More

    ಅಮೃತ ಭಾರತ ಸಾಕಾರಕ್ಕೆ ನಿರ್ಮಲ ಸೂತ್ರ

    ಪ್ರಗತಿಗೆ ಸಪ್ತಸೂತ್ರ | ಯುವ ಪೀಳಿಗೆಗೆ ಆದ್ಯತೆ | ಹಿರಿಯರಿಗೂ ಅವಕಾಶ | ರೈಲ್ವೆಗೆ ದಾಖಲೆ ವೆಚ್ಚ

    ಮೂಲಸೌಕರ್ಯಕ್ಕೆ ಉತ್ತೇಜನ | ವೇತನ ವರ್ಗಕ್ಕೆ ಕರ ಹಗುರ | ಮಹಿಳೆಯರಿಗೂ ಸಮ್ಮಾನ

    ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಮುನ್ನ ಇದು ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದರೂ ಜನಪ್ರಿಯ ಘೋಷಣೆಗಳಿಲ್ಲ, ಈ ವರ್ಷ ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಗಳಿಗೂ ಓಲೈಕೆಯಿಲ್ಲ, ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಹೊರತು ವಿಶೇಷಗಳಿಲ್ಲ…. ಈ ‘ಇಲ್ಲ’ಗಳ ನಡುವೆಯೂ ದೂರದೃಷ್ಟಿಯ ಸ್ಪರ್ಶವಿದೆ- ಇದು ಈ ಸಲದ ಕೇಂದ್ರ ಮುಂಗಡಪತ್ರದ ಬಗ್ಗೆ ತಜ್ಞರ ಅಭಿಮತ. ಅದಕ್ಕೆ ಪೂರಕ ಎಂಬಂತೆ, ಬಜೆಟ್​ನಲ್ಲಿ ಪ್ರಗತಿಗೆ ಸರ್ಪ¤ ಸೂತ್ರವಿದೆ. ಶತಮಾನದ ಹೊತ್ತಿಗೆ ಸಶಕ್ತ ಹಾಗೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಯಾಗಿ ರೂಪುಗೊಳ್ಳಲು ನೀಲಿನಕ್ಷೆ ಹಾಗೂ ಸ್ವಾತಂತ್ರ್ಯ ಅಮೃತ ಕಾಲದ ದೃಷ್ಟಿಕೋನ ಒಳಗೊಂಡಿರುವ ಬಜೆಟ್ ಎಂದು ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-24ರ ಆಯವ್ಯಯವನ್ನು ಸರ್ಕಾರ ಬಣ್ಣಿಸಿದೆ.

    ನಾಲ್ಕು ಪರಿವರ್ತನಾಶೀಲ ಅವಕಾಶಗಳ ಗತಿಯೊಂದಿಗೆ ಮೂರು ಆಯಾಮದ ಆದ್ಯತೆಗಳು ಅಮೃತ ಕಾಲದ ಬಜೆಟ್​ಗೆ ಬುನಾದಿಯಾಗಿವೆ ಎಂದು ಹೇಳಿಕೊಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಬಜೆಟ್ ಗಾತ್ರ 5.60 ಲಕ್ಷ ಕೋಟಿ ರೂ.ಗಳಷ್ಟು ಹಿಗ್ಗಿದೆ. ಮೂಲಸೌಕರ್ಯದ ಬಂಡವಾಳವನ್ನು ಶೇ.33ರಷ್ಟು ಹೆಚ್ಚಿಸಿ 10 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ. ಪಿಎಂ ಆವಾಸ್ ಯೋಜನೆಗೆ ಶೇ.66 ರಷ್ಟು ಅನುದಾನ ಹೆಚ್ಚಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ; ಯುವಜನರಿಗೆ ಅಮೃತ ಪೀಳಿಗೆ ಯೋಜನೆಯಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಕೌಶಲ ತರಬೇತಿ; ಮಧ್ಯಮ ವರ್ಗದ ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್; ಸಹಕಾರ ಕ್ಷೇತ್ರದ ಬಲವರ್ಧನೆಗೆ ಕ್ರಮ; ಮಹಿಳೆಯರು, ರೈತರಿಗೆ ಆದ್ಯತೆ- ಇವು ಬಜೆಟ್​ನ ಇನ್ನಷ್ಟು ಪ್ರಮುಖಾಂಶಗಳು.

    ಮಹಾನಗರಕ್ಕೆ ವಂದೇ ಮೆಟ್ರೋ: ಭಾರತೀಯ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಒದಗಿಸಲಾಗಿದ್ದು, ಇದು ಈವರೆಗಿನ ರೈಲ್ವೆ ಬಜೆಟ್​ನಲ್ಲಿ ಅತ್ಯಧಿಕ ಮೊತ್ತವಾಗಿದೆ. ಇದರಲ್ಲಿ 75 ಸಾವಿರ ಕೋಟಿ ರೂ. ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ಬಳಕೆಯಾಗಲಿದೆ. ಇನ್ನಾರು ತಿಂಗಳಲ್ಲಿ 75 ವಂದೇ ಭಾರತ್ ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿವೆ. ಮಹಾ ನಗರಗಳಿಗೆ ವಂದೇ ಮೆಟ್ರೋ ಆರಂಭಿಸಲಾಗುತ್ತಿದೆ. ವರ್ಷದ ಕೊನೆಗೆ ಭಾರತದಲ್ಲೇ ಬೋಗಿಗಳ ಉತ್ಪಾದನೆ ಆರಂಭ. ಬಹು ನಿರೀಕ್ಷಿತ ಹೈಡ್ರೋಜನ್ ರೈಲನ್ನು ಸಿದ್ಧಪಡಿಸುತ್ತಿದ್ದು, ವರ್ಷದ ಅಂತ್ಯದಲ್ಲಿ ಮೂರು ರೈಲು ಸೇವೆ ನೀಡಲಿವೆ. ಕಲ್ಲಿದ್ದಲು ಸಾಗಣೆಗೆ ಎನರ್ಜಿ ಕಾರಿಡಾರ್, ಬಂದರು ಸಂರ್ಪಸುವ ಸಾಗರ ಮಾಲಾ, ಬುಡಕಟ್ಟು ಜನರಿಗೆ ರೈಲು ಸೇವೆ ಕಲ್ಪಿಸುವ ಜನಜಾತಿ ಕಾರಿಡಾರ್, ಸಿಮೆಂಟ್ ಕಾರಿಡಾರ್, ಎಕನಾಮಿಕ್ ಸೋಷಿಯಲ್ ರೈಲ್ವೆ ಕಾರಿಡಾರ್ ಸ್ಥಾಪನೆ.

    ಅಮೃತ ಭಾರತ ಸಾಕಾರಕ್ಕೆ ನಿರ್ಮಲ ಸೂತ್ರಯುವ ಜೋಷ್​ಗೆ ಅಮೃತ ಪೀಳಿಗೆ: ನ್ಯಾಷನಲ್ ಅಪ್ರೆಂಟೀಸ್ ಸ್ಕೀಮ್ ಅನ್ವಯ 3 ವರ್ಷದಲ್ಲಿ 47 ಲಕ್ಷ ಯುವ ಜನರಿಗೆ ಉದ್ಯೋಗ ತರಬೇತಿಗೆ ಸ್ಟೈಪೆಂಡ್ ಒದಗಿಸಲು ಆರ್ಥಿಕ ನೆರವು; 5ಜಿ ಸೇವೆ ಬಳಸಿ ಅಪ್ಲಿಕೇಷನ್​ಗಳ ಅಭಿವೃದ್ಧಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 100 ಪ್ರಯೋಗಾಲಯಗಳು; 3 ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ; ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅನ್ವಯ ಕೋಡಿಂಗ್, ಕೃತಕ ಬುದ್ಧಿಮತ್ತೆ, ತ್ರಿಡಿ ಪ್ರಿಂಟಿಂಗ್ ಸೇರಿ ಅತ್ಯಾಧುನಿಕ ಕೌಶಲಗಳ ತರಬೇತಿ.

    ಮಹಿಳಾ ಸಮ್ಮಾನ ಯೋಜನೆ

    • ಮಹಿಳಾ ಸಮ್ಮಾನ ಉಳಿತಾಯ ಪತ್ರ- 2 ವರ್ಷದ ಅವಧಿಗೆ ಗರಿಷ್ಠ 2 ಲಕ್ಷ ರೂ.ವರೆಗಿನ ಠೇವಣಿಗೆ ಶೇ.7.5 ಬಡ್ಡಿದರದ ಯೋಜನೆ
    • ಮಹಿಳೆ ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿಗೆ ಅವಕಾಶ
    • 81 ಲಕ್ಷ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ಸಬಲೀಕರಣ

    ನರ್ಸಿಂಗ್ ಶಿಕ್ಷಣಕ್ಕೆ ಆದ್ಯತೆ: ದೇಶದಲ್ಲಿ 2014ರ ನಂತರ 157 ಹೊಸ ವೈದ್ಯ ಕಾಲೇಜು ಆರಂಭಿಸಲಾಗಿದ್ದು, ಇವುಗಳಲ್ಲಿ 157 ನರ್ಸಿಂಗ್ ಕಾಲೇಜು ಸ್ಥಾಪನೆ; 740 ಏಕಲವ್ಯ ಶಾಲೆಗಳಿಗೆ 3 ವರ್ಷಗಳಲ್ಲಿ 38,800 ಶಿಕ್ಷಕರ ನೇಮಕ; ಶಿಕ್ಷಕರ ತರಬೇತಿಗಾಗಿ ಜಿಲ್ಲಾಮಟ್ಟದ ಶಿಕ್ಷಣ ಹಾಗೂ ತರಬೇತಿ ಕೇಂದ್ರಗಳು ಶ್ರೇಷ್ಠತಾ ಕೇಂದ್ರಗಳಾಗಿ ಮೇಲ್ದರ್ಜೆಗೆ

    ಭದ್ರಾ ಮೇಲ್ದಂಡೆ ಯೋಜನೆಗೆ ಆರ್ಥಿಕ ಬಲ: ಬರ ಪ್ರದೇಶಕ್ಕೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ 5,300 ಕೋಟಿ ರೂ.ಗಳ ಅನುದಾನ ಪ್ರಕಟಿಸಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರಿನ ಹಲವು ಪ್ರದೇಶಗಳಿಗೆ ವರದಾನವಾಗಿರುವ ಯೋಜನೆ 367 ಕೆರೆಗಳಿಗೆ ನೀರು ತುಂಬಿಸಲಿದೆ. ರಾಜ್ಯದ ಒತ್ತಾಸೆಯಂತೆ ಕೇಂದ್ರವು ಇದನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿದರೆ 16 ಸಾವಿರ ಕೋಟಿ ರೂ.ವರೆಗೆ ನೆರವು ಸಿಗುವ ವಿಶ್ವಾಸವಿತ್ತು. ಯೋಜನೆಯ ಅಂದಾಜು ಮೊತ್ತ 21473.67 ಕೋಟಿ ರೂ.ಗಳಾಗದ್ದು, ಈವರೆಗೆ ಒಟ್ಟಾರೆ 6183.89 ಕೋಟಿ ರೂ. ವೆಚ್ಚವಾಗಿದೆ.

    ಹೊಸತು: ಮೇಕ್ ಎಐ ಇನ್ ಇಂಡಿಯಾ; ರಾಷ್ಟ್ರೀಯ ಡೇಟಾ ನಿರ್ವಹಣಾ ನೀತಿ; ಪಿಎಂ- ಮತ್ಸ್ಯ ಸಂಪತ್ತು ಯೋಜನೆ- 6000 ಕೋಟಿ ರೂ.; ಬಡ ಕೈದಿಗಳ ದಂಡ ಪಾವತಿಗೆ ನೆರವು; ಒಂದು ಲಕ್ಷ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಭಾರತ್ ಶ್ರೀ ಯೋಜನೆ; ಮೂಲಸೌಕರ್ಯ ಹಣಕಾಸು ಸಚಿವಾಲಯ ಸ್ಥಾಪನೆ; ಗೋಬರ್​ಧನ್ ಯೋಜನೆಯಡಿಯಲ್ಲಿ 200 ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೆ 10 ಸಾವಿರ ಕೋಟಿ ರೂ.; ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ.

    ಇಂಡಿಯಾ@100 ಪಯಣಕ್ಕೆ ದಿಕ್ಸೂಚಿ

    • ಸ್ತ್ರೀಯರ ಆರ್ಥಿಕ ಸಬಲೀಕರಣ
    • ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ
    • ಪ್ರವಾಸೋದ್ಯಮ ಅಭಿವೃದ್ಧಿ
    • ಸುಸ್ಥಿರ ಹಸಿರು ಪ್ರಗತಿ

    ಕೃಷಿ-ಖುಷಿ: ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳ; ಕೃಷಿ ಸಾಲದ ಮೇಲೆ ಶೇ.2 ಬಡ್ಡಿ ವಿನಾಯ್ತಿ; ‘ಕೃಷಿ ವೇಗವರ್ಧಕ ನಿಧಿ’ ಸ್ಥಾಪನೆ; ನೈಸರ್ಗಿಕ ಕೃಷಿ ಕೈಗೊಳ್ಳಲು ಒಂದು ಕೋಟಿ ರೈತರಿಗೆ ನೆರವು; ಭಾರತವನ್ನು ಸಿರಿಧಾನ್ಯದ ಜಾಗತಿಕ ಕೇಂದ್ರವಾಗಿಸಲು ಶ್ರೀ ಅನ್ನ ಯೋಜನೆ; ಪಂಚಾಯ್ತಿ ಮಟ್ಟದಲ್ಲಿ ಸಹಕಾರಿ,ಮೀನುಗಾರಿಕೆ ಸಂಘ ಸ್ಥಾಪನೆ.

    ಪ್ಯಾನ್ ನಂಬರ್ ಇನ್ನು ಡಿಜಿಟಲ್ ಗುರುತು

    • ಕೆವೈಸಿ ಪ್ರಕ್ರಿಯೆ ಸರಳೀಕರಣ
    • ಡಿಜಿಟಲ್ ವ್ಯವಸ್ಥೆಗಳಿಗಾಗಿ ಪಾನ್ ನಂಬರ್ ಅನ್ನು ಸಾಮಾನ್ಯ ಗುರುತಾಗಿ ಬಳಸಲಾಗುತ್ತದೆ

    ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಮೃತ ಕಾಲದ ಮೊದಲ ಬಜೆಟ್ ಭದ್ರ ಬುನಾದಿಯಾಗಲಿದೆ. ಆರ್ಥಿಕ ಪ್ರಗತಿಗೆ ಹೊಸ ಶಕ್ತಿ ನೀಡಿದೆ. ಸಮಾಜದ, ಕೃಷಿಕರ ಹಾಗೂ ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಈಡೇರಿಸಲಿದೆ. ಮಧ್ಯಮ ವರ್ಗದ ಸಶಕ್ತೀಕರಣಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಡಿಜಿಟಲ್ ಪಾವತಿಗಳ ಯಶಸ್ಸು ಕೃಷಿ ಕ್ಷೇತ್ರದಲ್ಲೂ ಉಂಟಾಗಬೇಕಿದೆ. ಮೂಲಸೌಕರ್ಯಗಳಿಗೆ ಒದಗಿಸಿರುವ 10 ಲಕ್ಷ ಕೋಟಿ ರೂ. ಅನುದಾನ ಪ್ರಗತಿಗೆ ಹೊಸ ಬಲ ನೀಡಲಿದೆ.

    | ನರೇಂದ್ರ ಮೋದಿ ಪ್ರಧಾನಿ

    ಕೇಂದ್ರದ ಬಜೆಟ್ ಅಭಿವೃದ್ಧಿ ಪರ. ಕೃಷಿ ಮತ್ತು ರೈತರಿಗೆ ಒತ್ತು ನೀಡಲಾಗಿದೆ. ಯುವಕರ ಕೈಗೆ ಉದ್ಯೋಗ ಕೊಡಲು ಅನುದಾನ ಇಟ್ಟಿದ್ದಾರೆ. ಕೈಗಾರಿಕೆ, ಮೂಲಸೌಕರ್ಯ, ರೈಲ್ವೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿದ್ದು ಮಧ್ಯ ಕರ್ನಾಟಕಕ್ಕೆ ದೊಡ್ಡ ಕೊಡುಗೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೊಷಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನ್ನಡಿಗರ ಪರವಾಗಿ, ವಿಶೇಷವಾಗಿ ಮಧ್ಯ ಕರ್ನಾಟಕದ ಪರವಾಗಿ ಕೃತಜ್ಞತೆಗಳು.

    | ಬಸವರಾಜ ಬೊಮ್ಮಾಯಿ ಸಿಎಂ

    ಪ್ರಗತಿಗೆ ಸಪ್ತ ಮಂತ್ರ

    1. ಕೊನೇ ಹಂತಕ್ಕೂ ಪ್ರಯೋಜನ
    2. ಮೂಲಸೌಕರ್ಯ, ಬಂಡವಾಳ
    3. ಸಮಗ್ರ ಅಭಿವೃದ್ಧಿ
    4. ಸಾಮರ್ಥ್ಯ ಅನಾವರಣ
    5. ಯುವ ಶಕ್ತಿ
    6. ಹಸಿರು ಪ್ರಗತಿ
    7. ಹಣಕಾಸು ವಲಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts