More

    ನಗೆಪಾಟಲಾಗುತ್ತಿರುವ ಸಿಡಿ ಪ್ರಕರಣ : ಯಾರಿಗೆ ಮುಳುವಾಗುತ್ತೋ ಗೊತ್ತಿಲ್ಲ ಎಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

    ಕೈಲಾಂಚ : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ಪ್ರಕರಣ ಸಾರ್ವಜನಿಕರ
    ನಗೆಪಾಟಲಿಗೆ ಕಾರಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ರೇಣುಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

    ಸಿಡಿ ಪ್ರಕರಣ ಧಾರಾವಾಹಿ ರೀತಿ ಸಾಗುತ್ತಿದೆ. ಅಂತಿಮವಾಗಿ ಇದು ಯಾರಿಗೆ ಮುಳುವಾಗುತ್ತದೋ ಗೊತ್ತಿಲ್ಲ. ರಾಜ್ಯದಲ್ಲಿ ಗಮನಹರಿಸಲು ನಾನಾ ಸಮಸ್ಯೆಗಳಿದ್ದು, ಇಂತಹ ಘಟನೆಗಳಿಂದ ವೈಯಕ್ತಿಕ ಲಾಭ ಮಾಡಿಕೊಳ್ಳುವ ಸಣ್ಣತನ ನಮ್ಮಲ್ಲಿಲ್ಲ. ದೇವೇಗೌಡರ 60 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ರಾಜಕೀಯವನ್ನು ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

    ಪ್ರಕರಣದ ಮಹಾನ್ ನಾಯಕ ಯಾರು ಎಂದು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗುತ್ತಿರುವುದು ಏಕೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಶಿವಕುಮಾರ್ ಅವರೇ ಹೇಳಬೇಕಿದೆ ಎಂದರು.
    ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಅತಿಥಿಗೃಹ ಕಟ್ಟಡದ ಉದ್ಘಾಟನಾ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಪಾಂಡುರಂಗ, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ, ಗ್ರಾಪಂ ಉಪಾಧ್ಯಕ್ಷೆ ಸಾಧನಾ, ಜೆಡಿಎಸ್ ಮುಖಂಡರಾದ ಶಿವಲಿಂಗಯ್ಯ, ಗುನ್ನೂರು ದೇವರಾಜು, ಗೋಪಾಲನಾಯ್ಕ, ನಂದೀಶ್‌ಗೌಡ, ದೊರೆಸ್ವಾಮಿ, ಎಚ್.ಎಸ್.ದೇವರಾಜು, ಭೈರಪ್ಪ, ಅಶ್ವಥ್, ಚಲುವರಾಜು, ನಾಗರಾಜು, ಮುಂತಾದವರಿದ್ದರು.

     

    ಡಿಕೆಶಿಗೆ ಟಾಂಗ್ :  ರಾಮನಗರ ಜೆಡಿಎಸ್ ಭದ್ರಕೋಟೆ. ಅದನ್ನು ಭೇದಿಸಲು ಸಾಧ್ಯವಿಲ್ಲ. ಈ ಹಿಂದೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಪರಿಣಾಮ ಜೆಡಿಎಸ್‌ಗೆ ಹಿನ್ನಡೆಯಾಗಿದೆ. ರಾಮನಗರಕ್ಕೆ ನಾನು, ನಮ್ಮ ತಂದೆ ಬಂದಾಗ ಕಾಂಗ್ರೆಸ್‌ನವರು ಮನೆ ಸೇರಿದ್ದರು. ಈಗ ಭದ್ರಕೋಟೆಯ ಗೋಡೆಯನ್ನು ಅಲುಗಾಡಿಸಲು ಯತ್ನಿಸುತ್ತಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನ ಕೋಟೆಗೆ ಕಿಂಡಿ ಮೂಲಕ ಹೈದರಾಲಿ ಸೈನಿಕರು ನುಗ್ಗಿದ್ದರು. ಅದೇ ರೀತಿ ರಾಮನಗರದಲ್ಲೂ ಕಾಂಗ್ರೆಸ್‌ನವರು ನನ್ನ ಕೋಟೆಗೆ ನುಗ್ಗಿದ್ದಾರೆ. ಅದು ಈಗಷ್ಟೇ ಪ್ರಾರಂಭವಾಗಿದೆ. ರೈತರ ಸಾಲ ಮನ್ನಾ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆಂಬ ಸಮಾಧಾನ ನನ್ನಲ್ಲಿದೆ. ಜೆಡಿಎಸ್‌ನ ಯಾವ ಮುಖಂಡ, ಶಾಸಕರನ್ನು ಸೆಳೆದರೂ ಪರವಾಗಿಲ್ಲ. ಸಾಮಾನ್ಯ ಕಾರ್ಯಕರ್ತರನ್ನು ಅಲುಗಾಡಿಸಲು ಸಾಧ್ಯವಿಲ್ಲ. ದೊಡ್ಡ ನಾಯಕರನ್ನು ಸೆಳೆಯಬಹುದು. ಅಂತಹ ದೊಡ್ಡ ನಾಯಕರನ್ನು ಬೆಳೆಸೋರು ಸಾಮಾನ್ಯ ಕಾರ್ಯಕರ್ತರು. ಎಷ್ಟೇ ಜನ ಹೋದರೂ ಜೆಡಿಎಸ್ ಬಲವಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಕುಮಾರಸ್ವಾಮಿ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts