಹತ್ತಿಕ್ಕಿರಲಿಲ್ಲ. ಆದರೆ ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಮೊಳೆ ಹೊಡೆಯುತ್ತಾರೆಂದರೆ ಇದಕ್ಕಿಂತ ರೈತವಿರೋಧಿ ಸರ್ಕಾರ ಮತ್ತೊಂದಿಲ್ಲ. ಇಂತಹ ಸರ್ಕಾರಗಳಿಗೆ ಜನತಂತ್ರದ ಮೂಲಕ ಪಾಠ ಕಲಿಸಬೇಕು ಎಂದರು.

    ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸೈಕಲ್ ಜಾಥಾ, ಎತ್ತಿನಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಇರಿಸಿ ಬೆಲೆ ಏರಿಕೆ ವಿರುದ್ಧ ಧಿಕ್ಕಾರ ಕೂಗಲಾಯಿತು.

    ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಡಾ. ರಾಜನಂದಿನಿ ಕಾಗೋಡು, ಬಿ.ಆರ್.ಜಯಂತ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ನಗರ ಬ್ಲಾಕ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಪಂ ಸದಸ್ಯೆ ಅನಿತಾ ಕುಮಾರಿ, ಪ್ರಮುಖರಾದ ಎಲ್.ಟಿ.ತಿಮ್ಮಪ್ಪ ಹೆಗಡೆ, ಮಕ್ಬೂಲ್ ಅಹಮ್ಮದ್, ರಫೀಕ್ ಬಾಬಾಜಾನ್, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಅಶೋಕ್ ಬೇಳೂರು, ವೆಂಕಟೇಶ್ ಮೆಳವರಿಗೆ, ಪ್ರಶಾಂತ್, ಪ್ರವೀಣ ಬಣಕಾರ್, ಅಬ್ದುಲ್ ಹಮೀದ್, ಎನ್.ಲಲಿತಮ್ಮ, ಕೆ.ಹೊಳೆಯಪ್ಪ, ಜ್ಯೋತಿ ಕೋವಿ, ಪರಿಮಳಾ. ಚಂದ್ರಶೇಖರ ಗೂರಲಕೆರೆ, ಲಕ್ಷ್ಮಣ್ ಸಾಗರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts