More

    ಸಿಮೆಂಟ್ ತಯಾರಿಕೆಗೆ ಇಂಧನವಾದ ಪ್ಲಾಸ್ಟಿಕ್!

    | ಜಗದೀಶ ಹೊಂಬಳಿ ಬೆಳಗಾವಿ

    ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಕೊಳೆಯುವುದಿಲ್ಲ. ಇನ್ನು, ಅದನ್ನು ಸುಟ್ಟರೆ ಪರಿಸರಕ್ಕೆ ಹಾನಿ. ಹಾಗಾದರೆ ಪ್ಲಾಸ್ಟಿಕ್ ತ್ಯಾಜ್ಯವೆಂಬ ‘ಭೂತ’ ನಾಶ ಮಾಡುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಸಕ್ತಿ ತಾಳಿರುವ ಸರ್ಕಾರ, ಪರಿಸರಕ್ಕೆ ಧಕ್ಕೆಯಾಗದಂತೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಹೊಸ ಕ್ರಮಕ್ಕೆ ಮುಂದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವು ಸಿಮೆಂಟ್ ಫ್ಯಾಕ್ಟರಿಗಳ ಇಂಧನವಾಗಿ ಬಳಕೆಯಾಗಲಿದ್ದು, ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

    ಘನತ್ಯಾಜ್ಯ ವಿಲೇವಾರಿ 2016ರ ನಿಯಮದನ್ವಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 2019ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ, ಸಿಮೆಂಟ್ ಫ್ಯಾಕ್ಟರಿ ಹಾಗೂ ಇತರ ಫ್ಯಾಕ್ಟರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಅಲ್ಲದೆ, ಸಿಮೆಂಟ್ ಫ್ಯಾಕ್ಟರಿಗಳೂ ಪಾಲಿಕೆಯಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯ ಪಡೆಯುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈಗ ಸಿಮೆಂಟ್ ಫ್ಯಾಕ್ಟರಿ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

    30 ಟನ್ ತ್ಯಾಜ್ಯ ಪೂರೈಕೆ: ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಜೆ.ಕೆ. ಸಿಮೆಂಟ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ 30 ಟನ್ ಪ್ಲಾಸ್ಟಿಕ್ ತ್ಯಾಜ್ಯ ಅವರಿಗೆ ಪೂರೈಸಲಾಗಿದೆ. ಈ ಮಹಾತ್ವಾಕಾಂಕ್ಷಿ ಯೋಜನೆಯಿಂದ ಪರಿಸರ ಮಾಲಿನ್ಯ ಕೊಂಚ ತಡೆಗಟ್ಟಬಹುದು. ಜತೆಗೆ ಪಾಲಿಕೆ ಅಧಿಕಾರಿಗಳಿಗೆ ಪ್ಲಾಸ್ಟಿಕ್ ಮಹಾಮಾರಿ ವಿಲೇವಾರಿಯ ತಲೆನೋವೂ ಕಡಿಮೆಯಾಗಲಿದೆ. ಸಿಮೆಂಟ್ ಫ್ಯಾಕ್ಟರಿಗಳಿಗೂ ಪ್ಲಾಸ್ಟಿಕ್ ತ್ಯಾಜ್ಯ ಪರ್ಯಾಯ ಇಂಧನವಾಗಲಿದೆ.

    ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಹೇಗೆ?

    ಮಹಾನಗರ ಪಾಲಿಕೆಗಳು 30 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿಟ್ಟುಕೊಳ್ಳಬೇಕು. ಫ್ಯಾಕ್ಟರಿಗಳ ಸಿಬ್ಬಂದಿಯೇ ಪಾಲಿಕೆ ಕಸ ಸಂಗ್ರಹಿಸಿಡುವ ಸ್ಥಳಕ್ಕೆ ಬಂದು ಸ್ವಂತ ಖರ್ಚಿನಲ್ಲಿ ಒಯ್ಯುತ್ತಾರೆ. ಆದರಲ್ಲಿ ಪಾಲಿಕೆ ಯಾವುದೇ ವ್ಯವಹಾರವಾಗಲಿ, ಆದಾಯದ ಅಪೇಕ್ಷೆಯನ್ನಾಗಲಿ ಇಟ್ಟುಕೊಂಡಿಲ್ಲ. ಸಿಮೆಂಟ್ ಫ್ಯಾಕ್ಟರಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವನ್ನಾಗಿ ಮಾರ್ಪಡಿಸಿಕೊಳ್ಳಲು ಪ್ರತ್ಯೇಕ ಘಟಕ ನಿರ್ಮಿಸಿಕೊಳ್ಳುತ್ತಿವೆ. ಪರಿಸರಕ್ಕೆ ಹಾನಿಯಾಗದಂತೆ ಪ್ಲಾಸ್ಟಿಕ್ ಬರುಬಳಕೆ ಪ್ರಕ್ರಿಯೆ ನಡೆಯಲಿದೆ.


    ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಗೂ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಲು ಬೆಳಗಾವಿ ಮಹಾನಗರ ಪಾಲಿಕೆಯು ಸಿಮೆಂಟ್ ಫ್ಯಾಕ್ಟರಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಇನ್ನು ಫ್ಯಾಕ್ಟರಿಗಳಿಗೆ ಇಂಧನವಾಗಿ ಮರುಬಳಕೆಯಾಗಲಿರುವುದರಿಂದ ನಗರ-ಪಟ್ಟಣಗಳಲ್ಲಿ ತೊಡಕಾಗಿದ್ದ ಕಸ ವಿಲೇವಾರಿ ಸಮಸ್ಯೆಗೂ ತಕ್ಕ ಪರಿಹಾರ ಸಿಕ್ಕಂತಾಗುತ್ತದೆ.
    | ಕೆ.ಎಚ್. ಜಗದೀಶ. ಆಯುಕ್ತ ಮಹಾನಗರ ಪಾಲಿಕೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts